ನ್ಯೂಸ್

ನನ್ನ ಬೆತ್ತಲೆ ಫೋಟೋ ತಿರುಚಲಾಗಿದೆ, ಆ ಪಾರ್ಟ್​ ನನ್ನದಲ್ಲ- ಪೊಲೀಸರ ಮುಂದೆ ನಟ ರಣವೀರ್​ ಸಿಂಗ್​ ಹೇಳಿಕೆ...

ಮುಂಬೈ: 'ನಟಿಯರಷ್ಟೇ ಅಂಗಾಂಗ ತೋರಿಸುವುದ್ಯಾಕೆ? ನಾನೂ ಒಂದು ಹೆಜ್ಜೆ ಮುಂದೆ ಹೋಗುತ್ತೇನೆ' ಎಂದು ಸಂಪೂರ್ಣವಾಗಿ ಬೆತ್ತಲಾಗಿ ಮ್ಯಾಗಜೀನ್​ ಒಂದಕ್ಕೆ ಫೋಟೋ ಶೂಟ್​ ಮಾಡಿಸಿಕೊಂಡು ಭಾರಿ ವಿವಾದಕ್ಕೆ ಗುರಿಯಾಗಿರುವ ನಟ ಬಾಲಿವುಡ್​ ನಟ ರಣವೀರ್​ ಸಿಂಗ್​ ಇದೀಗ ಪೊಲೀಸರ ಎದುರಿಗೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.

ಸಂಪೂರ್ಣ ಬೆತ್ತಲಾದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಅವರು ಪೋಸ್ಟ್ ಮಾಡಿ ಪೇಚಿಗೆ ಸಿಲುಕಿದ್ದಾರೆ. ಈ ಫೋಟೋ ಭಾರಿ ವೈರಲ್​ ಆಗುತ್ತಲೇ ಇದು ಹಲವು ಮಹಿಳಾಮಣಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಇವರ ವಿರುದ್ಧ ಮುಂಬೈ ಪೊಲೀಸರಲ್ಲಿ ಕೇಸ್ ಕೂಡ ದಾಖಲಾಗಿದೆ.

ಮಹಿಳೆಯರ ಭಾವನೆಗೆ ಧಕ್ಕೆಯಾಗಿರುವ ಆರೋಪದಡಿ ರಣವೀರ್​ ವಿರುದ್ಧ ಮುಂಬೈ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್​ 509, 294 ಮತ್ತು ಐಟಿ ಕಾಯ್ದೆ 67 ಎ ಸೆಕ್ಷನ್​ ಅಡಿಯಲ್ಲಿ ಮುಂಬೈನ ಚೆಂಬೂರ್​ ಠಾಣಾ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರಿಂದ ರಣವೀರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಟ ಸ್ಪಷ್ಟನೆ ಕೊಟ್ಟಿದ್ದು, ತಮ್ಮ ಫೋಟೋ ತಿರುಚಲಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರ ಎದುರು ಸ್ಪಷ್ಟನೆ ನೀಡಿರುವ ನಟ, "ನಾನು ಯಾವುದೇ ಫೋಟೋದಲ್ಲಿ ಖಾಸಗಿ ಅಂಗ ಕಾಣಿಸಲಿಲ್ಲ. ನನ್ನ ಫೋಟೋ ತಿರುಚಲಾಗಿದೆ. ಆ ಫೋಟೋದಲ್ಲಿ ಕಾಣಿಸುತ್ತಿರುವ ಆ ಪಾರ್ಟ್​ ನನ್ನದಲ್ಲ. ಮೂಲ ಫೋಟೋ ನಾನು ತೋರಿಸಲು ಸಿದ್ಧ" ಎಂದಿದ್ದಾರೆ. ನಟ ಹೇಳಿರುವ ಪ್ರಕಾರ, ನಗ್ನವಾಗಿ ಫೋಟೋಶೂಟ್​ ಮಾಡಿಸಿಕೊಂಡಿದ್ದರೂ ಖಾಸಗಿ ಅಂಗಗಳನ್ನು ಅವರು ಪ್ರದರ್ಶಿಸಿರಲಿಲ್ಲ. ಖಾಸಗಿ ಅಂಗಕ್ಕೆ ಕೈ ಅಡ್ಡಲಾಗಿ ಹಿಡಿದು ಫೋಟೋಶೂಟ್​ ಮಾಡಿಸಲಾಗಿತ್ತು. ಆದರೆ ಈ ಪೈಕಿ ಅವರ ಒಂದು ಫೋಟೋದಲ್ಲಿ ಖಾಸಗಿ ಅಂಗ ಸ್ಪಷ್ಟವಾಗಿ ಕಾಣಿಸುವಂತೆ ಫೋಟೋ ತಿರುಚಿ ಅದನ್ನು ವೈರಲ್​ ಮಾಡಲಾಗಿದೆ ಎನ್ನುವುದು.

ಈ ಹಿನ್ನೆಲೆಯಲ್ಲಿ, ಅವರಿಗೆ ಕ್ಲೀನ್​ಚಿಟ್​ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. (ಏಜೆನ್ಸೀಸ್​​)