ಮುಂಬೈ: ಬಹು ಕುತೂಹಲ ಕೆರಳಿಸಿದ್ದ ಹಿಂದಿನ ಬಿಗ್‌ಬಾಸ್ ಸೀಸನ್ 15 ಮುಕ್ತಾಯಗೊಂಡಿದೆ. ಅಂತಿಮವಾಗಿ ಇದ್ದ ಐದು ಜನ ಸ್ಪರ್ಧಿಗಳಲ್ಲಿ ಗೆಲುವು ಯಾರದ್ದು ಎಂಬ ಬಗ್ಗೆ ಬಹಳ ಕುತೂಹಲವಿತ್ತು. ಕೊನೆಗೂ ನಟಿ ತೇಜಸ್ವಿ ಪ್ರಕಾಶ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.
ಫಿನಾಲೆಯಲ್ಲಿ ಸ್ಪರ್ಧಿಸುತ್ತಿದ್ದ ನಟಿ ಶಿಲ್ಪಾ ಶೆಟ್ಟಿ ಸಹೋದರಿ ನಟಿ ಶಮಿತಾ ಶೆಟ್ಟಿಯನ್ನು ಆಂಟಿ ಎಂದು ಕರೆಯುವ ಮೂಲಕ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದ್ದ ತೇಜಸ್ವಿ ಕೊನೆಗೂ ಬಿಗ್‌ಬಾಸ್ ವಿನ್ನರ್ ಆಗಿದ್ದಾರೆ. ‘ಸ್ವರಾಗಿಣಿ’ ಹಿಂದಿ ಕಿರುತೆರೆ ಧಾರಾವಾಹಿಯ ಮೂಲಕ ಮನೆಮಾತಾಗಿರುವ ತೇಜಸ್ವಿಗೆ ಈ ಪಟ್ಟ ಒಲಿದಿದೆ.
ಅಂತಿಮ ಕ್ಷಣದಲ್ಲಿ ನಟ, ಮಾಡೆಲ್ ಪ್ರತೀಕ್ ಸೆಹಜ್ಪಾಲ್ರನ್ನು ಸೋಲಿಸಿದ್ದಾರೆ ತೇಜಸ್ವಿ. ತೇಜಸ್ವಿ ಅವರಿಗೆ ಬಿಗ್ ಬಾಸ್ ಟ್ರೋಫಿ ಜೊತೆ 40 ಲಕ್ಷ ನಗದು ಬಹುಮಾನ ಸಿಕ್ಕಿದೆ.
ಸೆಹಜ್‌ಪಾಲ್ ಮೊದಲ ರನ್ನರ್ ಅಪ್ ಆಗಿದ್ದರೆ, ಪ್ರಕಾಶ್ ಅವರ ನಟ - ಗೆಳೆಯ ಕರಣ್ ಕುಂದ್ರಾ ಮೂರನೇ ಸ್ಥಾನ ಪಡೆದರು. ಶಮಿತಾ ಶೆಟ್ಟಿ ನಾಲ್ಕನೇ ಸ್ಥಾನ ಗಳಿಸಿದರೆ, ನೃತ್ಯ ನಿರ್ದೇಶಕ ನಿಶಾಂತ್ ಭಟ್ ಫಿನಾಲೆ ರೇಸ್‌ನಿಂದ ಹೊರಗುಳಿದು 10 ಲಕ್ಷ ರೂಪಾಯಿ ಪಡೆದು ಐದನೇ ಸ್ಥಾನ ಪಡೆದರು.
28 ವರ್ಷದ ತೇಜಸ್ವಿ, 42 ವರ್ಷದ ಶಮಿತಾ ಅವರನ್ನು ಬಿಗ್‌ಬಾಸ್ ಮನೆಯೊಳಕ್ಕೆ ಆಂಟಿ ಎಂದು ಕರೆದಿದ್ದರು. ಇದು ಶಮಿತಾ ಅವರನ್ನು ಬಹಳ ಕೆರಳಿಸಿತ್ತು. ನಂತರ ಈ ಗಲಾಟೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿತ್ತು.