ನ್ಯೂಸ್

ಕರ್ನಾಟಕದಲ್ಲಿ ನಾನು ಭಿಕ್ಷುಕಿ, ಎಲ್ಲಾದಕ್ಕೂ ಭಿಕ್ಷೆ ಬೇಡ್ಲೇಬೇಕಿದೆ... ನನ್ನ ಸಮಾಧಿ ಇಲ್ಲೇ ಆಗಬೇಕು ಎಂದ ನಟಿ ವಿಜಯಲಕ್ಷ್ಮಿ

ಬೆಂಗಳೂರು: ಕೆಲ ದಿನಗಳಿಂದ ನಟಿ ವಿಜಯಲಕ್ಷ್ಮಿ ಭಾರಿ ಸುದ್ದಿಯಲ್ಲಿದ್ದಾರೆ. ಫೇಸ್‌ಬುಕ್‌ ಲೈವ್‌ನಲ್ಲಿ ಬಂದು ತಮ್ಮ ಗೋಳು ತೋಡಿಕೊಳ್ಳುತ್ತಿದ್ದ ನಟಿ ಇಂದು ಪತ್ರಿಕಾಗೋಷ್ಠಿ ಮಾಡಿ ಕೆಲವು ಮಾಹಿತಿ ನೀಡಿದ್ದಾರೆ.

ಮೊನ್ನೆಯಷ್ಟೇ ಇವರ ತಾಯಿ ತೀರಿಕೊಂಡಿದ್ದರು. ಅದರ ಬೆನ್ನಲ್ಲೇ ನಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಕನ್ನಡ ಚಿತ್ರರಂಗ ತಮ್ಮ ಸಹಾಯಕ್ಕೆ ಬರಲಿಲ್ಲ, ಜನರು ನನ್ನ ಬಗ್ಗೆ ತಾತ್ಸಾರ ತೋರುತ್ತಿದ್ದಾರೆ ಎಂದೆಲ್ಲಾ ಇಷ್ಟು ದಿನ ಆರೋಪ ಮಾಡಿದ್ದ ನಟಿ ಇದೀಗ ತಮಗೆ ಎಲ್ಲರೂ ಸಹಕಾರ ಕೊಟ್ಟಿದ್ದಾರೆ ಎಂದು ನುಡಿದಿದ್ದಾರೆ.

ಮೊನ್ನೆ ಅಮ್ಮ ಮೃತಪಟ್ಟ ಮೇಲೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಅಳೋದು ಬಿಟ್ಟು ಬೇರೇನೂ ಗೊತ್ತಾಗಲಿಲ್ಲ. ಅನೇಕ ಮಂದಿ ನನ್ನ ನೆರವಿಗೆ ಬಂದರು. ಕನ್ನಡ ಚಿತ್ರರಂಗ ನನ್ನ ಸಹಾಯಕ್ಕೆ ನಿಂತಿಲ್ಲ ಎಂದು ನನ್ನ ಪರ ವಕೀಲ ಜಗದೀಶ್‌ ತಪ್ಪಾಗಿ ಮಾತನಾಡಿದ್ದು ನಾನು ಕ್ಷಮೆ ಕೋರುತ್ತೇನೆ ಎಂದರು. ಕಲಾವಿದರು ಎಲ್ಲ ಒಂದೇ ಕುಟುಂಬ. ಶಿವಣ್ಣ, ಯಶ್ ಹತ್ರನೂ ಮಾತನಾಡಿದ್ದೀನಿ, ಜಗದೀಶ್ ಮಾತನಾಡಿದ್ದು ಸ್ವಲ್ಪ ತಪ್ಪಾಗಿದೆ ಎಂದೂ ಹೇಳಿದರು.

ಇದೇ ವೇಳೆ ಸದ್ಯ ನಾನು ಕರ್ನಾಟಕದಲ್ಲಿ ಭಿಕ್ಷುಕಿನೇ. ಎಲ್ಲದ್ದಕ್ಕೂ ಭಿಕ್ಷೆ ಬೇಡುವ ಸ್ಥಿತಿ ಉಂಟಾಗಿದೆ. ನಾನು ಅನಾಥೆ. ನನಗಿಲ್ಲಿ ಯಾರೂ ಇಲ್ಲ. ನಾನು ಸತ್ತರೆ ನನ್ನ ಸಮಾಧಿ ಕರ್ನಾಟಕದಲ್ಲಿಯೇ ಆಗಬೇಕು ಎಂದು ಚೆನ್ನೈ ಮೂಲದ ಈ ನಟಿ ನುಡಿದರು.

ಈ ಮೊದಲು ಭಿಕ್ಷೆ ಅಂತ ಆದರೂ ತಿಳಿದುಕೊಂಡು ಸಹಾಯ ಮಾಡಿ ಎಂದಿದ್ದರು. ಜನರು ಹಣವನ್ನು ನೀಡಿದ್ದು ಅದು ಸುಮಾರು 6 ಲಕ್ಷ ರೂಪಾಯಿ ದಾಟಿದೆ. ಈ ಬಗ್ಗೆ ಕರ್ನಾಟಕದ ಜನರಿಗೆ ವಿಜಯಲಕ್ಷ್ಮಿ ಧನ್ಯವಾದ ಸಲ್ಲಿಸಿದ್ದಾರೆ. ಆದರೆ ಇಷ್ಟೊಂದು ದೊಡ್ಡ ಮೊತ್ತದ ಹಣ ನಾನು ನೋಡಿರಲಿಲ್ಲ. ಸದ್ಯ ಈ ಹಣ ನನಗೆ ಬೇಡ ಎಂದಿದ್ದಾರೆ.