ಬೆಂಗಳೂರು: ತೃತೀಯ ಲಿಂಗಿಗಳು ನಡೆಸುತ್ತಿದ್ದ ಮಸಾಜ್ ಪಾರ್ಲರ್ಗೆ ಗ್ರಾಹಕರ ಸೋಗಿನಲ್ಲಿ ಬಂದು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಶಿವ ಹಾಗೂ ಸಮೀರ್ ಬಂಧಿತ ಆರೋಪಿಗಳು.
ಮಂಗಳಮುಖಿ ಹೊಟ್ಟೆಪಾಡಿಗಾಗಿ ಬ್ಯೂಟಿಷಿಯನ್ ಕೆಲಸದ ಜತೆಗೆ, ಬಿಡುವಿನ ಸಮಯದಲ್ಲಿ ಬಾಡಿ ಮಸಾಜ್ ಸರ್ವೀಸ್ ಕೊಡುತ್ತಿದ್ದಳು. ಈಕೆಯ ಬಳಿಗೆ ಬಾಡಿ ಮಸಾಜ್ ಮಾಡಿಸಲೆಂದು ಬರುತ್ತಿದ್ದ ಶಿವ ಹಾಗೂ ಸಮೀರ್ ಆಕೆಯ ಮನೆಯನ್ನೇ ಕಳ್ಳತನ ಮಾಡಿದ್ದಾರೆ.
ಬಂಧಿತ ಸಮೀರ್ ಎಂಬಾತ ಹುಕ್ಕಾಬಾರ್ ನಡೆಸುತ್ತಿದ್ದ. ಇದೇ ಬಾರ್ ಶಿವ ಕೆಲಸ ಮಾಡುತ್ತಿದ್ದ. ಸಮೀರ್ ತೃತೀಯಲಿಂಗಿಗಳಿಂದ ಬಾಡಿ ಮಸಾಜ್ ಮಾಡಿಸಿಕೊಳ್ಳುವ ಚಟ ಬೆಳೆಸಿಕೊಂಡಿದ್ದ. ಹೀಗಾಗಿ ಪುಖಂಬಮ್ ಪ್ರಶಾಂತ ಎಂಬ ತೃತೀಯ ಲಿಂಗಿಯ ಮನೆಗೆ ಆನ್ಲೈನ್ನಲ್ಲಿ ಸರ್ವೀಸ್ ಬುಕ್ ಮಾಡಿಕೊಂಡು ಮಸಾಜ್ ಮಾಡಿಸಿಕೊಳ್ಳಲು ಹೋಗುತ್ತಿದ್ದ.
ಕಳೆದ ನಾಲ್ಕು ವರ್ಷಗಳಿಂದ ಮಸಾಜ್ಗೆ ಮಾಡಿಸಿಕೊಳ್ಳಲು ಪುಖಂಬಮ್ ಪ್ರಶಾಂತನ ಮನೆಗೆ ಬಂದು ಹೋಗುತ್ತಿದ್ದ. ಹೀಗಾಗಿ ಇವರ ಬಳಿ ಹಣ ಹಾಗೂ ಚಿನ್ನಾಭರಣ ಇರುವ ಬಗ್ಗೆ ಅರಿತಿದ್ದ. ಜತೆಗೆ ಅವರ ಡೆಬಿಟ್ ಕಾರ್ಟ್ನ ಪಿನ್ ನಂಬರ್ನ್ನೂ ತಿಳಿದುಕೊಂಡಿದ್ದ. ನಂತರ ಕಳ್ಳತನ ಮಾಡಲು ಸಮೀರ್ ಯೋಜನೆ ರೂಪಿಸಿಕೊಂಡಿದ್ದ.
ತನ್ನ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಶಿವ ಎಂಬಾತನಿಂದ ಕಳ್ಳತನ ಮಾಡಿಸಲು ಸಮೀರ್ ಮುಂದಾಗಿದ್ದ. ತಾನೇ ನೇರವಾಗಿ ಕಳವು ಮಾಡಿದ್ರೆ ಎಲ್ಲಿ ತೃತೀಯಲಿಂಗಿಗಳಿಗೆ ವಿಷಯ ತಿಳಿಯುತ್ತೋ ಎಂಬ ಕಾರಣಕ್ಕೆ ಶಿವನಿಂದ ಕಳ್ಳತನ ಮಾಡಿಸಲು ತೀರ್ಮಾನಿಸಿದ್ದ. ಇದಕ್ಕಾಗಿ ಬಾಡಿ ಮಸಾಜ್ಗೆ ಶಿವನನ್ನು ಕಳುಹಿಸಿದ್ದ.
ಎರಡು-ಮೂರು ಬಾರಿ ಆನ್ಲೈನ್ನಲ್ಲಿ ಬಾಡಿ ಮಸಾಜ್ಗೆಂದು ಬಂದ ಶಿವ, ತೃತೀಯ ಲಿಂಗಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಒಮ್ಮೆ ಮಸಾಜ್ಗೆ ಬಂದಾಗಲೇ ಡ್ರಿಂಕ್ಸ್ನಲ್ಲಿ ಮತ್ತು ತರಿಸುವ ಔಷಧಿ ಬೆರೆಸಿ ಅವರ ಬಳಿಯಿದ್ದ ಚಿನ್ನ ಹಾಗೂ ಡೆಬಿಟ್ ಕಾರ್ಡ್ ಕಳವು ಮಾಡಿಕೊಂಡು ಶಿವ ಎಸ್ಕೇಪ್ ಆಗಿದ್ದಾನೆ.
ಶಿವ ಕಳ್ಳತನ ನಡೆಸಿದಾಗ ಸಮೀರ್ ತೃತೀಯಲಿಂಗಿಯ ಜತೆಯಲ್ಲೇ 2 ದಿನ ಇದ್ದ. ಕಳವು ಮಾಡಿ ಎಸ್ಕೇಪ್ ಆಗಿದ್ದ ಶಿವ ಆಕೆಯ ಡೆಬಿಟ್ ಕಾರ್ಡ್ನಿಂದ ಹಂತ ಹಂತವಾಗಿ ಐದು ಲಕ್ಷ ಡ್ರಾ ಮಾಡಿಕೊಂಡಿದ್ದಾನೆ. ಶಿವ ಹಣ ತೆಗೆದಾಗಲೆಲ್ಲ ಆಕೆಯ ಮೊಬೈಲ್ಗೆ ಮೆಸೇಜ್ ಬರುತ್ತಿದ್ದಂತೆ, ಆ ಮೆಸೇಜ್ಗಳನ್ನೆಲ್ಲಾ ಸಮೀರ್ ಡಿಲೀಟ್ ಮಾಢುತ್ತಿದ್ದ. ಹೀಗಾಗಿ ಹಣ ಕಟ್ ಆಗುತ್ತಿದ್ದುದು ತೃತೀಯಲಿಂಗೆಗೆ ತಿಳಿದಿರಲಿಲ್ಲ. ನಂತರ ಅಕೌಂಟ್ ಪರಿಶೀಲನೆ ನಡೆಸಿದಾಗ ಹಣ ಕಟ್ ಆಗಿರುವುದು ಅರಿವಿಗೆ ಬಂದಿದೆ.
ಪ್ರಕರಣದ ಸಂಬಂಧ ತೃತೀಯಲಿಂಗಿ ಪುಖಂಬಮ್ ಪ್ರಶಾಂತ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕದ್ದ ಚಿನ್ನಾಭರಣ, ನಗದು ಹಣ ಹಾಗೂ ಡೆಬಿಟ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ. ಇನ್ನು ಸಮೀರ್ ಮಡೆಸುತ್ತಿದ್ದ ಹುಕ್ಕಾ ಬಾರ್ ಲಾಸ್ನಲ್ಲಿ ನಡೆಯುತ್ತಿದ್ದು, ಆತನ ಐಷಾರಾಮಿ ಜೀವನ ಶೈಲಿಯೇ ಈ ಕಳ್ಳತನಕ್ಕೆ ಕಾರಣ ಅನ್ನೋದು ತನಿಖೆಯಿಂದ ತಿಳಿದು ಬಂದಿದೆ.