ನವದೆಹಲಿ: ಅಪ್ರತಿಮ ಸ್ವಾಂತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 124ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಕೋಲ್ಕತದಲ್ಲಿ ನಡೆದ ಸಮಾರಂಭದಲ್ಲಿ ಕೇಳಿಬಂದ "ಜೈ ಶ್ರೀರಾಮ್" ಘೋಷಣೆಯನ್ನು ನಾವು ಸಹ ಬೆಂಬಲಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್ ಬುಧವಾರ ತಿಳಿಸಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಆರಂಭಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಆರ್ಎಸ್ಎಸ್ನ ಪಶ್ಚಿಮ ಬಂಗಾಳ ಘಟಕದ ಪ್ರಧಾನ ಕಾರ್ಯದರ್ಶಿ ಜಿಷ್ಣು ಬಸು ಮಾತನಾಡಿ, ನೇತಾಜಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ ಮಾಡಬಾರದಿತ್ತು ಎಂದಿದ್ದಾರೆ.
ಇದನ್ನೂ ಓದಿರಿ: ರಾತ್ರಿ ಫೋನ್ ಕಾಲ್ ಬಂದ ಬೆನ್ನಲ್ಲೇ ತೆರಳಿದ ಅಪ್ರಾಪ್ತೆ ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಶವವಾಗಿ ಪತ್ತೆ!
ಜನವರಿ 23ರ ನೇತಾಜಿ 124ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಘೋಷಣೆ ಕೇಳಿಬಂದಿತ್ತು. ಪಶ್ಚಿಮ ಬಂಗಾಳ ಸಿಎಂ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಜನರನ್ನು ಉದ್ದೇಶಿಸಿ ಮಾತನಾಡಲು ವೇದಿಕೆ ಆಹ್ವಾನಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಒಂದು ವರ್ಗದ ಮಂದಿ "ಜೈ ಶ್ರೀರಾಮ್" ಮತ್ತು "ಮೋದಿ-ಮೋದಿ" ಎಂದು ಘೋಷಣೆ ಕೂಗಿದರು. ಇದರಿಂದ ಮಮತಾ ಕೋಪಗೊಂಡರು.
ಅಂದು ಏನು ನಡೆಯಿತು ಆ ಬಗ್ಗೆ ಸಂಘ (ಆರ್ಎಸ್ಎಸ್)ಕ್ಕೆ ಅಸಮಾಧಾನವಿದೆ. ಅಂದು ಘೋಷಣೆ ಕೂಗಿದವರು ರಾಮನಿಗಾಗಲಿ ಅಥವಾ ನೇತಾಜಿ ಸುಭಾಷ್ ಚಂದ್ರ ಬೋಸ್ಗಾಗಲಿ ಗೌರವನ್ನು ತೋರಿಲ್ಲ. ನೇತಾಜಿಗೆ ಗೌರವಪೂರ್ವಕವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜೈ ಶ್ರೀರಾಮ್ ಎಂದು ಕೂಗಿದವರನ್ನು ಖಂಡಿತವಾಗಿ ಪತ್ತೆಹಚ್ಚಬೇಕಿದೆ. ಯಾರು ಇದರಲ್ಲಿ ಒಳಗೊಂಡಿದ್ದಾರೋ ಅವರನ್ನು ಬಿಜೆಪಿ ಪಕ್ಷ ಹುಡುಕಬೇಕಿದೆ. ಇಂದು ಒಂದು ರೀತಿಯಲ್ಲಿ ವಿಧ್ವಂಸಕ ಕೃತ್ಯವೇ ಆಗಿದೆ ಎಂದು ಜಿಷ್ಣು ಬಸು ಹೇಳಿದರು.
ಇನ್ನು ಬಂಗಾಳದ ಬಿಜೆಪಿ ನಾಯಕರೊಬ್ಬರು ಮಾತನಾಡಿ ಕಾರ್ಯಕ್ರಮದಲ್ಲಿ ಮೋದಿ ಪಕ್ಕದಲ್ಲೇ ಕುಳಿತಿದ್ದ ಮಮತಾ ಅವರು ಜೈ ಶ್ರೀ ರಾಮ್ ಘೋಷಣೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರು. ಬಿಜೆಪಿಯನ್ನು ಮುಜುಗರಕ್ಕೀಡುಮಾಡಲು ಕ್ಷಿಪ್ರವಾಗಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದರು ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)