ನ್ಯೂಸ್

ನೋಡ್ತಿರಿ... ಅಸ್ಸಾಂನಿಂದ 40 ಶವ ಬರುತ್ತೆ... ಎಲ್ಲವನ್ನೂ ಪೋಸ್ಟ್​ಮಾರ್ಟಮ್​ಗೆ ಕಳಿಸ್ತೇವೆ ಎಂದ ಸಂಸದ ರಾವತ್​!

ಮುಂಬೈ: ಮಹಾರಾಷ್ಟ್ರ ಬಿಕ್ಕಟ್ಟು ಇನ್ನೂ ಅಂತ್ಯಗೊಂಡಿಲ್ಲ. ಬಹುತೇಕ ಎಲ್ಲಾ ಸಚಿವರು, ಶಾಸಕರನ್ನು ಕಳೆದುಕೊಂಡಿರುವ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಒಂಟಿಯಾಗಿ ನಿಂತಿದ್ದರೆ, ಶಿವಸೇನಾ ಸಂಸದ ಸಂಜಯ್ ರಾವತ್ ರೆಬೆಲ್​ ಶಾಸಕರು, ಸಚಿವರ ವಿರುದ್ಧ ಕಿಡಿ ಕಾರಿದ್ದಾರೆ.


ಶಿವಸೇನಾದಲ್ಲಿ ಬಂಡಾಯ ಮುಂದುವರಿದಿದ್ದು, ಶಿವಸೈನಿಕರನ್ನು ಬೀದಿಗಿಳಿಸುವುದಾಗಿ ಶನಿವಾರ ಸಂಜಯ್ ರಾವತ್ ಬಹಿರಂಗ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದಿಲ್ಲ ಮತ್ತು ಶಿವಸೇನಾ ಕೊನೆಯವರೆಗೂ ಹೋರಾಡಲಿದೆ ಎಂದು ಹೇಳಿದ್ದರು. ಈ ನಡುವೆಯೇ ರಾವತ್ ಮತ್ತಷ್ಟು ಕಿಡಿ ಕಾರಿದ್ದಾರೆ.

ಬಂಡಾಯ ಶಾಸಕರ ಆತ್ಮಗಳು ಸತ್ತಿವೆ. ಅವರ ದೇಹಗಳು ಮಾತ್ರ ಮುಂಬೈಗೆ ಮರಳುತ್ತವೆ ನೋಡುತ್ತಿರಿ.. ಅಸ್ಸಾಂನ ಗುವಾಹಟಿಯಲ್ಲಿರುವ 40 ಬಂಡಾಯ ಶಾಸಕರು ಜೀವಂತ ಶವಗಳಾಗಿದ್ದಾರೆ. ಅವರ ದೇಹಗಳು ಮಾತ್ರ ಇಲ್ಲಿಗೆ ಬರುತ್ತವೆ. ಆದರೆ ಅವರ ಆತ್ಮಗಳು ಮೃತಪಟ್ಟಿವೆ. ಮುಂದೆ ಏನಾಗುತ್ತದೆ ಎನ್ನುವುದು ಆ ಶಾಸಕರಿಗೆ ತಿಳಿದಿದೆ ಎಂದು ಕಿಡಿ ಕಾರಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಾವತ್, 40 ಶವಗಳು ಅಸ್ಸಾಂನಿಂದ ಮಹಾರಾಷ್ಟ್ರಕ್ಕೆ ಬರಲಿವೆ. ಆ ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೇರವಾಗಿ ಶವಾಗಾರಕ್ಕೆ ಕಳುಹಿಸಲಾಗುವುದು ಎಂದರು.

ಎಷ್ಟು ದಿನಾ ಅಂತ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಾ, ಅಖಾಡಕ್ಕೆ ಬರಲೇಬೇಕಲ್ಲವೇ ಎಂದು ನಿನ್ನೆ (ಭಾನುವಾರ) ರಾವತ್​ ಟ್ವೀಟ್​ ಮಾಡಿದ್ದರು.