ನ್ಯೂಸ್

ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ರೌಡಿ ದಡಿಯಾ ಕೊನೆಗೂ ಫಿನಿಶ್

kumarvrl

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಯೊಬ್ಬನ ಮೇಲೆ ದುಷ್ಕರ್ಮಿಗಳು ಮಾರಕಾಸಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಚಂದ್ರಾ ಲೇಔಟ್‌ನ ಅಶೋಕ್ ಅಲಿಯಾಸ್ ದಡಿಯಾ (28) ಕೊಲೆಯಾದ ರೌಡಿ ಶೀಟರ್. ಗುರುವಾರ (ಮೇ 7) ರಾತ್ರಿ 11 ಗಂಟೆಯಲ್ಲಿ ಮಾರುತಿನಗರದ 9ನೇ ಕ್ರಾಸ್‌ನಲ್ಲಿ ದುಷ್ಕರ್ಮಿಗಳು ಮಾರಕಾಸಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಬ್ಯಾಟರಾಯನಪುರ ಪೊಲೀಸರು ತಿಳಿಸಿದ್ದಾರೆ.

ರೌಡಿ ಅಶೋಕ್ ಈ ಹಿಂದೆ ಮಾರುತಿನಗರದ 9ನೇ ಕ್ರಾಸ್‌ನಲ್ಲಿ ವಾಸಿಸುತ್ತಿದ್ದ. ಕೊಲೆ ಯತ್ನ, ಸುಲಿಗೆ, ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ. ಆತನ ಹೆಸರನ್ನು ಬ್ಯಾಟರಾಯನಪುರ ಠಾಣೆಯ ರೌಡಿ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಇತ್ತೀಚೆಗೆ ಆತ ಚಂದ್ರಾ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಆದರೆ, ಕೆಲ ಪುಂಡರ ಗ್ಯಾಂಗ್ ಕಟ್ಟಿಕೊಂಡು ಅಲೆಯುವುದನ್ನು ಬಿಟ್ಟಿರಲಿಲ್ಲ. ಮಾರುತಿನಗರದ 9ನೇ ಅಡ್ಡರಸ್ತೆಯನ್ನು ತನ್ನ ಅಡ್ಡಾ ಮಾಡಿಕೊಂಡಿದ್ದು, ಆಗಾಗ ಬಂದು ಹೋಗುತ್ತಿದ್ದ.

ಮಾರುತಿನಗರದಲ್ಲಿ ಗುರುವಾರ ರಾತ್ರಿ ಒಂಟಿಯಾಗಿದ್ದಾಗ ಏಕಾಏಕಿ ದಾಳಿ ನಡೆಸಿದ್ದ ಕೆಲ ದುಷ್ಕರ್ಮಿಗಳು ಮಾರಕಾಸಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ದಡಿಯಾ ಸ್ಥಳದಲ್ಲೇ ಮೃತಪಟ್ಟಿದ್ದ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಎದುರಾಳಿ ಗ್ಯಾಂಗ್‌ನವರು ಸಂಚು ರೂಪಿಸಿ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ.

ಘಟನಾ ಸ್ಥಳದಲ್ಲಿನ ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ದೃಶ್ಯದಲ್ಲಿನ ಕೆಲ ದುಷ್ಕರ್ಮಿಗಳ ಮುಖಚಹರೆ ಗುರುತಿಸಲಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.