ನ್ಯೂಸ್

ಕಿಟ್ಸ್‌, ಸ್ಯಾನಿಟೈಸರ್‌ ಹೆಸರಿನಲ್ಲಿ ಹೂಡಿಕೆದಾರರಿಗೆ 141 ಕೋಟಿ ರೂ. ಪಂಗನಾಮ- ಪ್ರಸಿದ್ಧ ಕಿರುತೆರೆ ನಟ ಅರೆಸ್ಟ್‌

suchetana

ಮುಂಬೈ: ಪ್ರಸಿದ್ಧ ಕಿರುತೆರೆ ನಟನಾಗಿರುವ ಅನುಜ್‌ ಸಕ್ಸೇನಾ ಇದೀಗ ಪೊಲೀಸರ ಅತಿಥಿ. ಎಲ್ಡರ್‌ ಫಾರ್ಮಾಸ್ಯೂಟಿಕಲ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯೂ (ಸಿಒಒ) ಆಗಿರುವ ಸಕ್ಸೇನಾ ಗ್ರಾಹಕರಿಗೆ 141 ಕೋಟಿ ರೂಪಾಯಿ ಪಂಗನಾಮ ಹಾಕಿರುವ ಆರೋಪ ಎದುರಿಸುತ್ತಿದ್ದಾರೆ.

ಕಿಟ್‌ ಮತ್ತು ಸ್ಯಾನಿಟೈಸರ್‌ ತಯಾರಕಾ ಕಂಪೆನಿಯ ಸಿಒಒ ಇವರಾಗಿದ್ದು, ಭದ್ರತಾ ಠೇವಣಿ ಇಟ್ಟುಕೊಳ್ಳುವ ನೆಪದಲ್ಲಿ ಹಲವಾರು ಗ್ರಾಹಕರಿಗೆ ಮೋಸ ಮಾಡಿರುವ ಆರೋಪವಿದೆ. ಉತ್ತಮ ಬಡ್ಡಿ ಕೊಡುವ ನೆಪದಲ್ಲಿ 2012ರಲ್ಲಿ ಇವರು ಕೋಟ್ಯಂತರ ರೂಪಾಯಿ ಭದ್ರತಾ ಠೇವಣಿ ಇರಿಸಿಕೊಂಡಿದ್ದಾರೆ. ಈಗ ಅದು ಮೆಚ್ಯೂರ್‌ ಆಗಿದ್ದರೂ ಅಸಲೂ ಕೊಡದೇ ಬಡ್ಡಿಯನ್ನೂ ಕೊಟ್ಟಿಲ್ಲ ಎಂದು ಇವರ ವಿರುದ್ಧ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಬಂಧಿಸಿದೆ.

ಕೋವಿಡ್‌ನ ಈ ದಿನಗಳಲ್ಲಿ ಕಿಟ್‌ ಮತ್ತು ಸ್ಯಾನಿಟೈಸರ್‌ ಬಹು ಮುಖ್ಯವಾಗಿದ್ದು, ತಮ್ಮನ್ನು ಬಂಧಿಸುವುದು ಸರಿಯಲ್ಲ ಎಂದು ಸಕ್ಸೇನಾ ವಾದಿಸಿದ್ದರು. ಅದರೆ ಈ ವಾದವನ್ನು ಕೋರ್ಟ್‌ ಕೂಡ ಮಾನ್ಯ ಮಾಡದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಈ ಹಿಂದೆ ಕೂಡ ಇವರ ವಿರುದ್ಧ ಕೆಲವು ಆರೋಪಗಳು ಕೇಳಿಬಂದಿದ್ದು, ಇದೀಗ ಭಯಾನಕ ಸ್ವರೂಪದ ಆರೋಪ ಇರುವುದಾಗಿ ಪೊಲೀಸರು ಹೇಳಿದ್ದಾರೆ. ಮೋಸ, ಪಿತೂರಿ ಮತ್ತು ಮಹಾರಾಷ್ಟ್ರ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡಿಪಾಸಿಟರ್ ಆಕ್ಟ್, 1999 ಅಡಿ ಸಕ್ಸೇನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.