ಬೆಂಗಳೂರು: ಈ ವರ್ಷದ ಮೊದಲಾರ್ಧದಲ್ಲಿ ತೆರೆಕಂಡ ಪ್ಯಾನ್ ಇಂಡಿಯಾ ‘ಹನು-ಮ್ಯಾನ್’ ಸಿನಿಮಾ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು ಮಾತ್ರವಲ್ಲದೇ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಆದಾಯವನ್ನು ಗಳಿಸಿತು. ಸೂಪರ್ಹಿಟ್ ಚಿತ್ರವಾಗಿ ಹೊರಹೊಮ್ಮಿದ ನಟ ತೇಜ ಸಜ್ಜ ಅಭಿನಯದ ಈ ಸಿನಿಮಾ, ಅದ್ಭುತ ವಿಎಫ್ಎಕ್ಸ್ ಕೆಲಸಗಳಿಂದಲೇ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಹನು-ಮ್ಯಾನ್ ಬ್ಲಾಕ್ಬಸ್ಟರ್ ಆದ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ವರ್ಮಾ ಇದೀಗ ದಾಪುಗಾಲಿಟ್ಟಿದ್ದು, 'ಜೈ ಹನುಮಾನ್' ಎಂಬ ಸೀಕ್ವೆಲ್ ಸಿನಿಮಾ ತೆಗೆಯುವಲ್ಲಿ ಇದೀಗ ಸಖತ್ ಬಿಜಿಯಾಗಿದ್ದಾರೆ. (Rishab Shetty In Jai Hanuman)
ಇದು ಪ್ರಶಾಂತ್ ವರ್ಮಾ ಸಿನೆಮ್ಯಾಟಿಕ್ ಯೂನಿವರ್ಸ್ನ (PVCU) ಭಾಗವಾಗಿದ್ದು, ಚಿತ್ರದ ಸ್ಕ್ರಿಪ್ಟ್ ಈಗಾಗಲೇ ಮುಕ್ತಾಯಗೊಂಡಿದ್ದು, ಪ್ರಸ್ತುತ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಇನ್ನು ಈ ಮಧ್ಯೆ ಡೈರೆಕ್ಟರ್ ಪ್ರಶಾಂತ್, ರಾಷ್ಟ್ರಪ್ರಶಸ್ತಿ ವಿಜೇತ ನಟನನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ವಿಶೇಷ ಕೋರಿಕೆಯನ್ನು ಮಾಡಿಕೊಂಡಿದ್ದಾರೆ ಎಂಬ ವಿಚಾರ ಇದೀಗ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ, ಚಿತ್ರತಂಡ ಸಿನಿಮಾದ ಪ್ರಮುಖ ಪಾತ್ರಗಳ ಬಗ್ಗೆ ಯಾವುದೇ ವಿವರಗಳನ್ನು ಬಿಟ್ಟುಕೊಟ್ಟಿಲ್ಲ. ಆದ್ರೆ, ಹರಿದಾಡುತ್ತಿರುವ ವದಂತಿಗಳ ಪ್ರಕಾರ, ಚಿತ್ರದ ಪ್ರಮುಖ ಪಾತ್ರದಲ್ಲಿ 'ಕಾಂತಾರ' ನಟ ರಿಷಭ್ ಶೆಟ್ಟಿ ನಟಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಸಲಿಗೆ ಇದು ಎಷ್ಟು ನಿಜ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ.
'ಜೈ ಹನುಮಾನ್' ಚಿತ್ರದ ಮೂಲಕ ಪ್ರಶಾಂತ್ ವರ್ಮಾ ಮೊದಲ ಬಾರಿಗೆ ಭಾರತೀಯ ಬೆಳ್ಳಿಪರದೆಯ ಮೇಲೆ ಡ್ರ್ಯಾಗನ್‌ಗಳನ್ನು ತರಲು ದೊಡ್ಡ ಹೆಜ್ಜೆಯಿಟ್ಟಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ನಿರ್ಮಾಣ ಮತ್ತು ವಿಎಫ್ಎಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯ ಅಗತ್ಯವಿರುವ ಹಿನ್ನಲೆ ಚಿತ್ರದ ಬಿಡುಗಡೆ ದಿನಾಂಕ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಈ ಹಿಂದೆ ಚಿತ್ರದ ತಯಾರಕರು ತಿಳಿಸಿರುವಂತೆ ಜೈ ಹನುಮಾನ್ ಸಿನಿಮಾ 2026ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. 'ಹನು-ಮ್ಯಾನ್' ಚಿತ್ರವನ್ನು ಹೇಗೆ ವಿಎಫ್ಎಕ್ಸ್ ಕೆಲಸಗಳು ಗೆಲ್ಲಿಸಿತೋ ಅದೇ ರೀತಿ ಈ ಬಹುನಿರೀಕ್ಷಿತ ಸಿನಿಮಾವನ್ನು ಗೆಲುವಿನೆಡೆಗೆ ಸಾಗಿಸಲು ನಿರ್ದೇಶಕರು ಪಣತೊಟ್ಟಿರುವುದು ಇದೀಗ ಸವಾಲಿನ ಕೆಲಸ ಎಂದೇ ಹೇಳಬಹುದು,(ಏಜೆನ್ಸೀಸ್).