ನ್ಯೂಸ್

ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿದ್ದ ರೌಡಿ ರಾಜೇಶ್ ಬಂಧನ

ಬೆಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ರಾಜೇಶ ಅಲಿಯಾಸ್ ಕರಿಯ ರಾಜೇಶ ಎಂಬಾತನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ನಗರದ ರೌಡಿ ರಾಜೇಶ್, 2006ರಿಂದ ದರೋಡೆ, ಮಾದಕ ದ್ರವ್ಯ ಮಾರಾಟ, ಕೊಲೆಗೆ ಸಂಚು, ಕೊಲೆಗೆ ಯತ್ನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕುಖ್ಯಾತ ರೌಡಿ ಪರಂದಾಮ ಮತ್ತು ಬಾಂಬೆ ರವಿ ಸಹಚರರಾಗಿದ್ದ. ಈತನ ವಿರುದ್ಧ ಕಾಟನ್‌ಪೇಟೆ, ಹನುಮಂತನಗರ, ಬಸವನಗುಡಿ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ, ಕೊಲೆಗೆ ಸಂಚು ಸೇರಿದಂತೆ 10 ಪ್ರಕರಣಗಳು ದಾಖಲಾಗಿವೆ.

ಇತ್ತೀಚೆಗೆ ಚಲನಚಿತ್ರ ಖ್ಯಾತ ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು ರೂಪಿಸಿದ್ದ. 6 ಪ್ರಕರಣಗಳಲ್ಲಿ ಕೋರ್ಟ್‌ನಿಂದ ಖುಲಾಸೆಗೊಂಡಿದ್ದ. ಉಳಿದಂತೆ ನಾಲ್ಕು ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು. ಇದೀಗ ರೌಡಿ ರಾಜೇಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.