ನ್ಯೂಸ್

ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಚಾಣಾಕ್ಷ ಸರಗಳ್ಳ ಕಡೆಗೂ ಲಾಕ್​! ಚಿನ್ನಾಭರಣಗಳು ವಶಕ್ಕೆ

ಚಾಮರಾಜನಗರ: ಸರಗಳ್ಳತನ, ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚಾಣಾಕ್ಷ ಸರಗಳ್ಳನನ್ನು ಬಂಧಿಸುವಲ್ಲಿ ಇದೀಗ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಮೇಗಲಹುಂಡಿ ಗ್ರಾಮದ ಸುರೇಶ್ ಆಲಿಯಾಸ್ ಸೂರಪ್ಪನನ್ನು (31) ಸಂತೇಮರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ಆರೋಪಿಯಿಂದ ಒಂದು ಕಬ್ಬಿಣದ ರಾಡು, ಚಾಕು, 72 ಚಿನ್ನದ ಗುಂಡುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಸುರೇಶ್ ಆ.23ರಂದು ಮಂಗಲ ಹೊಸೂರು ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ, ಎದುರಿಸಿ ಸುಮಾರು 20 ಸಾವಿರ ರೂ. ಬೆಲೆಬಾಳುವ 72 ಚಿನ್ನದ ಗುಂಡುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಅದಲ್ಲದೇ ಆರೋಪಿಯ ಸಂತೇಮರಹಳ್ಳಿ, ಯಳಂದೂರು, ಹನೂರು, ಚಾಮರಾಜನಗರ ಗ್ರಾಮಾಂತರ, ಮೈಸೂರು ಜಿಲ್ಲೆಯ ಕವಲಂದೆ, ವರುಣಾ ಪೊಲೀಸ್ ಠಾಣೆ, ಮೈಸೂರು ದಕ್ಷಿಣ, ಟಿ.ನರಸೀಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕಳ್ಳತನ, ಹಲವು ಸರಗಳ್ಳತನ, ಬೈಕ್ ಕಳ್ಳತನ ಮಾಡಿರುವುದಾಗಿ ಕಂಡುಬಂದಿದೆ.

ಆರೋಪಿಯ ಮೇಲೆ ಈಗಾಗಲೇ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ 2, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 4, ಯಳಂದೂರು ಪೊಲೀಸ್ ಠಾಣೆಯಲ್ಲಿ 2, ಕವಲಂದೆ, ಕೆ.ಎಂ.ದೊಡ್ಡಿ, ಮೈಸೂರು ದಕ್ಷಿಣ ಹಾಗೂ ವರುಣಾ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದ್ದು, ತಪ್ಪಿತಸ್ಥನನ್ನು ಪತ್ತೆಹಚ್ಚಿದ ಪೊಲೀಸ್ ತಂಡಕ್ಕೆ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ 25 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.