Bengaluru: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಕೆಲ ದಿನಗಳಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉದ್ಯಮಿಗಳಾದ ಮೋಹನ್ ದಾಸ್ ಪೈ ಮತ್ತು ಕಿರಣ್ ಮಜುಂದಾರ್ ಶಾ ವಿರುದ್ಧ ಅವರಿಗೆ ಯಾವುದೋ ವೈಯಕ್ತಿಕ ಅಜೆಂಡಾ ಇರಬಹುದು ಎಂದು ಶನಿವಾರ(ಅ. 18) ಡಿಸಿಎಂ ಡಿ.ಕೆ.ಶಿವಕುಮಾರ್(D K Shivakumar) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಕೆಲಸ ನಡೆಯುತ್ತಿದೆ. ಆದರೆ ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಯಾವುದೋ ವೈಯಕ್ತಿಕವಾಗಿ ಅಜೆಂಡಾ ಇಟ್ಟುಕೊಂಡು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಅವರು ಯಾಕೆ ಬಾಯಿ ತೆಗೆಯಲಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನೂ ಡಿಸಿಎಂ ಡಿಕೆಶಿ ಹೇಳಿಕೆಗೆ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕಿರಣ್ ಮಜುಂದಾರ್ ಶಾ, ಡಿಕೆಶಿಯವರ ಮಾತು ನಿಜವಲ್ಲ. ಟಿ.ವಿ.ಮೋಹನ್ ದಾಸ್ ಪೈ ಮತ್ತು ನಾನು, ಇಬ್ಬರೂ ನಮ್ಮ ನಗರದಲ್ಲಿನ ಮೂಲಸೌಕರ್ಯಗಳು ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಇದ್ದಾಗಲೂ ಟೀಕಿಸಿದ್ದೇವೆ. ನಮಗೆ ಯಾವುದೇ ವೈಯಕ್ತಿಕ ಅಜೆಂಡಾಗಳಿಲ್ಲ. ನಮ್ಮ ಅಜೆಂಡಾ ಉತ್ತಮ ರಸ್ತೆಗಳನ್ನು ನಿರ್ಮಿಸುವುದು ಎಂದು ತಿರುಗೇಟು ನೀಡಿದ್ದಾರೆ.