ನವದೆಹಲಿ: ಕೋವಿಡ್19 ಕಾಯಿಲೆಗೆ ಕಾರಣವಾಗುವ ಕರೊನಾ ವೈರಸ್ ಸೇರಿ ಗಾಳಿಯಲ್ಲಿರುವ ಇತರ ಬ್ಯಾಕ್ಟೀರಿಯಾ, ವಿಷಕಾರಿ ಕಣಗಳನ್ನು ಪತ್ತೆಹಚ್ಚುವ ಸಾಧನವನ್ನು ರಷ್ಯಾ ಕಂಡುಹಿಡಿದಿದೆ. ವಾತಾವರಣದಲ್ಲಿರುವ ವೈರಸ್ ಹಾಗೂ ರೋಗಕಾರಕ ಕಣಗಳ ಬಗ್ಗೆ ಕೆಲವೇ ಸೆಕೆಂಡ್ಗಳಲ್ಲಿ ಈ ಸಾಧನ ಮಾಹಿತಿ ನೀಡಲಿದೆ ಎಂದು ರಷ್ಯನ್ ಮಾಧ್ಯಮಗಳು ವರದಿ ಮಾಡಿವೆ.
ಈ ಸಾಧನವನ್ನು ಡಿಟೆಕ್ಟರ್ ಬಯೋ ಎಂದು ಕರೆಯಲಾಗಿದೆ. ರಷ್ಯಾದ ಝೆನಿತ್ ಕ್ಯಾಮರಾಗಳ ಉತ್ಪಾದಕರಾದ ಕೆಎಂಝಡ್ ಕಂಪನಿ ಇದನ್ನು ಉತ್ಪಾದಿಸಿದೆ. ವಿಶೇಷವೆಂದರೆ, ಕರೊನಾಗೆ ಜಗತ್ತಿನಲ್ಲಿ ಮೊದಲ ಲಸಿಕೆ ಉತ್ಪಾದಿಸಿ, ನೋಂದಣಿ ಮಾಡಿದ ಮಾಸ್ಕೋದ ಸರ್ಕಾರಿ ಅಧೀನದ ಗಮಾಲಿಯಾ ಸಂಸ್ಥೆಯೂ ಕೂಡ ಇದರಲ್ಲಿ ಭಾಗಿಯಾಗಿದೆ.
ಇದನ್ನೂ ಓದಿ; ಸಭೆ, ಸಮಾರಂಭಕ್ಕೆ ಅನುಮತಿ; ಸೆ.7ರಿಂದ ಮೆಟ್ರೋ ಸಂಚಾರ; ಶಾಲಾ-ಕಾಲೇಜು ಬಂದ್; ಅನ್ಲಾಕ್ 4.0 ಮಾರ್ಗಸೂಚಿ
ಈ ಸಾಧನ ಚಿಕ್ಕದಾಗೇನಿಲ್ಲ, ಅಂದಾಜು ರೆಫ್ರಿಜರೇಟರ್ ಗಾತ್ರದಲ್ಲಿದೆ. ಹಲವು ಕಾರ್ಯಗಳನ್ನು ಮಾಡುವ ಸಾಧನಗಳನ್ನು ಅಥನಾ ಪ್ರಯೋಗಾಲಯಗಳನ್ನೇ ಒಂದರ ಮೇಲೊಂದರಂತೆ ಸೇರಿದಂತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ವಾತಾವರಣದಲ್ಲಿರುವ ಗಾಳಿಯನ್ನು ಸೆಳೆದುಕೊಳ್ಳುವ ಈ ಸಾಧನ ವೈರಸ್ಗಳಿರುವ ಬಗ್ಗೆ 10- 15 ಸೆಕೆಂಡ್ಗಳಲ್ಲಿ ಮಾಹಿತಿ ನೀಡುತ್ತದೆ. ಎರಡು ಹಂತಗಳಲ್ಲಿ ವಿಶ್ಲೇಷಣೆ ನಡೆಸಿ ಫಲಿತಾಂಶ ಪ್ರಕಟಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ; ಭಾರತದಿಂದ ಕರೊನಾ ಲಸಿಕೆ ಪಡೆಯುವ ಮೊದಲ ರಾಷ್ಟ್ರ ಬಾಂಗ್ಲಾ; ಪುಣೆ ಕಂಪನಿಯಲ್ಲಿ ಬಂಡವಾಳ ಹೂಡಿದ ಬೆಕ್ಸಿಮ್ಕೋ
ಮೊದಲ ಹಂತದಲ್ಲಿ ಗಾಳಿಯನ್ನೆಲ್ಲ ಸೆಳೆದುಕೊಂಡು ಅದರ ಪರೀಕ್ಷೆ ನಡೆಸುತ್ತದೆ. ಅದರಲ್ಲಿ ವೈರಸ್ಗಳಿದ್ದರೆ ಗುರುತಿಸಿ ಕೂಡಲೇ ಎಚ್ಚರಿಕೆ ನೀಡುತ್ತದೆ. ಎರಡನೇ ಹಂತದಲ್ಲಿ ಆ ವೈರಸ್ಗಳು ಅಥವಾ ರೋಗಕಾರಕಗಳು ಯಾವವು ಎಂಬುದನ್ನು ಪತ್ತೆ ಹಚ್ಚುತ್ತದೆ. ಇದಕ್ಕೆ ಒಂದರಿಂದ-ಎರಡು ತಾಸುಗಳು ಬೇಕಾಗುತ್ತದೆ ಎನ್ನಲಾಗಿದೆ.
ಇದನ್ನು ಸಾರ್ವಜನಿಕ ಸ್ಥಳಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ, ಮೊದಲಾದ ಕಡೆಗಳಲ್ಲಿ ಬಳಸುವ ಉದ್ದೇಶದಿಂದ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ.