ನ್ಯೂಸ್

ಸುಳ್ಳು ಸುದ್ದಿ ಹರಡುತ್ತಿದ್ದ ಯೂಟ್ಯೂಬರ್​ಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ!

ಮಾಸ್ಕೋ: ಸುಳ್ಳು ಸುದ್ದಿ ಹರಡುತ್ತಿದ್ದ ಯೂಟ್ಯೂಬರ್​ಗೆ ಬರೋಬ್ಬರಿ 8 ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ರಷ್ಯಾದಲ್ಲಿ ನಡೆದಿದೆ.

ಬಂಧಿತನನ್ನು 38 ವರ್ಷದ ಅಲೆಕ್ಸಾಂಡರ್​ ನಾಸ್ಟ್ರಿನೋವ್​ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುಳ್ಳು ಸುದ್ದಿ ಹರಡುತ್ತಾ ಬಂದಿದ್ದರಿಂದ ರಷ್ಯಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ರಷ್ಯಾದ ಹೈವೇ ಪ್ಯಾಟ್ರೋಲ್​ ವಾಹನಗಳು ಕಾನೂನು ಉಲ್ಲಂಘಿಸುತ್ತಿವೆ ಎಂದು ಕೆಲವು ದಿನಗಳಿಂದ ನಾಸ್ಟ್ರಿನೋವ್ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಕೆಲವು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ, ರಷ್ಯಾದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿತ್ತು. ಅಲ್ಲದೆ, ಜನರ ಆಕ್ರೋಶಕ್ಕೂ ಕಾರಣವಾಗಿತ್ತು.

ಕಳೆದ ವರ್ಷ ಮಾರ್ಚ್‌ನಲ್ಲಿ ರಷ್ಯಾ-ಯೂಕ್ರೇನ್ ಯುದ್ಧದ ನಕಲಿ ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕಾಗಿ ಪೊಲೀಸರು ನಾಸ್ಟ್ರಿನೋವ್ ಅವರನ್ನು ಬಂಧಿಸಿದ್ದರು. ಆದರೆ, ನಾಸ್ಟ್ರಿನೋವ್ ಅವರ ಪತ್ನಿ ಎಕಟೆರಿನಾ, ನಾಸ್ಟ್ರಿನೋವ್ ಅಂತಹ ಯಾವುದೇ ಫೋಟೋವನ್ನು ಹಂಚಿಕೊಂಡಿಲ್ಲ ಮತ್ತು ಇದು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಪೊಲೀಸರೇ ಸೃಷ್ಟಿಸಿದ ಪ್ರಕರಣವಾಗಿದೆ ಎಂದು ಆರೋಪಿಸಿದ್ದಾರೆ.

ಬಂಧನ ಬೆನ್ನಲ್ಲೇ ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ ಕ್ರಾಸ್ನೋಡರ್ ನ್ಯಾಯಾಲಯದ ನ್ಯಾಯಾಧೀಶರು ನಾಸ್ಟ್ರಿನೋವ್ ಅಪರಾಧ ಸಾಬೀತಾದ ನಂತರ ಎಂಟು ವರ್ಷ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ಯೂಕ್ರೇನ್ ವಿರುದ್ಧದ ಯುದ್ಧ ಪ್ರಾರಂಭವಾದಾಗಿನಿಂದ, ರಷ್ಯಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ ಮತ್ತು ಸರ್ಕಾರದ ವಿರುದ್ಧ ಮಾತನಾಡುವವರನ್ನು ಬಂಧಿಸುವುದು ಅಥವಾ ದಂಡ ವಿಧಿಸುವುದು ನಿರಂತರವಾಗಿ ನಡೆಯುತ್ತಿದೆ ಎಂದು ದೇಶದ ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)