ನ್ಯೂಸ್

ಮದ್ಯದ ಬಾಟಲಿ ಮೇಲೆ 10 ರೂ. ಹಸುವಿನ ಸೆಸ್​! ಈ ರಾಜ್ಯದ ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ

ಶಿಮ್ಲಾ: ಮದ್ಯ ಮಾರಾಟದ ಮೇಲೆ ಹಿಮಾಚಲ ಪ್ರದೇಶ ಸರ್ಕಾರ ಹಸುವಿನ ಸೆಸ್ ವಿಧಿಸಿದೆ. ಬಜೆಟ್ ಮಂಡನೆ ವೇಳೆ ಮದ್ಯದ ಬಾಟಲಿ ಮಾರಾಟಕ್ಕೆ 10 ರೂಪಾಯಿ ಸೆಸ್ ವಿಧಿಸುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಇದೀಗ ಸೆಸ್​ ವಿಧಿಸಿದ್ದು, ಮದ್ಯ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.

10 ಸೆಸ್​ ವಿಧಿಸಿರುವುದರಿಂದ ವಾರ್ಷಿಕ 100 ಕೋಟಿ ರೂ. ಆದಾಯ ಉತ್ಪತಿ ಆಗುತ್ತದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್​ ಸುಖು ಅವರು ತಿಳಿಸಿದ್ದು, ಈ ಆದಾಯವನ್ನು ಗೋವುಗಳ ಸೌಕರ್ಯವನ್ನು ಸುಧಾರಿಸಲು ಖರ್ಚು ಮಾಡುವುದಾಗಿ ತಿಳಿಸಿದ್ದಾರೆ.

ಹಿಮಾಚಲ ಸರ್ಕಾರದ ಬಜೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ಕೂಟರ್ ಖರೀದಿಸಲು ತಲಾ 25,000 ರೂ.ಗಳ ಸಹಾಯಧನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಯೋಜನೆಗಳ ಘೋಷಣೆಯೂ ಸೇರಿದೆ. ಶೇ. 2ರಷ್ಟು ಬಡ್ಡಿಯಲ್ಲಿ ರೈತರಿಗೆ ಸಾಲ ನೀಡುವ ಯೋಜನೆಯೂ ಇದೆ.

ಇದಕ್ಕೂ ಮುನ್ನ ಉತ್ತರ ಪ್ರದೇಶ ಸರ್ಕಾರವು ಹಸುಗಳಿಗೆ ಆಶ್ರಯ ತಾಣ ನಿರ್ಮಿಸಲು ಶೇ.0. 5ರಷ್ಟು ಸೆಸ್ ವಿಧಿಸಿತ್ತು. ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಇದೇ ರೀತಿ ಹಸುವಿನ ಸೆಸ್ ಅನ್ನು ಜಾರಿಗೆ ತಂದಿದೆ. 2019 ರಿಂದ 2022ರ ಅವಧಿಯಲ್ಲಿ ರಾಜಸ್ಥಾನ ಸರ್ಕಾರವು ಹಸುವಿನ ಸೆಸ್ ಮೂಲಕ 2176 ಕೋಟಿ ರೂ.ಗಳನ್ನು ಸಂಗ್ರಹಿಸಿದೆ, ಆದರೆ ಇದರಲ್ಲಿ ಇಲ್ಲಿಯವರೆಗೆ ಕೇವಲ 5. 20 ಕೋಟಿ ರೂ. ಮಾತ್ರ ಖರ್ಚು ಮಾಡಿದೆ. (ಏಜೆನ್ಸೀಸ್​)