Rudrastra: ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲಿ ಇದು ಹೊಸ ಮೈಲಿಗಲ್ಲು ಎಂದರೆ ಖಂಡಿತ ತಪ್ಪಾಗಲಾರದು. ಅತಿ ಉದ್ದದ ಸರಕು ರೈಲನ್ನು ಓಡಿಸುವ ಮೂಲಕ ಭಾರತೀಯ ರೈಲ್ವೆ, ಇತರ ದೇಶಗಳ ಗಮನ ಸೆಳೆದಿದೆ. ಏಳು ಲೋಕೋಮೋಟಿವ್‌ಗಳಿಂದ ಚಾಲಿತವಾದ ಈ ರೈಲು, ಬರೋಬ್ಬರಿ 4.5 ಕಿ.ಮೀ ಉದ್ದವಿದೆ. ಹಾವಿನಂತೆ ಚಲಿಸುವ 'ರುದ್ರಾಸ್ತ್ರ' ಎಂಬ ವಿಶೇಷ ಸರಕು ರೈಲು, 354 ಬೋಗಿಯನ್ನು ಒಳಗೊಂಡಿದೆ ಎಂಬುದೇ ಸದ್ಯ ಹುಬ್ಬೇರಿಸುವ ಸಂಗತಿ.
ಪೂರ್ವ ಮಧ್ಯ ರೈಲ್ವೆಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಿಭಾಗದಿಂದ ತಯಾರಾಗಿರುವ ರುದ್ರಾಸ್ತ್ರ ರೈಲು ಸರಕುಗಳನ್ನು ವೇಗವಾಗಿ ಲೋಡ್ ಮಾಡಲು ಮತ್ತು ಸಾಗಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. "ಈ ಹೊಸ ಪ್ರಯೋಗವು ಸರಕು ಸಾಗಣೆಯನ್ನು ಇನ್ನಷ್ಟು ವೇಗಗೊಳಿಸುತ್ತದೆ. ಸಂಪನ್ಮೂಲ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಮಯವನ್ನು ಉಳಿತಾಯ ಮಾಡುತ್ತದೆ" ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಉದಯ್ ಸಿಂಗ್ ಮೀನಾ ಹೇಳಿದ್ದಾರೆ.
ಗುರುವಾರ ಚಂದೌಲಿಯ ಗಂಜ್‌ಖ್ವಾಜ ರೈಲು ನಿಲ್ದಾಣದಿಂದ ಜಾರ್ಖಂಡ್‌ನ ಗರ್ವಾವರೆಗೆ ಪ್ರಾಯೋಗಿಕ ಓಟವನ್ನು ನಡೆಸಿದ ಈ ಸರಕು ರೈಲು, 5 ಗಂಟೆಗಳಲ್ಲಿ ಸಂಪೂರ್ಣ ಪ್ರಯಾಣವನ್ನು ಪೂರ್ಣಗೊಳಿಸಿದೆ. ಇದು ಗಂಟೆಗೆ ಸರಾಸರಿ 40 ಕಿ.ಮೀ ವೇಗದಲ್ಲಿ 200 ಕಿ.ಮೀ ದೂರವನ್ನು ಕ್ರಮಿಸಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ರುದ್ರಾಸ್ತ್ರ ಸರಕು ರೈಲು 7 ಬಲಿಷ್ಠ ಇಂಜಿನ್ನಿಂದ ಕೂಡಿದ್ದು, 354 ಬೋಗಿಗಳನ್ನು ಹೊಂದಿದೆ. ಇದು ಭಾರತದ ಅತಿ ಉದ್ದದ ಸರಕು ರೈಲು ಮಾತ್ರವಲ್ಲದೆ ಏಷ್ಯಾದಲ್ಲಿಯೇ ಅತಿ ದೊಡ್ಡದು ಎಂಬ ಸಂಗತಿ ನಿಜಕ್ಕೂ ಗಮನಾರ್ಹ.
ಒಟ್ಟಾರೆ, ಭಾರತೀಯ ರೈಲ್ವೆ ತನ್ನ ಇತಿಹಾಸದಲ್ಲಿ ಅದ್ಭುತ ದಾಖಲೆಯನ್ನು ಸ್ಥಾಪಿಸಿದೆ. ಇದು ದೇಶದಲ್ಲಿ ಅತಿ ಉದ್ದದ ಸರಕು ರೈಲನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ ಮತ್ತು ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. 'ರುದ್ರಾಸ್ತ್ರ' ಎಂದು ಕರೆಯಲ್ಪಡುವ ಈ ಬೃಹತ್ ರೈಲು ಎಲ್ಲರನ್ನೂ ಬೆರಗುಗೊಳಿಸಿದೆ. ಈ ದಾಖಲೆಯೊಂದಿಗೆ, ಭಾರತೀಯ ರೈಲ್ವೆ ತನ್ನ ಸರಕು ಸಾಗಣೆ ಸಾಮರ್ಥ್ಯದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ಭಾರತೀಯ ರೈಲ್ವೆ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ,(ಏಜೆನ್ಸೀಸ್).