ನ್ಯೂಸ್

ಮಾನವೀಯತೆಯ ಉಳಿವಿಗಾಗಿ ರಷ್ಯಾ, ಯುಕ್ರೇನ್​ ಯುದ್ದ ಕೊನೆಯಾಗಬೇಕು: ಪ್ರಧಾನಿ ಮೋದಿ| PM Modi

PM Modi: ರಷ್ಯಾ ಮತ್ತು ಭಾರತ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಯುಕ್ರೇನ್‌ ಮೇಲಿನ ಯುದ್ಧ ಅಂತ್ಯವಾಗಬೇಕು ಎಂದು ಸೋಮವಾರ (ಸೆಪ್ಟೆಂಬರ್,01) ತಿಳಿಸಿದ್ದಾರೆ.

ಈ ಬಗ್ಗೆ ರಷ್ಯಾ ಅಧ್ಯಕ್ಷರೊಂದಿಗಿನ ಸಭೆಯಲ್ಲಿ ಮಾತನಾಡಿದ ಮೋದಿ, ಯುಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ನಾವು ನಿರಂತರವಾಗಿ ಚರ್ಚಿಸುತ್ತಿದ್ದೇವೆ. ಶಾಂತಿಗಾಗಿ ಇತ್ತೀಚಿನ ಎಲ್ಲಾ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.ಶಾಂತಿಗಾಗಿ ಎಲ್ಲಾ ಪ್ರಕ್ರಿಯೆಗಳು ಮುಂದುವರಿಯುತ್ತವೆ ಎಂದು ನಾವು ಭಾವಿಸುತ್ತೇವೆ. ಆದಷ್ಟು ಬೇಗ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಒಂದು ಮಾರ್ಗವನ್ನು ಕಂಡುಹಿಡಿಯಬೇಕು. ಇದು ಇಡೀ ಮಾನವೀಯತೆಯ ಕರೆ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.

ಮುಂದುವರೆದು ಮಾತನಾಡಿದ ಮೋದಿ, ಕಷ್ಟದ ಸಮಯದಲ್ಲಿ ಭಾರತ ಮತ್ತು ರಷ್ಯಾ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ. ನಮ್ಮ ನಡುವಿನ ನಿಕಟ ಸಂಬಂಧಗಳು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಮಹತ್ವದ್ದಾಗಿವೆ ಎಂದು ಹೇಳಿದ್ಧಾರೆ.ಅಲ್ಲದೆ, ಇಂದಿನ ಸಭೆಯು ಭಾರತ-ರಷ್ಯಾ ಸಂಬಂಧಕ್ಕೆ ಗಮನಾರ್ಹ ಉತ್ತೇಜನ ನೀಡುವ ನಿರೀಕ್ಷೆಯಿದೆ. ರಷ್ಯಾ ಮತ್ತು ಭಾರತ ಉತ್ತಮ ಸಂಬಂಧವನ್ನು ಹೊಂದಿವೆ ಎಂದು ಮೋದಿ ತಿಳಿಸಿದರು.ಅಲ್ಲದೆ, ಪುಟಿನ್​ರನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ಭಾರತ ಮತ್ತು ರಷ್ಯಾ ನಡುವಿನ ಉನ್ನತ ಮಟ್ಟದ ಸಂವಹನಗಳು ಹಾಗೂ ವಿಶೇಷ ವ್ಯಾಪಾರ ಪಾಲುದಾರಿಕೆಯ ನಂಟನ್ನು ಪ್ರತಿಬಿಂಬಿಸುತ್ತವೆ ಎಂದು ಮೋದಿ ತಿಳಿಸಿದರ. ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ 23ನೇ ಶೃಂಗಸಭೆಗಾಗಿ 140 ಕೋಟಿ ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಪ್ರತಿಕ್ರಿಯಿಸಿದ ಪುಟಿನ್, ನಿಮ್ಮನ್ನು ಭೇಟಿಯಾದ ನಂತರ ನನಗೆ ತುಂಬಾ ಸಂತೋಷವಾಗಿದೆ. ಜಾಗತಿಕವಾಗಿ ದಕ್ಷಿಣ ಮತ್ತು ಪೂರ್ವದ ದೇಶಗಳನ್ನು ಒಟ್ಟುಗೂಡಿಸಲು SCO ಒಂದು ಒಳ್ಳೆಯ ವೇದಿಕೆಯಾಗಿದೆ. 2025ರ ಡಿಸೆಂಬರ್,21ರಂದು ಭಾರತ-ರಷ್ಯಾ ಸಂಬಂಧಗಳನ್ನು ವಿಶೇಷ ವ್ಯಾಪಾರದ ಪಾಲುದಾರಿಕೆಗೆ ಏರಿಸಿದ 15ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.ಅಲ್ಲದೆ, ನಾವು ಬಹುಮುಖಿ ಸಂಬಂಧವನ್ನು ಆನಂದಿಸುತ್ತೇವೆ ಎಂದು ಪುಟಿನ್​​​​​​​​ ತಿಳಿಸಿದರು.(ಏಜೆನ್ಸೀಸ್)