ರಷ್ಯಾ: ವಿಜ್ಞಾನಿಗಳು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಅಂಟಾರ್ಟಿಕಾದ ನಿರಾಶ್ರಿತ ಭೂಪ್ರದೇಶದಲ್ಲಿ ಕಲ್ಲಂಗಡಿ ಬೆಳೆದು ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಹೌದು, ಅಂಟಾರ್ಟಿಕಾದ ವೊಸ್ಟೋಕ್ ಸ್ಟೇಶನ್ನ ಪ್ರಿನ್ಸೆಸ್ ಎಲಿಜಬೆತ್ ಲ್ಯಾಂಡ್‌ನಲ್ಲಿರುವ ರಷ್ಯಾದ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದಾರೆ. ಅಂಟಾರ್ಟಿಕಾದ ವೊಸ್ಟೋಕ್ ಸ್ಟೇಶನ್ ಭೂಮಿಯ ಮೇಲಿರುವ ಅತ್ಯಂತ ತಂಪಾದ ಜಾಗವೆಂದು ಈಗಾಗಲೇ ಗುರುತಿಸಲಾಗಿದೆ. ಕೊರೆಯುವ ಚಳಿಯಿರುವ ಈ ಭಾಗದಲ್ಲಿ ರಷ್ಯಾದ ವಿಜ್ಞಾನಿಗಳು ಕಲ್ಲಂಗಡಿ ಹಣ್ಣನ್ನ ಬೆಳೆದು ಸಾಧನೆಗೈದಿದ್ದಾರೆ.
ವಿಜ್ಞಾನಿಗಳಿಗೆ ಕೊರೆಯುವ ಚಳಿ ಮತ್ತು ಭೂಮಿಯ ತಂಪಾದ ಜಾಗದಲ್ಲಿ ಕಲ್ಲಂಗಡಿ ಬೆಳೆಯೋದು ಬಹುದೊಡ್ಡ ಸವಾಲಾಗಿತ್ತು. ಆದರೆ ರಷ್ಯಾದ ಸಂಶೋಧನಾ ತಂಡವು ಬಲು ಬೇಗನೇ ಹಣ್ಣಾಗುವಂತಹ ಕಲ್ಲಂಗಡಿ ಹಣ್ಣಿನ ಎರಡು ವಿಧದ ಬೀಜಗಳನ್ನ ನೆಟ್ಟಿದ್ದರು. ರುಚಿ ಮಾತ್ರವಲ್ಲದೆ ಅಂಟಾರ್ಟಿಕಾದಲ್ಲಿರುವ ಗ್ರೀನ್ ಹೌಸ್ ಗ್ಯಾಸ್ ಮತ್ತು ಆಮ್ಲಜನಕ ಕೊರತೆಯಂತಹ ಸವಾಲುಗಳಿಗೆ ಹೊಂದಿಕೊಳ್ಳುವಂತಹ ಎರಡು ವಿಧದ ಬೀಜಗಳನ್ನು ವಿಜ್ಞಾನಿಗಳು ಆಯ್ದುಕೊಂಡಿದ್ದರು. ಜೊತೆಗೆ ಆಯ್ದ ಕಲ್ಲಂಗಡಿ ಬೀಜಗಳನ್ನು ಮಣ್ಣಿನ ತೆಳುವಾದ ಪದರದಲ್ಲಿ ಬಿತ್ತಲಾಗಿತ್ತು. ಅಂಟಾರ್ಟಿಕಾ ಪ್ರದೇಶದಲ್ಲಿ ಸೂರ್ಯನ ಬೆಳಕು ಕಂಡು ಬರೋದಿಲ್ಲ. ಈ ವಿಚಾರ ತಿಳಿದಿದ್ದ ವಿಜ್ಞಾನಿಗಳು ತಾವೇ ನೈಸರ್ಗಿಕವಾಗಿ ಬೆಳಕನ್ನ ಸೃಷ್ಟಿಸಿ ಕಲ್ಲಂಗಡಿ ಗಿಡದ ಮೇಲೆ ಬೀಳುವಂತಹ ಕಾರ್ಯವನ್ನು ಕೈಗೊಂಡರು.
ಬೀಜ ನೆಟ್ಟು 103 ದಿನಗಳ ಬಳಿಕ ವಿಜ್ಞಾನಿಗಳಿಗೆ ಆಶ್ಚರ್ಯಕರ ಇಳುವರಿ ದೊರೆತಿದ್ದು, ಆರು ಕಲ್ಲಂಗಡಿ ಹಣ್ಣಿನ ಸಸಿಗಳಲ್ಲಿ ಎಂಟು ರುಚಿಕರವಾದ ಕಲ್ಲಂಗಡಿ ಹಣ್ಣುಗಳು ದೊರೆತಿದ್ದವು. ಪ್ರತಿಯೊಂದು ಕಲ್ಲಂಗಡಿ ಹಣ್ಣು ಕೂಡ 1 ಕೆ.ಜಿ ತೂಕವನ್ನ ಹೊಂದಿದ್ದು, 13 ಸೆಂಟಿಮೀಟರ್ ಸುತ್ತಳೆತೆಯನ್ನ ಹೊಂದಿರುವುದಾಗಿ ರಷ್ಯಾದ ಜಿಯಾಗ್ರಫಿಕಲ್ ಸೊಸೈಟಿ ವರದಿ ಮಾಡಿದೆ.
ಈ ಹಿಂದೆ 2020 ರಲ್ಲಿ, ಅಂಟಾರ್ಟಿಕಾದಲ್ಲಿರುವ ವೋಸ್ಟಾಕ್ ನಿಲ್ದಾಣದ ಸಂಶೋಧಕರು ಸಬ್ಬಸಿಗೆ, ತುಳಸಿ, ಎಲೆಕೋಸು ಸೇರಿದಂತೆ ವಿವಿಧ ಸಸ್ಯಗಳನ್ನು ಯಶಸ್ವಿಯಾಗಿ ಬೆಳೆದಿದ್ದರು. ಇದೀಗ ಮತ್ತೆ ಕಲ್ಲಂಗಡಿ ಹಣ್ಣುಗಳನ್ನ ಬೆಳೆದು ಯಶಸ್ವಿಯಾಗಿದ್ದಾರೆ.