ನವದೆಹಲಿ: ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಕರೊನಾ ನಿಗ್ರಹ ಲಸಿಕೆ ಜಗತ್ತಿನಲ್ಲಿ ಪ್ರಪ್ರಥಮ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವವೇ ಬೇರೆಯಾಗಿದೆ.
ರಷ್ಯಾಗೂ ಮುನ್ನ ಚೀನಾದಲ್ಲಿ ಕೋವಿಡ್ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ ಅದೂ ಕೂಡ ಜೂನ್ ತಿಂಗಳಲ್ಲಿ. ಹೌದು... ಚೀನಾದ ಕ್ಯಾನ್ಸಿನೋ ಕಂಪನಿ ರಾಷ್ಟ್ರೀಯ ಸೇನಾ ಸಂಶೋಧನಾ ಸಂಸ್ಥೆ ಜತೆ ಸೇರಿ ಅಭಿವೃದ್ಧಿಪಡಿಸಿರುವ Ad5-nCoV ಹೆಸರಿನ ಲಸಿಕೆಗೆ ಸೆಂಟ್ರಲ್ ಮಿಲಿಟರಿ ಕಮಿಷನ್ ಅನುಮೋದನೆ ನೀಡಿದೆ. ಸೇನೆಯಲ್ಲಿ ಇದನ್ನು ಬಳಕೆ ಮಾಡಬಹುದೆಂದು ತಿಳಿಸಿದೆ.
ಸದ್ಯ ಈ ಲಸಿಕೆಯನ್ನು ಸೇನೆಯ ಉಪಯೋಗಕ್ಕಷ್ಟೇ ಸೀಮಿತಗೊಳಿಸಲಾಗಿದೆ. ಚೀನಾದ ಪೀಪಲ್ಸ್ ಆಫ್ ಲಿಬರೇಷನ್ ಆರ್ಮಿಯ ಯೋಧರಿಗಷ್ಟೇ ನೀಡಲಾಗುತ್ತಿದೆ. ಆದರೆ, ಈವರೆಗೆ ಎಷ್ಟು ಯೋಧರಿಗೆ ನೀಡಲಾಗಿದೆ ಹಾಗೂ ಅದರ ಪರಿಣಾಮವೇನು ಎಂಬುದು ತಿಳಿದು ಬಂದಿಲ್ಲ.
ರಷ್ಯಾದ ಲಸಿಕೆಯಂತೆಯೇ ಇದನ್ನು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗಾಗಿ ಕಾಯದೇ ಬಳಕೆಗೆ ಮುಕ್ತಗೊಳಿಸಲಾಗಿದೆ. ಇದಾದ ಕೆಲ ದಿನಗಳಲ್ಲಿಯೇ ಸೌದಿ ಅರೇಬಿಯಾದ ಆಸ್ಪತ್ರೆಗಳಲ್ಲಿ ಮೂರನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ ಎಂದು ಚೀನಾ ಮಾಹಿತಿ ನೀಡಿತ್ತು.
ಇದನ್ನೂ ಓದಿ; ಹಿಂದು ಉತ್ತರಾಧಿಕಾರ ಕಾಯ್ದೆ ಪೂರ್ವಾನ್ವಯವಾಗುತ್ತೆ; ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅಧಿಕಾರ; ಸುಪ್ರೀಂ ಕೋರ್ಟ್ ತೀರ್ಪು
ಇದಲ್ಲದೇ, ಚೀನಾದ ಎಂಟು ಲಸಿಕೆಗಳು ಮಾನವರ ಮೇಲೆ ಪ್ರಯೋಗದ ಹಂತದಲ್ಲಿವೆ. ದೇಶೀಯವಾಗಿ ಮಾತ್ರವಲ್ಲದೇ. ಸೌದಿ ಅರೇಬಿಯಾ ಹಾಗೂ ಕೆನಡಾದಲ್ಲೂ ಇದರ ಕ್ಲಿನಿಕಲ್ ಟ್ರಯಲ್ಗೆ ಅನುಮತಿ ಪಡೆದುಕೊಂಡಿವೆ.