ನ್ಯೂಸ್

‘ಕಿರಾತಕ’ ಬೆಡಗಿ ಓವಿಯಾಳನ್ನು ಓಡಿ ಹೋದವರ ಲಿಸ್ಟ್‌ಗೆ ಸೇರಿಸಿದ ಯೂಟ್ಯೂಬರ್‌: ನಟಿ ಗರಂ

ಬೆಂಗಳೂರು: ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಾಲಿವುಡ್‌ ನಟಿ ಓವಿಯಾ ‘ಕಿರಾತಕ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ತಾರೆ. ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಮೂಲಕ ಇವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಇತ್ತೀಚೆಗಷ್ಟೇ ಗೋ ಬ್ಯಾಕ್​ ಮೋದಿ ಹ್ಯಾಷ್​ಟ್ಯಾಗ್​ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟಿಯೀಗ ಯೂಟ್ಯೂಬರ್‌ ಒಬ್ಬರ ವಿರುದ್ಧ ಗರಂ ಆಗಿದ್ದಾರೆ. ಇದಕ್ಕೆ ಕಾರಣ, ನಟಿಯನ್ನು ಓಡಿಹೋದವರ ಲಿಸ್ಟ್‌ಗೆ ಸೇರಿಸಿದ್ದು!

ಅಷ್ಟಕ್ಕೂ ಆಗಿದ್ದೇನೆಂದರೆ, ಯೂಟ್ಯೂಬರ್‌ ಹಾಗೂ ನಟ ಬಯಿಲ್ವನ್ ರಂಗನಾಥನ್ ಎಂಬುವವರು ಅನೇಕ ನಟಿಯರ ಖಾಸಗಿ ಜೀವನ, ಚಿತ್ರರಂಗದಲ್ಲಿ ಸೋಲು-ಗೆಲುವು ಬಗ್ಗೆ ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಅದಕ್ಕೆ ಅವರು ನೀಡಿರುವ ಟೈಟಲ್‌ ‘ಕಿರುಕುಳದಿಂದ ಚಿತ್ರರಂಗದಿಂದ ಓಡಿಹೋದವರು’ ಎಂದು. ಅದರಲ್ಲಿ ಓವಿಯಾ ಸೇರಿದಂತೆ ನಟಿಯರಾದ ಸದಾ, ಸಂಧ್ಯಾ, ಅಭಿರಾಮಿ, ಸುನೈನಾ, ಪೂಜಾ, ಸೋನಿಯಾ ಅಗರ್‌ವಾಲ್ ಮುಂತಾದವರ ಪರಿಚಯವಿದೆ.

ಈ ವಿಡಿಯೋದಲ್ಲಿ ನಟಿಯರ ಖಾಸಗಿ ಜೀವನ, ಹವ್ಯಾಸ, ದೇಹದ ಆಕಾರದ ಬಗ್ಗೆ ಈ ವಿಡಿಯೋಗಳು ಇವೆ. ಇದು ಓವಿಯಾ ಅವರನ್ನು ಕೆರಳಿಸಿದೆ. ಇದಕ್ಕಾಗಿ #WomensRights ಮೂಲಕ ಬಯಿಲ್ವನ್ ರಂಗನಾಥನ್ ಅವರನ್ನು ಓವಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. "ಲೈಂಗಿಕವಲ್ಲದ ದೌರ್ಜನ್ಯ ಅಂದರೆ ಇದು" ಎಂದಿದ್ದಾರೆ. "ಈ ಮನುಷ್ಯ ಶಾಶ್ವತವಾಗಿ ಹೀಗೆ ಇರುತ್ತಾನೆ. ಅವನಂತೆಯೇ ಇರುವ ಪ್ರೇಕ್ಷಕರಿಂದ ಈ ಮಟ್ಟಕ್ಕೆ ಏರಿದ್ದಾನೆ" ಎಂದು ಟ್ವೀಟ್‌ನಲ್ಲಿ ಓವಿಯಾ ತಿಳಿಸಿದ್ದಾರೆ.

ಓವಿಯಾ ಟ್ವೀಟ್‌ಗೆ ಹಲವಾರು ಕಮೆಂಟ್‌ಗಳು ಬರುತ್ತಿದ್ದು, ಅನೇಕ ಮಂದಿ ಬೆಂಬಲಿಸಿದ್ದಾರೆ. ಇದೀಗ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.