ಸಾಂದರ್ಭಿಕ ಚಿತ್ರ 
ನ್ಯೂಸ್

ಪತಿ, ಪತ್ನಿ ಮತ್ತು ಶುಭ ಮುಹೂರ್ತ: 11 ವರ್ಷವಾದ್ರೂ ಮಂಚಕ್ಕೆ ಬರದ ಹೆಂಡ್ತಿ! ಕಂಗೆಟ್ಟ ಗಂಡನಿಗೆ ಕೋರ್ಟ್‌ ನೀಡ್ತು ಡಿವೋರ್ಸ್‌

ಛತ್ತೀಸಗಢ: ಮದುವೆಗೆ ಶುಭ ಮುಹೂರ್ತ ನಿಗದಿ ಮಾಡುವಂತೆ ಮೊದಲ ರಾತ್ರಿಗೂ ಶುಭ ಮುಹೂರ್ತ ನಿಗದಿ ಮಾಡುವ ಪದ್ಧತಿ ಇದೆ. ನವಜೋಡಿಯ ದಾಂಪತ್ಯ ಜೀವನ ಸುಗಮವಾಗಿ ಸಾಗಲಿ ಎನ್ನುವ ಕಾರಣಕ್ಕೆ ಈ ಪದ್ಧತಿ. ಇದೇ ಕಾರಣಕ್ಕೆ ಕೆಲವೊಂದು ಸಂಪ್ರದಾಯಗಳಲ್ಲಿ ಮದುವೆಯಾದ ದಿನವೇ ಮೊದಲ ರಾತ್ರಿಯ ಮುಹೂರ್ತ ಫಿಕ್ಸ್ ಮಾಡಿದರೆ, ಇನ್ನು ಕೆಲವೆಡೆಗಳಲ್ಲಿ ಒಂದು ತಿಂಗಳ ಮೇಲೆ ನಿಗದಿಯಾಗುವುದು ಇದೆ. ಹಾಗೆಂದು ವರ್ಷಾನುಗಟ್ಟಲೆ ದಂಪತಿ ಒಟ್ಟಾಗದಿದ್ದರೆ?

ಹೀಗೊಂದು ಘಟನೆ ಛತ್ತೀಸಗಢದಲ್ಲಿ ನಡೆದಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 11 ವರ್ಷ ಈ ಶುಭ ಮುಹೂರ್ತಕ್ಕಾಗಿ ದಂಪತಿ ಕಾದಿದ್ದಾರೆ! ಮದುವೆಯಾದ ನಂತರ ಶುಭ ಮುಹೂರ್ತ ಇಲ್ಲವೆಂದು ಮಗಳನ್ನು ಮನೆಗೆ ಕರೆದುಕೊಂಡು ಹೋದ ತವರಿನವರು 11 ವರ್ಷವಾದರೂ ಶುಭ ಮುಹೂರ್ತ ಬರಲಿಲ್ಲವೆಂದು ಗಂಡನ ಬಳಿ ಬಿಡಲೇ ಇಲ್ಲ!

11 ವರ್ಷ ಆ ಮೊದಲ ರಾತ್ರಿಗಾಗಿ ಕಾದುಕಾದು ಸುಸ್ತಾದ ಪತಿ ಕೊನೆಗೂ ಪತ್ನಿಯ ವಿರುದ್ಧ ಕೋರ್ಟ್‌ ಮೆಟ್ಟಿಲೇರಿ ಈಗ ವಿಚ್ಛೇದನ ಪಡೆದುಕೊಂಡಿದ್ದಾನೆ.

ಏನಿದು ಘಟನೆ?
ಛತ್ತೀಸಗಢದ ಸಂತೋಷ್‌ ಸಿಂಗ್‌ ಅವರ ವಿವಾಹ ಪಕ್ಕದೂರಿನ ಯುವತಿಯ ಜತೆ 2010ರಲ್ಲಿ ನಡೆದಿದೆ. ಮದುವೆಯಾದ ಒಂದು ವಾರ ಪತ್ನಿ ಗಂಡನ ಮನೆಯಲ್ಲಿ ಇದ್ದಾಳೆ. ಆದರೆ ಮುಹೂರ್ತ ಇಲ್ಲ ಎನ್ನುವ ಕಾರಣಕ್ಕೆ ಆ ಒಂದು ವಾರ ದಂಪತಿ ಒಟ್ಟಾಗಿ ಇರಲು ಬಿಟ್ಟಿರಲಿಲ್ಲ.

ಒಂದು ವಾರದ ಬಳಿಕ ‘ಆ ದಿನ’ ಬರುತ್ತದೆ ಎಂದು ಸಿಂಗ್‌ ಕಾಯುತ್ತಿದ್ದರು. ಆದರೆ ಆಗಿದ್ದೇ ಬೇರೆ. ಅವರ ಪತ್ನಿಯ ಸಹೋದರರು ಬಂದು ತಂಗಿಯನ್ನು ತವರಿಗೆ ಕರೆದುಕೊಂಡು ಹೋಗಿದ್ದಾರೆ. ಮೊದಲ ರಾತ್ರಿಯ ಸಮಾಗಮಕ್ಕೆ ಇನ್ನೂ ಶುಭ ಮುಹೂರ್ತ ಬಂದಿಲ್ಲದ ಕಾರಣ, ಮುಹೂರ್ತ ಬಂದ ಮೇಲೆ ತಂಗಿಯನ್ನು ಕಳಿಸಿಕೊಡುವುದಾಗಿ ಅವರು ಹೇಳಿದ್ದಾರೆ.

ಸರಿ ಎಂದು ಸಂತೋಷ್‌ ಸಿಂಗ್‌ ಒಪ್ಪಿದ್ದಾರೆ. ಆದರೆ ವಾರ ಬಿಟ್ಟು, ತಿಂಗಳಾಗಿ, ವರ್ಷವಾಗಿ, ಇದೀಗ 11 ವರ್ಷವಾದರೂ ಪತ್ನಿಯ ಸುಳಿವೇ ಇಲ್ಲ. ತವರು ಮನೆಯವರಿಗೆ ಕೇಳಿದರೆ ಶುಭ ಮುಹೂರ್ತ ಇನ್ನೂ ಬಂದಿಲ್ಲ ಎಂಬ ಮಾತು. ಮದುವೆಯಾಗಿಯೂ ಒಂಟಿಯಾಗಿದ್ದ ಸಂತೋಷ್‌ ಸಿಂಗ್‌ ಅವರಿಗೆ ತಲೆ ಕೆಟ್ಟುಹೋಗಿದೆ. ಖುದ್ದು ಪತ್ನಿಯ ತವರು ಮನೆಗೆ ಹೋಗಿ ಎಲ್ಲರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಶುಭ ಮುಹೂರ್ತದ ಕಾರಣ ಕೊಟ್ಟು ಅವರು ಪತ್ನಿಯನ್ನು ಕಳಿಸಿಕೊಡಲಿಲ್ಲ.

ಕೊನೆಗೆ ಬೇಸತ್ತ ಸಂತೋಷ್‌ ಸಿಂಗ್‌ ಪತ್ನಿ ವಿರುದ್ಧ ಕೌಟುಂಬಿಕ ಕೋರ್ಟ್‌ನಲ್ಲಿ ಡಿವೋರ್ಸ್‌ ಕೇಸ್‌ ಹಾಕಿದ್ದಾರೆ. ಆದರೆ ಇಂಥ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ನೀಡಲು ಸಾಧ್ಯವಿಲ್ಲ, ಪತಿ-ಪತ್ನಿ ಒಟ್ಟಾಗಿ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದ ಕೌಟುಂಬಿಕ ಕೋರ್ಟ್‌ ಡಿವೋರ್ಸ್‌ ಅರ್ಜಿಯನ್ನು ವಜಾ ಮಾಡಿತ್ತು. ಸಂತೋಷ್‌ ಸಿಂಗ್‌ ದಿಗಿಲುಗೊಂಡು ಈಗ ಹೈಕೋರ್ಟ್‌ ಮೊರೆ ಹೋದರು.

ನ್ಯಾಯಮೂರ್ತಿಗಳಾದ ಭಾದುರಿ ಮತ್ತು ರಜನಿ ದುಬೆ ನೇತೃತ್ವದ ವಿಭಾಗೀಯ ಪೀಠ ಪ್ರಕರಣದ ಗಂಭೀರತೆಯನ್ನು ಅರಿತು ಸಂತೋಷ್‌ ಸಿಂಗ್‌ ಪರ ತೀರ್ಪು ನೀಡಿದೆ. ದಂಪತಿಗೆ ವಿಚ್ಛೇದನ ನೀಡಿ ಆದೇಶಿಸಿದೆ. ಈ ವೇಳೆ ನ್ಯಾಯಮೂರ್ತಿಗಳು, ‘ಶುಭ ಮುಹೂರ್ತ ಎನ್ನುವುದು ಕುಟುಂಬದ ಸಂತೋಷಕ್ಕೆ ಕಾರಣವಾಗಬೇಕು. ದಂಪತಿ ಸುಖವಾಗಿ ಇರಲಿ ಎನ್ನುವ ಕಾರಣಕ್ಕೆ ಶುಭ ಮುಹೂರ್ತ ಎನ್ನುವುದನ್ನು ಇಟ್ಟಿರುತ್ತಾರೆ. ಆದರೆ ಪತ್ನಿಯಾದವಳು ವೈವಾಹಿಕ ಜೀವನದ ಸುಖ ಹಾಳು ಮಾಡಲು ಇದನ್ನು ಸಾಧನವಾಗಿ ಬಳಸಬಾರದು ಎಂದಿದ್ದಾರೆ.