ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಆಯೋಜಿಸಿರುವ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಸ್ಪರ್ಧೆಗೆ ಡಿ.31 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಸ್ಪರ್ಧೆ-2024 ಮತ್ತು ರಾಷ್ಟ್ರೀಯ ಅತ್ಯುತ್ತಮ ಗ್ರಾಮೀಣ ಹೋಂಸ್ಟೇ ಸ್ಪರ್ಧೆ-2024 ಎಂಬ ಎರಡು ವಿಭಾಗಗಳಿದ್ದು, ದೇಶದ ಒಟ್ಟು 35 ಗ್ರಾಮಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ವಿಭಾಗದಲ್ಲಿ ಪ್ರಶಸ್ತಿ ಪಡೆಯಲಿವೆ. ಸಚಿವಾಲಯದ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಸಚಿವಾಲಯವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೂರಿಸಂ ಮತ್ತು ಟ್ರಾವೆಲ್ ಮ್ಯಾನೇಜ್ಮೆಂಟ್ನ ಸಹಯೋಗದೊಂದಿಗೆ ಗ್ರಾಮೀಣ ಪ್ರವಾಸೋದ್ಯಮ ಮತ್ತು ಗ್ರಾಮೀಣ ಹೋಂಸ್ಟೇಗಳನ್ನು ಉತ್ತೇಜಿಸಲು ಈ ಸ್ಪರ್ಧೆಗಳನ್ನು ನಡೆಸುತ್ತಿದೆ ಎಂದು ಸಚಿವಾಲಯ ಹೇಳಿದೆ.
ಸೆ. 27ರಂದು ವಿಶ್ವ ಪ್ರವಾಸೋದ್ಯಮ ದಿನದಂದು ಎರಡು ಸ್ಪರ್ಧೆಗಳನ್ನು ಪ್ರಾರಂಭಿಸಲಾಯಿತು. ಇದು ದೇಶದಲ್ಲಿ ಗ್ರಾಮೀಣ ಪ್ರವಾಸೋದ್ಯಮದ ಪ್ರಚಾರ ಮತ್ತು ಅಭಿವೃದ್ಧಿಯನ್ನು ಬಲಪಡಿಸುತ್ತದೆ. ಗ್ರಾಮೀಣ ಪ್ರವಾಸೋದ್ಯಮದ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು, ಸಚಿವಾಲಯವು ಈ ಸ್ಪರ್ಧೆಗಳ ಮೂಲಕ ಸರ್ಕಾರ, ಉದ್ಯಮದ ಮಧ್ಯಸ್ಥಗಾರರು, ಎನ್ಜಿಒಗಳು ಮತ್ತು ಸ್ಥಳಿಯ ಸಮುದಾಯಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಬಹುಪಾಲುದಾರರ ವಿಧಾನವು ಗ್ರಾಮೀಣ ಆರ್ಥಿಕತೆ ಬಲಪಡಿಸುವ ಪ್ರಯತ್ನಗಳನ್ನು ಸಂಯೋಜಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.