Emmanuel Macron: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರದೊಳಗೆ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರೊಂದಿಗೆ ಸಭೆ ಸೇರಲು ವಿಫಲವಾದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಪುಟಿನ್ ಆಟವಾಡಿಸುತ್ತಿದ್ದಾರೆ ಎಂಬುದು ಸೂಚನೆಯಾಗುತ್ತದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಎಚ್ಚರಿಸಿದ್ದಾರೆ.
ಈ ಬಗ್ಗೆ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮ್ಯಾಕ್ರನ್, ಟ್ರಂಪ್ ನಿಗದಿಪಡಿಸಿದ ಗಡುವು ಸೋಮವಾರದೊಳಗೆ ಸಭೆ ಸಂಭವಿಸದಿದ್ದರೆ, ಪುಟಿನ್ ಮತ್ತೊಮ್ಮೆ ಅಧ್ಯಕ್ಷ ಟ್ರಂಪ್ರನ್ನು ಆಟವಾಡಿಸುತ್ತಿದ್ದಾರೆ ಎಂದರ್ಥ ಎಂದು ಹೇಳಿದ್ದಾರೆ.
ಪುಟಿನ್ ಮತ್ತು ಝೆಲೆನ್ಸ್ಕಿ ಭೇಟಿಯಾಗಲು ಒಪ್ಪುತ್ತಾರೆ ಎಂದು ಶ್ವೇತಭವನ ಈ ಹಿಂದೆ ಹೇಳಿತ್ತು. ಆದರೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನಿರಾಕರಿಸಿದ್ದಾರೆ. ಈ ಸಭೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಕಡಿಮೆ ಎಂದು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಈ ವಾರ ಹೇಳಿದ್ದರು.
ಅಮೆರಿಕದಿಂದ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಈ ಹೇಳಿಕೆ ಬಂದಿದ್ದು, ಝೆಲೆನ್ಸ್ಕಿ ಜೊತೆ ನೇರ ಮಾತುಕತೆಗೆ ಒಪ್ಪಿಕೊಳ್ಳಲು ಟ್ರಂಪ್ ಪುಟಿನ್‌ಗೆ ದೃಢವಾದ ಗಡುವನ್ನು ವಿಧಿಸಿದ್ದಾರೆ ಎಂದು ವರದಿಯಾಗಿತ್ತು. ಯುಕ್ರೇನ್ ಯುದ್ಧದ ಕುರಿತು ಟ್ರಂಪ್ ಇತ್ತೀಚೆಗೆ ಅಲಾಸ್ಕಾದಲ್ಲಿ ಪುಟಿನ್ ಭೇಟಿಯಾದ ನಂತರ ಶ್ವೇತಭವನದಲ್ಲಿ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.
ಯುಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಪುಟಿನ್ ಜತೆಗಿನ ಸಭೆಗೆ ಪ್ರತಿಕ್ರಿಯಿಸಲು ಪುಟಿನ್‌ಗೆ ಎರಡು ವಾರ ಕಾಲಾವಕಾಶ ನೀಡಿದ್ದ ಟ್ರಂಪ್ರ ಹಿಂದಿನ ಹೇಳಿಕೆಗಳನ್ನು ಬೆಟ್ಟು ಮಾಡಿ ತೋರಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಹೇಳಿರುವ ಝೆಲೆನ್ಸ್ಕಿ, ಯುಕ್ರೇನ್ ಮೇಲಿನ ಆಕ್ರಮಣವನ್ನು ಕೊನೆಗೊಳಿಸಲು ರಾಜತಾಂತ್ರಿಕತೆಗೆ ತಯಾರಿ ನಡೆಸುತ್ತಿದೆ. ಆದರೆ ರಷ್ಯಾ ಯಾವುದೇ ಸಕಾರಾತ್ಮಕ ಸಂಕೇತವನ್ನು ನೀಡಿಲ್ಲ ಎಂದು ಝೆಲೆನ್ಸ್ಕಿ ಹೇಳಿದರು. (ಏಜೆನ್ಸೀಸ್)