ಸೆಡಾಲಿಯ, ಮಿಸ್ಸೌರಿ: ಮನೆಯಲ್ಲಿ ಆಡುತ್ತಿದ್ದ ಮಗುವೊಂದು ತನ್ನ ಕೈಗೆ ಸಿಕ್ಕ ಬಂದೂಕಿನಿಂದ ಅಚಾನಕ್ಕಾಗಿ ತನ್ನನ್ನೇ ಶೂಟ್ ಮಾಡಿಕೊಂಡ ದುರದೃಷ್ಟಕರ ಘಟನೆಯೊಂದು ಅಮೆರಿಕದಿಂದ ವರದಿಯಾಗಿದೆ.
ಅಮೆರಿಕದ ಮಿಸ್ಸೌರಿ ಪ್ರಾಂತ್ಯದ ಸೆಡಾಲಿಯಾ ನಗರದಲ್ಲಿ ವಾಸವಾಗಿದ್ದ 4 ವರ್ಷದ ಬಾಲಕ ಆಂಡ್ರೆ ವಾಕರ್ ಆ ನತದೃಷ್ಟ ಬಾಲಕ. ಆಂಡ್ರೆ ಭಾನುವಾರ (ಜನವರಿ 3) ಬೆಳಿಗ್ಗೆ ಆಟವಾಡುತ್ತಿದ್ದಾಗ ಲೋಡ್ ಆಗಿದ್ದ ಹ್ಯಾಂಡ್ಗನ್ ಅವನ ಕೈ ಸಿಕ್ಕಿತು. ಕುತೂಹಲದಿಂದ ನೋಡುತ್ತಿರುವಂತೆಯೇ ಅಚಾನಕ್ಕಾಗಿ ಗುಂಡು ಹಾರಿ ಬಾಲಕ ತೀವ್ರ ಗಾಯಗೊಂಡ.
ಬಾಲಕನ ಅಪ್ಪ ತಕ್ಷಣ ಅವನನ್ನು ಬೋತ್ವೆಲ್ ರೀಜನಲ್ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಬಾಲಕನ ಪ್ರಾಣ ಉಳಿಯಲಿಲ್ಲ. ಈ ದುರ್ಘಟನೆಯ ಸಮಯದಲ್ಲಿ ಮನೆಯಲ್ಲಿ ಇನ್ನೆರಡು ಮಕ್ಕಳೂ ಸೇರಿದಂತೆ ಹಲವಾರು ಜನರಿದ್ದರು. ಆದರೆ ಬೇರೆ ಯಾರಿಗೂ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಸೆಡಾಲಿಯಾ ಡೆಮಾಕ್ರಟ್ ಪತ್ರಿಕೆ ವರದಿ ಮಾಡಿದೆ.
ಈ ಬಗ್ಗೆ ವಿವರಿಸಿರುವ ಸೆಡಾಲಿಯಾದ ಪೊಲೀಸ್ ಕಮಾಂಡರ್ ಡೇವಿಡ್ ವೂಲರಿ 'ಇಂಥ ಘಟನೆಯು ಆಘಾತಕಾರಿ. ಮನೆಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳುವ ಕುಟುಂಬಗಳು ಅವನ್ನು ಸುರಕ್ಷಿತವಾಗಿಡುವುದು ಅವಶ್ಯಕ. ಮಕ್ಕಳಿಗೆ ಗನ್ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಲಾಕ್ ಮಾಡಿ ಮಕ್ಕಳಿಗೆ ಸಿಗದಿರುವಂತಹ ಸ್ಥಳದಲ್ಲಿಡಬೇಕು. ಉಂಟಾಗಬಹುದಾದ ಅಪಾಯದ ಬಗ್ಗೆ ಮಕ್ಕಳಿಗೆ ವಿವರಿಸಿ ಹೇಳಬೇಕು' ಎಂದಿದ್ದಾರೆ.