ನವದೆಹಲಿ: ವಿಶ್ವದ ಅತಿದೊಡ್ಡ ನದಿ ( River ) ಗಳು ಯಾವುವು ಎಂದು ಕೇಳಿದರೆ, ಹೆಚ್ಚಿನವರು ನೈಲ್, ಅಮೆಜಾನ್, ಯಾಂಗ್ಟ್ಜೆ, ಮಿಸಿಸಿಪ್ಪಿ ಮತ್ತು ಯೆನಿಸೀ ಎಂದು ಉತ್ತರಿಸುತ್ತಾರೆ. ಯಾವ ನದಿ ಅತ್ಯಂತ ಅಪಾಯಕಾರಿ ಎಂದು ನೀವು ಕೇಳಿದರೆ ಬಹುತೇಕರು ಅಮೆಜಾನ್ ನದಿ ಎಂದು ಹೇಳುತ್ತಾರೆ. ಅಂದಹಾಗೆ ಪ್ರಪಂಚದ ಅನೇಕ ನದಿಗಳು ತಮ್ಮ ಸೌಂದರ್ಯ ಮತ್ತು ಭಾರಿ ವಿಸ್ತರಣೆಯೊಂದಿಗೆ ಎಲ್ಲರನ್ನು ವಿಸ್ಮಯಗೊಳಿಸುತ್ತವೆ. ಕೆಲವು ನದಿಗಳಂತೂ ನೋಡಲು ತುಂಬಾ ಭಯಾನಕವಾಗಿರುತ್ತವೆ. ಅವುಗಳಲ್ಲಿ ರಿಯೊ ಟಿಂಟೋ ( Rio Tinto ) ನದಿ ಕೂಡ ಒಂದು.
ಈ ರಿಯೊ ಟಿಂಟೋ ನದಿಯನ್ನು ಕೆಂಪು ನದಿ ಎಂದೂ ಸಹ ಕರೆಯುತ್ತಾರೆ. ಟಿಂಟೋ ನದಿಯು ನೈಋತ್ಯ ಸ್ಪೇನ್‌ನ ಆಂಡಲೂಸಿಯಾದ ಸಿಯೆರಾ ಮೊರೆನಾ ಪರ್ವತಗಳಲ್ಲಿ ಹುಟ್ಟುತ್ತದೆ. ಬೇರೆ ನದಿಗಳಿಗಿಂತ ಈ ಟಿಂಟೋ ನದಿ ವಿಭಿನ್ನ ಹೇಗೆ ಎಂದು ಕೇಳಿದರೆ, ಈ ನದಿಯಲ್ಲಿನ ನೀರು ತುಂಬಾ ವಿಷಕಾರಿಯಾಗಿದೆ. ನೈಋತ್ಯಕ್ಕೆ ಹರಿಯುವ ಟಿಂಟೋ ನದಿಯು ಹುಯೆಲ್ವಾದಲ್ಲಿ ಕ್ಯಾಡಿಜ್ ಕೊಲ್ಲಿಯನ್ನು ತಲುಪುತ್ತದೆ. ಟಿಂಟೋ ನದಿ ಕೆಂಪು ಮತ್ತು ಕಿತ್ತಳೆ ಮಿಶ್ರಣವಾಗಿದೆ. ಇದರ ಬಣ್ಣವು ಅದರ ರಾಸಾಯನಿಕ ಸಂಯೋಜನೆಯಿಂದ ಬಂದಿದೆ. ಇದು ಹೆಚ್ಚು ಆಮ್ಲೀಯವಾಗಿದೆ ಮತ್ತು ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಭಾರ ಲೋಹಗಳನ್ನು ಹೊಂದಿರುತ್ತದೆ.
ನದಿಯು ಸುಮಾರು 50 ಕಿಮೀ ಉದ್ದದವರೆಗೆ ಕೆಂಪು-ಕಿತ್ತಳೆ ಮಿಶ್ರಿತ ಬಣ್ಣವನ್ನು ಉಳಿಸಿಕೊಳ್ಳುತ್ತದೆ. 50 ಕಿಮೀ ನಂತರ ರಸಾಯನಿಕ ಬಣ್ಣವೂ ನಿಧಾನವಾಗಿ ಕ್ಷೀಣಿಸುತ್ತಿದೆ. ಹಾಗೆಯೇ ಒಂದೇ ಬಣ್ಣಕ್ಕೆ ತಿರುತ್ತದೆ. ನದಿಯ ರಸಾಯನಿಕ ಬಣ್ಣ ಬದಲಾದ ಸ್ಥಳವು ನೀಬ್ಲಾ ನಗರದ ಸಮೀಪದಲ್ಲಿದೆ. ನೀಬ್ಲಾ ಪಟ್ಟಣದ ನಂತರ ರಿಯೊ ಟಿಂಟೋ ನದಿ ಅಟ್ಲಾಂಟಿಕ್ ಸಾಗರಕ್ಕೆ ಸಂಪರ್ಕಿಸುವ ಇತರ ನದಿಗಳೊಂದಿಗೆ ವಿಲೀನಗೊಳ್ಳುವುದರಿಂದ ನದಿಯ ರಸಾಯನಿಕ ಬಣ್ಣವು ಬದಲಾಗಲು ಪ್ರಾರಂಭಿಸುತ್ತದೆ. ಸುಮಾರು 100 ಕಿಮೀ (62 ಮೈಲಿ) ಉದ್ದದ ಈ ನದಿಯು ಐಬೇರಿಯನ್ ಪೈರೈಟ್ ಪ್ರಸ್ತಭೂಮಿಯಲ್ಲಿದೆ. ಈ ಪ್ರದೇಶದಲ್ಲಿ ಅದಿರು ಮತ್ತು ಸಲ್ಫೈಡ್‌ನ ದೊಡ್ಡ ನಿಕ್ಷೇಪಗಳಿವೆ.
ರಿಯೊ ಟಿಂಟೋ ಪ್ರದೇಶವು ಸುಮಾರು 5,000 ವರ್ಷಗಳ ಅದಿರು ಗಣಿಗಾರಿಕೆಯ ತಾಣವಾಗಿದೆ. ತಾಮ್ರ, ಬೆಳ್ಳಿ, ಚಿನ್ನ ಮತ್ತು ಇತರ ಖನಿಜಗಳನ್ನು ಒಳಗೊಂಡಂತೆ, ನದಿ ದಡದಿಂದ 20 ಕಿ.ಮೀ ವರೆಗೆ ಹೊರತೆಗೆಯಲಾಗುತ್ತದೆ. ಗಣಿಗಾರಿಕೆಯ ಪರಿಣಾಮವಾಗಿ ರಿಯೊ ಟಿಂಟೋ ಹೆಚ್ಚು ಆಮ್ಲೀಯವಾಗಿದೆ ಮತ್ತು ಅದರ ಆಳವಾದ ಕೆಂಪು ಬಣ್ಣವು ನೀರಿನಲ್ಲಿ ಕರಗಿದ ಕಬ್ಬಿಣದ ಕಾರಣದಿಂದಾಗಿರುತ್ತದೆ. ಇನ್ನು ಆಸಿಡ್ ಗಣಿಗಾರಿಕೆ ಗಂಭೀರ ಪರಿಸರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ನದಿಯ pH ಮಟ್ಟ 1.7-2.5 ಆಗಿದೆ. ಅಲ್ಲದೆ ಬಹಳಷ್ಟು ಕಬ್ಬಿಣ, ಕೋಬಾಲ್ಟ್, ಮ್ಯಾಂಗನೀಸ್ ಮತ್ತು ಕ್ಯಾಡ್ಮಿಯಮ್ ಅನ್ನು ಈ ನದಿ ಹೊಂದಿರುತ್ತದೆ. ಸಸ್ಯಗಳು, ಮೀನುಗಳು, ಉಭಯಚರಗಳು ಅಥವಾ ಕೀಟಗಳು ಈ ನೀರಿನ ಸಂಪರ್ಕಕ್ಕೆ ಬಂದರೆ ಬೇಗನೆ ಸಾಯುತ್ತವೆ. ರಿಯೊ ಟಿಂಟೋ ಈಜುವುದಕ್ಕೆ ಯೋಗ್ಯವಾದ ನದಿಯಲ್ಲ. ನೀರಿನಲ್ಲಿ ಮೀನುಗಳನ್ನು ಕೊಲ್ಲುವಷ್ಟು ಪ್ರಬಲವಾಗಿದೆ. ಮನುಷ್ಯರು ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಇದು ಪ್ರಪಂಚದ ಭಯಾನಕ ನದಿ ಎನಿಸಿಕೊಂಡಿದೆ. (ಏಜೆನ್ಸೀಸ್)