Street Dogs Chasing Bike: ರಾತ್ರಿ ಹೊತ್ತಲ್ಲಿ ಖಾಲಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುವಾಗ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದ ಅನುಭವ ನಿಮಗೂ ಆಗಿರಬಹುದು. ನಾಯಿಗಳು ಬೊಗಳುತ್ತಾ ಬೈಕ್ ಹಿಂದೆ ಓಡಿಸಿಕೊಂಡು ಬಂದಾಗ ಸವಾರರು ಗಾಬರಿಯಾಗುವುದು ಸಹಜ. ಆದರೆ, ಆ ಸಮಯದಲ್ಲಿ ಗಾಬರಿಯಿಂದ ಮಾಡುವ ಸಣ್ಣ ತಪ್ಪು ಕೂಡ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು.
ಹಾಗಾದ್ರೆ, ರಾತ್ರಿ ಬೈಕ್‌ನಲ್ಲಿ ಹೋಗುವಾಗ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದ್ರೆ ಏನು ಮಾಡಬೇಕು? ಯಾವ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ಮಾಹಿತಿ.
ನಾಯಿಗಳು ಅಟ್ಟಿಸಿಕೊಂಡು ಬಂದ ತಕ್ಷಣ ಬೈಕ್ ವೇಗ ಹೆಚ್ಚಿಸುವುದು ಅಪಾಯಕಾರಿ. ಇದರಿಂದ ಬೈಕ್ ನಿಯಂತ್ರಣ ತಪ್ಪಬಹುದು, ಸ್ಕಿಡ್ ಆಗಬಹುದು ಅಥವಾ ಎದುರಿನಿಂದ ಬರುವ ವಾಹನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ಗಾಬರಿಯಾಗದೆ ರಸ್ತೆಯ ಪರಿಸ್ಥಿತಿಗೆ ತಕ್ಕಂತೆ ನಿಧಾನವಾಗಿ ವೇಗ ಕಡಿಮೆ ಮಾಡಿ.
ನಾಯಿಗಳನ್ನು ಓಡಿಸಲು ಕೆಲವರು ಜೋರಾಗಿ ಕಿರುಚುತ್ತಾರೆ ಅಥವಾ ಸತತವಾಗಿ ಹಾರ್ನ್ ಮಾಡುತ್ತಾರೆ. ಇದರಿಂದ ನಾಯಿಗಳು ಮತ್ತಷ್ಟು ಗಾಬರಿಯಾಗಬಹುದು ಅಥವಾ ಆಕ್ರಮಣಕಾರಿಯಾಗಿ ವರ್ತಿಸಬಹುದು. ಹಾಗಾಗಿ, ಅನಗತ್ಯವಾಗಿ ಕಿರುಚುವುದು ಮತ್ತು ಹಾರ್ನ್ ಮಾಡುವುದು ಬೇಡ.
ನಾಯಿಗಳು ಹತ್ತಿರ ಬಂದಾಗ ಕೆಲವರು ಬೈಕ್ ಓಡಿಸುತ್ತಲೇ ಕಾಲಿನಿಂದ ಒದೆಯಲು ಪ್ರಯತ್ನಿಸುತ್ತಾರೆ. ಆದರೆ, ಹೀಗೆ ಮಾಡುವಾಗ ಬೈಕ್‌ನ ಸಮತೋಲನ ತಪ್ಪಿ ಕೆಳಗೆ ಬೀಳುವ ಅಪಾಯವಿದೆ. ಇದರಿಂದ ಗಂಭೀರ ಗಾಯಗಳಾಗಬಹುದು. ಹಾಗಾಗಿ, ನಾಯಿಗಳನ್ನು ಒದೆಯಲು ಅಥವಾ ಹೆದರಿಸಲು ಪ್ರಯತ್ನಿಸಬೇಡಿ.
ನಾಯಿಗಳು ಅಟ್ಟಿಸಿಕೊಂಡು ಬಂದಾಗ ಅವುಗಳನ್ನೇ ದಿಟ್ಟಿಸಿ ನೋಡುವ ಬದಲು ರಸ್ತೆಯ ಮೇಲೆ ಗಮನವಿಡಿ. ನಾಯಿಗಳ ಚಲನವಲನವನ್ನು ಗಮನಿಸುತ್ತಲೇ ಬೈಕ್‌ನ್ನು ಸುರಕ್ಷಿತವಾಗಿ ನಿಯಂತ್ರಿಸಿ. ರಸ್ತೆ ಮೇಲಿನ ಗಮನ ತಪ್ಪಿದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ.
ನಾಯಿಗಳು ಬೈಕ್ ಹಿಂದೆ ಓಡಿಸಿಕೊಂಡು ಬಂದಾಗ ಗಾಬರಿಯಾಗದೆ, ಬೈಕ್‌ನ ನಿಯಂತ್ರಣ ಕಾಪಾಡಿಕೊಳ್ಳಿ. ಸುರಕ್ಷಿತವಾಗಿ ವೇಗ ಕಡಿಮೆ ಮಾಡಿ. ನಾಯಿಗಳು ತುಂಬಾ ಹತ್ತಿರ ಬಂದರೆ, ರಸ್ತೆ ಮತ್ತು ಸುತ್ತಮುತ್ತಲಿನ ವಾಹನಗಳ ಪರಿಸ್ಥಿತಿ ಗಮನಿಸಿ ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ. ಹಠಾತ್ ಬ್ರೇಕ್ ಹಾಕುವುದು ಅಥವಾ ಏಕಾಏಕಿ ತಿರುಗಿಸುವುದನ್ನು ತಪ್ಪಿಸಿ.
ನೆನಪಿರಲಿ: ನಾಯಿಗಳು ಅಟ್ಟಿಸಿಕೊಂಡು ಬಂದಾಗ ಗಾಬರಿಯಿಂದ ವೇಗ ಹೆಚ್ಚಿಸುವುದು, ಒದೆಯಲು ಹೋಗುವುದು ಅಥವಾ ರಸ್ತೆಯ ಮೇಲಿನ ಗಮನ ಕಳೆದುಕೊಳ್ಳುವುದು ಅಪಾಯವನ್ನು ಹೆಚ್ಚಿಸಬಹುದು. ಶಾಂತವಾಗಿದ್ದು, ಬೈಕ್ ನಿಯಂತ್ರಣದಲ್ಲಿಟ್ಟುಕೊಂಡು ಸುರಕ್ಷಿತವಾಗಿ ಮುಂದುವರಿಯುವುದೇ ಮುಖ್ಯ.