ನ್ಯೂಸ್

ಮಗ ತೇಜ್ ಪ್ರತಾಪ್​ನನ್ನು ಪಕ್ಷ ಹಾಗೂ ಕುಟುಂಬದಿಂದ ಹೊರಹಾಕಿದ RJD ಮುಖ್ಯಸ್ಥ ಲಾಲು ಯಾದವ್| tej-pratap-yadav

ಪಾಟ್ನಾ| ಮಾಜಿ ಸಚಿವ ಹಾಗೂ ರಾಷ್ಟ್ರೀಯ ಜನತಾ ದಳದ ಶಾಸಕ ತೇಜ್ ಪ್ರತಾಪ್ ಯಾದವ್ ಅವರನ್ನು ರಾಷ್ಟ್ರೀಯ ಜನತಾ ದಳದಿಂದ ಉಚ್ಛಾಟಿಸಲಾಗಿದೆ. ಆರ್‌ಜೆಡಿ ಮುಖ್ಯಸ್ಥ ಮತ್ತು ತೇಜ್ ಪ್ರತಾಪ್ ಅವರ ತಂದೆ ಲಾಲು ಯಾದವ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಘೋಷಣೆ ಹೊರಡಿಸಿದ್ದಾರೆ.

ತೇಜ್ ಪ್ರತಾಪ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ವೊಂದು ವಿವಾದಕ್ಕೆ ಕಾರಣವಾಗಿತ್ತು. ಇದರ ಪರಿಣಾಮವಾಗಿ ಲಾಲೂ ಪ್ರಸಾದ್ ಯಾದವ್ ತಮ್ಮ ಹಿರಿಯ ಪುತ್ರನನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಕೂಗೊಂಡಿದ್ದಾರೆ.

ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಅವರು ಬರೆದಿದ್ದಾರೆ. ತೇಜ್ ಪ್ರತಾಪ್​ಗೆ ಇನ್ನಮುಂದೆ ಕುಟುಂಬ ಮತ್ತು ಪಕ್ಷದಲ್ಲಿ ಯಾವುದೇ ಪಾತ್ರ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವುದರಿಂದ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸಾಮೂಹಿಕ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಆರ್‌ಜೆಡಿ ಮುಖ್ಯಸ್ಥರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಹಿರಿಯ ಮಗನ ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆ ನಮ್ಮ ಕೌಟುಂಬಿಕ ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ. ಇದಲ್ಲದೆ ಲಾಲು ಯಾದವ್ ಅವರು ತಮ್ಮ ವೈಯಕ್ತಿಕ ಜೀವನದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಮತ್ತು ಒಳಿತು ಮತ್ತು ಕೆಡುಕುಗಳನ್ನು ನೋಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು. ಅವರೊಂದಿಗೆ ಸಂಬಂಧ ಹೊಂದಿರುವವರು ತಮ್ಮ ಸ್ವಂತ ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಪೋಸ್ಟ್​ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ತೇಜ್ ಪ್ರತಾಪ್ ಯಾದವ್, ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಆ ಫೋಟೋವನ್ನು ದುರುದ್ದೇಶಪೂರ್ವಕವಾಗಿ ಸಂಪಾದಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ನನ್ನ ಮತ್ತು ನನ್ನ ಕುಟುಂಬದ ಹೆಸರು ಕೆಡಿಸುವ ಸ್ಪಷ್ಟ ಪ್ರಯತ್ನ ನಡೆಯುತ್ತಿದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಅಂದಹಾಗೆ ಆಪಾದಿತ ಹ್ಯಾಕಿಂಗ್ ಬಗ್ಗೆ ಅವರು ಔಪಚಾರಿಕ ದೂರು ದಾಖಲಿಸಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

(ಏಜೆನ್ಸೀಸ್)