ನವದೆಹಲಿ: ಸಾಫ್ಟ್ವೇರ್ ಇಂಜಿನಿಯರ್ನನ್ನು ನಂಬಿಕೊಂಡು ಎಂಟು ವರ್ಷಗಳಲ್ಲಿ 14 ಬಾರಿ ಗರ್ಭಪಾತ ಮಾಡಿಸಿಕೊಂಡಿರೋ ಮಹಿಳೆಯೊಬ್ಬರು ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ಆಗ್ನೇಯ ದೆಹಲಿಯ ಜೈತ್‌ಪುರನಲ್ಲಿ ನಡೆದಿದೆ.
ಗಂಡನಿಂದ ದೂರವಾದ ಮಹಿಳೆಯೊಬ್ಬಳು ಟೆಕ್ಕಿಯ ಪ್ರೀತಿಯ ಬಲೆಗೆ ಬಿದ್ದು ಇದೀಗ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾಗುವುದಾಗಿ ಆತ ನಂಬಿಸಿದ ಹಿನ್ನೆಲೆಯಲ್ಲಿ ದೈಹಿಕ ಸಂಪರ್ಕ ಬೆಳೆಸಿ ಎಂಟು ವರ್ಷಗಳಲ್ಲಿ 14 ಬಾರಿ ಗರ್ಭಪಾತ ಮಾಡಿಸಿಕೊಂಡಿರುವುದಾಗಿ ಡೆತ್ನೋಟ್ನಲ್ಲಿ ಆಕೆ ಬರೆದಿದ್ದಾರೆ.
ನೋಯ್ಡಾದ ಸಾಫ್ಟ್ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್ ಜತೆ ತಾನು ಸಂಬಂಧ ಹೊಂದಿರುವುದಾಗಿ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಮದುವೆಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆತನ ಜತೆ ಲಿವ್ ಇನ್ನಲ್ಲಿ ಇದ್ದೆ. ಈ ಸಮಯದಲ್ಲಿ ದೈಹಿಕ ಸಂಪರ್ಕ ಬೆಳೆಸಿ ನನಗೆ ಮೋಸ ಮಾಡಿದ್ದಾನೆ. ಇದೀಗ 14ನೇ ಬಾರಿ ಗರ್ಭ ಧರಿಸಿದ್ದೆ. ಅದನ್ನೂ ತೆಗೆಸುವಂತೆ ಹೇಳಿದ. ಅದನ್ನು ತೆಗೆಸಿದ ಮೇಲೆ ನನಗೆ ಜೀವನವೇ ಬೇಡವಾಗಿದೆ. ಈ ಪರಿಯ ಗರ್ಭಪಾತ ಮಾಡಿಸಿಕೊಂಡು ಬದುಕುವುದು ನನಗೆ ಕಷ್ಟವಾಗಿದೆ. ಆತ ನನ್ನನ್ನು ಮದುವೆಯಾಗುವ ಸಂದೇಹ ಉಂಟಾಗಿದೆ. ಇಂಥ ಜನ್ಮಕ್ಕಿಂತ ಸಾಯುವುದೇ ಮೇಲು ಎಂದು ಮಹಿಳೆ ಬರೆದಿದ್ದಾರೆ.
ಆರೋಪಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಹುಟುಕಾಟ ನಡೆಸಿದ್ದಾರೆ. ಆರೋಪಿ ಹಾಗೂ ಸಂತ್ರಸ್ತೆಯ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಲಿಲ್ಲ.
ಬಿಹಾರದ ಮುಜಾಫರ್‌ಪುರದಲ್ಲಿ ನೆಲೆಸಿರುವ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.