ನ್ಯೂಸ್

ರೂಮ್​ ನಂ. 204ರ ರಹಸ್ಯ ಬಯಲು: ಪಾಕ್​ ಮಹಿಳೆ ಸೀಮಾ ಜತೆ ಸಚಿನ್​ ರೀಲ್ಸ್​, ಮಹತ್ವದ ಮಾಹಿತಿ ಬೆಳಕಿಗೆ

ನವದೆಹಲಿ: ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್​ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಈಕೆ ನಿಜವಾಗಿಯೂ ಪ್ರೀತಿಯನ್ನು ಅರಸಿ ಬಂದಿದ್ದಾಳಾ? ಅಥವಾ ಪಾಕಿಸ್ತಾನದ ಏಜೆಂಟ್​ ಇರಬಹುದಾ? ಎಂಬ ಸಂಶಯ ವ್ಯಕ್ತವಾಗಿದ್ದು, ಆಕೆಯ ನಡೆ ದಿನದಿಂದ ದಿನಕ್ಕೆ ನಿಗೂಢತೆಯನ್ನು ಹೆಚ್ಚಿಸುತ್ತಿದೆ. ಇದೀಗ ಸೀಮಾ ಕುರಿತ ಮತ್ತೊಂದು ಇಂಟೆರೆಸ್ಟಿಂಗ್​ ಸಂಗತಿ ಬಯಲಾಗಿದೆ.

ಸೀಮಾ ಭಾರತ ಪ್ರವೇಶಿಸುವ ಮುನ್ನ ಒಂದು ವಾರಗಳ ಕಾಲ ನೇಪಾಳದ ಕಾಠ್ಮಂಡುವಿನ ಹೋಟೆಲ್​ನಲ್ಲಿ ಪ್ರಿಯಕರ ಸಚಿನ್​ ಮೀನಾ ಜತೆ ಉಳಿದುಕೊಂಡಿದ್ದಳು ಮತ್ತು ರೂಮ್​ ಬುಕ್​ ಮಾಡಲು ಇಬ್ಬರು ನಕಲಿ ಹೆಸರುಗಳನ್ನು ಬಳಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಮಕ್ಕಳ ಜತೆ ರೀಲ್ಸ್​ 

ಇಬ್ಬರು ಉಳಿದುಕೊಂಡಿದ್ದ ಕಾಠ್ಮಂಡುವಿನ ನ್ಯೂ ವಿನಾಯಕ್​ ಹೋಟೆಲ್​ಗೆ ಇಂಡಿಯಾ ಟುಡೆ ಭೇಟಿ ನೀಡಿ ವರದಿ ಮಾಡಿದೆ. ಇಬ್ಬರು ಮಾರ್ಚ್​ ತಿಂಗಳಲ್ಲಿ ಹೋಟೆಲ್​ನಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಸೀಮಾ ಮತ್ತು ಸಚಿನ್​ ಹೆಚ್ಚೆಚ್ಚು ಇನ್​ಸ್ಟಾಗ್ರಾಂ ರೀಲ್ಸ್​ ಮಾಡುತ್ತಿದ್ದರು. ರೂಮ್​ ಬುಕ್​ ಮಾಡಿಕೊಟ್ಟ ಹೋಟೆಲ್​ ರೆಸೆಪ್ಶನಿಸ್ಟ್​ ಗಣೇಶ್​ ರೊಕಂಗರ್​ ಮಕ್ಕಳ ಜತೆ ಇಬ್ಬರು ರೀಲ್ಸ್​ ಮಾಡಿದ್ದಾರೆ. ಇಬ್ಬರು ರೂಮ್​ 204ರಲ್ಲಿ ಉಳಿದುಕೊಂಡಿದ್ದರು.

ಐಡಿ ಕಾರ್ಡ್​ ಇರಲಿಲ್ಲ

ಸಚಿನ್​ ಮೀನಾ ಮೊದಲು ಏಕಾಂಗಿಯಾಗಿ ಬಂದು ರೂಮ್​ ಮಾಡಿದನು ಮತ್ತು ಆತನ ಪತ್ನಿ ಸೀಮಾ ತಡವಾಗಿ ಬಂದು ಆತನನ್ನು ಸೇರಿದಳು ಎಂದು ಗಣೇಶ್​ ಹೇಳಿದ್ದಾರೆ. ಅವರು ಬಳಿ ಯಾವುದೇ ಐಡಿ ಕಾರ್ಡ್​ ಇರಲಿಲ್ಲ. ರಿಜಿಸ್ಟರ್​ನಲ್ಲಿ ಇಬ್ಬರು ತಮ್ಮ ಹೆಸರನ್ನು ಮಾತ್ರ ಬರೆದರು. ಆದರೆ, ರಿಜಿಸ್ಟರ್​ ಪರಿಶೀಲಿಸಿದಾಗ ಅವರ ಹೆಸರನ್ನು ಎಲ್ಲೆಲ್ಲಿಯೋ ಬರೆದಿದ್ದರು ಎಂದು ತಿಳಿಸಿದ್ದಾರೆ.

ಪಬ್‌ಗಳಿಗೆ ಹೋಗುವ ಆಸಕ್ತಿ 

ಗಣೇಶ್​ ಕುಟುಂಬದ ಜತೆ ಸೀಮಾ ಮತ್ತು ಸಚಿವ್​ ತುಂಬಾ ಆಪ್ತರಾಗಿದ್ದರು. ಗಣೇಶ್​ ಅವರ ಮಕ್ಕಳ ಜತೆ ಅವರು ರೀಲ್ಸ್​ ಮಾಡಿರುವ ವಿಡಿಯೋ ಲಭ್ಯವಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಆಕೆ ಪಾಕಿಸ್ತಾನದವಳು ಎಂದು ಸುಳಿವು ಬಿಟ್ಟು ಕೊಡಲೇ ಇಲ್ಲ. ಆಕೆ ಮತ್ತು ಸಚಿನ್​ ತಮ್ಮ ರೂಮಿನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಇದೊಂದು ಸಣ್ಣ ರೂಮ್​ ಆಗಿದ್ದು, ಒಂದು ಕನ್ನಡಿ ಮತ್ತು ಎರಡು ಬೆಡ್​ಗಳನ್ನು ಹೊಂದಿವೆ. ಸೀಮಾ ಹೈದರ್ ಕ್ಲಬ್‌ಗಳು ಮತ್ತು ಪಬ್‌ಗಳಿಗೆ ಹೋಗುವ ಆಸಕ್ತಿ ತೋರಿದಳು. ಆದರೆ ಅಲ್ಲಿ ಭಾರತೀಯ ಜನರು ಮೋಸ ಹೋಗಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ವಿವರಣೆ ನೀಡಿದಾಗ ಹೋಗಲು ಹಿಂದೇಟು ಹಾಕಿದರು. ಸುಮಾರು ಒಂದು ವಾರಗಳ ಕಾಲ ಹೋಟೆಲ್​ನಲ್ಲಿ ಉಳಿದುಕೊಂಡ ಬಳಿಕ ಇದ್ದಕ್ಕಿಂತೆ ಟ್ಯಾಕ್ಸಿ ಮಾಡಿಕೊಂಡು ಇಬ್ಬರು ಪೊಖರಾ ಕಡೆ ಹೊರಟರು ಎಂದು ಗಣೇಶ್​ ಮಾಹಿತಿ ನೀಡಿದ್ದಾರೆ.

ಪಾಕ್​ ಸೇನೆಯಲ್ಲಿ ಸೀಮಾ ಚಿಕ್ಕಪ್ಪ

ಇನ್ನು ಆಕೆಯ ಪಾಕಿಸ್ತಾನಿ ಗುರುಚಿತ ಚೀಟಿ ತೀರಾ ಇತ್ತೀಚಿನದು ಮತ್ತು 2022ರಲ್ಲಿ ಅದನ್ನು ಮಾಡಲಾಗಿದೆ. ಕೆಲವು ಇಂಗ್ಲಿಷ್​ ಸಾಲುಗಳನ್ನು ಓದಲು ತನಿಖಾಧಿಕಾರಿಗಳು ಹೇಳಿದಾಗ, ಆಕೆ ಸ್ಪಷ್ಟವಾಗಿ ಮತ್ತು ಹರಳು ಹುರಿದಂತೆ ಪಟಪಟನೆ ಓದಿದ್ದಾಳೆ. ಆದರೆ, ತಾನು ಐದನೇ ತರಗತಿ ಮಾತ್ರ ಓದಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದಾಳೆ. ಕೆಲವು ವರದಿಗಳ ಪ್ರಕಾರ, ಸೀಮಾ ಹೈದರ್​ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಆಕೆಯ ಸಹೋದರ ಆರ್ಮಿ ಸೇರಲು ತಯಾರಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಹಲವು ಪಬ್​ಜಿ ಖಾತೆಗಳು

ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ ಕುರಿತು ಕೆಲವು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಪಬ್ಜಿ ಆಡುವಾಗ ಭಾರತೀಯ ಮೂಲದ ಸಚಿನ್​ ಎಂಬ ಯುವಕನ ಪ್ರೀತಿಯ ಬಲೆಗೆ ಬಿದ್ದು ಆತನಿಗಾಗಿ ಬಂದಿರುವುದಾಗಿ ಹೇಳಿಕೊಳ್ಳುತ್ತಿರುವ ಸೀಮಾ, ತನ್ನ ಹೆಸರಿನಲ್ಲಿ ಅನೇಕ ಪಬ್​ಜಿ ಖಾತೆಗಳನ್ನು ಹೊಂದಿದ್ದು, ಈ ಹಿಂದೆ ದೆಹಲಿ ಮೂಲದ ಅನೇಕ ಯುವಕರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಪರಿಚಯ ಹೇಗಾಯ್ತು?

ಸೀಮಾ, ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಸಂಬಂಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕಳೆದ ಮೇ ತಿಂಗಳಲ್ಲಿ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಕಠ್ಮಂಡುವಿನಿಂದ ದೆಹಲಿಗೆ ಬಸ್‌ನಲ್ಲಿ ಪ್ರಯಾಣಿಸಿ, ಅಲ್ಲಿಂದ ಗ್ರೇಟರ್​ ನೋಯ್ಡಾಗೆ ಬಂದು ತನ್ನ ಪ್ರಿಯಕರನ್ನು ಸೇರಿದ್ದಾಳೆ. ಸೀಮಾ ಮತ್ತು ಸಚಿನ್ ಮೀನಾ ಅವರು 2019 ರಲ್ಲಿ PUBG ಆಡುವಾಗ ಮೊದಲು ಪರಿಚಯವಾಯಿತು ಎಂದು ಹೇಳಿಕೊಂಡಿದ್ದಾರೆ. ಸೀಮಾ ಭಾರತಕ್ಕೆ ಬಂದ ಬಳಿಕ ಪಶುಪತಿನಾಥ ದೇವಸ್ಥಾನದಲ್ಲಿ ಇಬ್ಬರು ವಿವಾಹವಾದೆವು ಎಂದು ಸಚಿನ್​ ಹೇಳಿಕೆ ನೀಡಿದ್ದಾನೆ. ಮೀನಾ ಕುಟುಂಬವು ಸೀಮಾಳ ಜತೆ ಆಕೆಯ ನಾಲ್ವರು ಮಕ್ಕಳನ್ನು ಒಪ್ಪಿಕೊಂಡು ತಮ್ಮ ಜತೆ ಇರಿಸಿಕೊಂಡಿದ್ದಾರೆ.

ಜುಲೈ 4 ರಂದು ಗ್ರೇಟರ್ ನೋಯ್ಡಾ ಪೊಲೀಸರು ಸೀಮಾ, ಸಚಿನ್ ಮತ್ತು ಸಚಿನ್ ಅವರ ತಂದೆಯನ್ನು ಬಂಧಿಸಿದ್ದರು. ಆದರೆ, ಜುಲೈ 7ರಂದು ಮೂವರಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ. (ಏಜೆನ್ಸೀಸ್​)