ಮುಂಬೈ: ಬಾಲಿವುಡ್ ನಟರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಸಹೋದರಿಯ ಹೆಸರಿನಲ್ಲಿ 4.5 ಕೋಟಿ ರೂ. ನಿಶ್ಚಿತ ಠೇವಣಿ ಇರಿಸಿದ್ದರು. ಇದರ ಬಡ್ಡಿ ಎಲ್ಲವೂ ಸೇರಿ 4.63 ಕೋಟಿ ರೂ. ಆಗಿತ್ತು. ಆದರೆ, ರಿಯಾ ಚಕ್ರವರ್ತಿ ಅವರು ಸುಶಾಂತ್ ಅವರ ಜೀವನದೊಳಗೆ ಪ್ರವೇಶಿಸುತ್ತಿದ್ದಂತೆ ಈ ನಿಶ್ಚಿತ ಠೇವಣಿಯಿಂದ 2.63 ಕೋಟಿ ರೂ. ಮೊತ್ತವನ್ನು ಇಬ್ಬರು ಲೆಕ್ಕಪರಿಶೋಧಕರ (ಸಿಎ) ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ತನ್ಮೂಲಕ ಅದನ್ನು ಕೇವಲ 2 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ.
2019ರ ಮೇಯಿಂದ 2020ರ ಏಪ್ರಿಲ್ ನಡುವೆ ಈ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ. ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ಸ್ವತಃ ರಿಯಾ ಚಕ್ರವರ್ತಿ ಅವರು ಈ ಬಗ್ಗೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ರಿಯಾ ಅವರ ಒತ್ತಾಸೆಯ ಮೇರೆಗೆ ಸುಶಾಂತ್ ಸಿಂಗ್ ರಜಪೂತ್ ಈ ವರ್ಗಾವಣೆ ಮಾಡಿದ್ದಾರೆ ಎಂದು ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಆರೋಪಿಸಿದ್ದಾರೆ.
ಇದಷ್ಟೇ ಅಲ್ಲ. ಸುಶಾಂತ್ ಅವರ ಹಲವಾರು ಖಾತೆಗಳಲ್ಲಿ ಇದ್ದ ಹಣವನ್ನು ಭಾರಿ ಪ್ರಮಾಣದಲ್ಲಿ ಹಿಂಪಡೆದಿರುವುದು, ಅವುಗಳಿಗೆ ಸಮರ್ಪಕವಾದ ವಿವರಣೆಗಳನ್ನು ಒದಗಿಸದೇ ಇರುವುದನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಿಯಾ ಚಕ್ರವರ್ತಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮುನ್ನ ಬಿಹಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್, ನನ್ನ ಪುತ್ರನ ಬ್ಯಾಂಕ್ ಅಕೌಂಟ್ನಲ್ಲಿ 17 ಕೋಟಿ ರೂ. ನಗದು ಇತ್ತು ಎಂಬುದು ಆ ಬ್ಯಾಂಕ್ ಸ್ಟೇಟ್ಮೆಂಟ್ನಿಂದ ತಿಳಿದುಬರುತ್ತದೆ. ಆದರೆ, ಕಳೆದೊಂದು ಸಾಲಿನಲ್ಲಿ ಈ ಖಾತೆಯಿಂದ ಒಟ್ಟು 15 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಹಣ ವರ್ಗಾವಣೆಗೊಂಡಿರುವ ಬ್ಯಾಂಕ್ ಖಾತೆಗಳಿಗೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ನನ್ನ ಪುತ್ರನಿಗೆ ಸಂಬಂಧಿಸಿದ ಎಲ್ಲ ಬ್ಯಾಂಕ್ ಖಾತೆಗಳ ವಹಿವಾಟಿನಲ್ಲಿ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಅಲ್ಲದೆ, ರಿಯಾ ಅವರು ನನ್ನ ಪುತ್ರನ ಬ್ಯಾಂಕ್ ಖಾತೆಗಳಿಂದ ಹಾಗೂ ಆತನ ಕ್ರೆಡಿಟ್ ಕಾರ್ಡ್ಗಳಿಂದ ಎಷ್ಟೆಲ್ಲ ಹಣವನ್ನು ಹೇರಾಪೇರಿ ಮಾಡಿದ್ದಾರೆ ಎಂಬ ಬಗ್ಗೆಯೂ ತನಿಖೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು.