Husband Murder: ಕುಡಿದು ಬಂದು ಕಿರುಕುಳ ಕೊಡ್ತಿದ್ದ ಗಂಡ; ಪ್ರಿಯಕರನ ಜತೆ ಸೇರಿ ಕೊಂದು ಪೆಟ್ಟಿಗೆಯಲ್ಲಿ ತುಂಬಿದ ಪತ್ನಿ!

ಉತ್ತರ ಪ್ರದೇಶದಲ್ಲಿ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿ, ಶವವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿ ಹೆದ್ದಾರಿ ಪಕ್ಕ ಎಸೆದಿದ್ದಾಳೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
Uttar Pradesh Husband Murder
ಗಂಡನ ಕೊಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಶವ ತುಂಬಿ ಹೆದ್ದಾರಿ ಪಕ್ಕ ಎಸೆದ ಪತ್ನಿ?
Published on: 

Uttar Pradesh Murder Case: ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಪತಿಯನ್ನೇ ಕೊಲೆ ಮಾಡಿ, ಶವವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿ ಹೆದ್ದಾರಿ ಪಕ್ಕ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಶವ ಪತ್ತೆಯಾದ ಕೇವಲ 12 ಗಂಟೆಯೊಳಗೆ ಪ್ರಕರಣವನ್ನು ಭೇದಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ನೇಹಾ ರಾವತ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತನನ್ನು ಸೋನು ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ನೇಹಾ ತನ್ನ ನೆರೆಮನೆಯ ಜಿತೇಂದ್ರ ಸಿಂಗ್ ಅಲಿಯಾಸ್ ರಾಹುಲ್ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಅರೆಯುವ ಕಲ್ಲಿನಿಂದ ಹಲ್ಲೆ

ಅಕ್ಟೋಬರ್ 19 ಮತ್ತು 20ರ ನಡುವಿನ ರಾತ್ರಿ ನೇಹಾ ಮತ್ತು ಜಿತೇಂದ್ರ ಸೇರಿ ಸೋನು ಮೇಲೆಅರೆಯುವ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಳಿಕ ಕಂಬಳಿಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಬೆಡ್‌ಶೀಟ್ ಮತ್ತು ಕಂಬಳಿಯಲ್ಲಿ ಸುತ್ತಿ ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿದ್ದಾರೆ.

ಹೆದ್ದಾರಿ ಪಕ್ಕದ ಪೆಟ್ಟಿಗೆಯಲ್ಲಿ ಶವ ಪತ್ತೆ

ಅಕ್ಟೋಬರ್ 20ರ ರಾತ್ರಿ ಉನ್ನಾವ್‌ನ ಹೆಲ್ತ್ ಆಸ್ಪತ್ರೆ ಎದುರು ಹೆದ್ದಾರಿ ಪಕ್ಕ ಬಿದ್ದಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. 'ಛೋಟಾ ಹಾಥಿ' ವಾಹನದಲ್ಲಿ ಶವ ತಂದು ಎಸೆದಿರುವ ಶಂಕೆಯಿದ್ದು, ತನಿಖೆಗೆ ಪೊಲೀಸರು ಐದು ತಂಡಗಳನ್ನು ರಚಿಸಿದ್ದರು.

ಸಿಸಿಟಿವಿ ಮೂಲಕ ವಾಹನದ ಸುಳಿವು

ಸಿಸಿಟಿವಿ ದೃಶ್ಯಗಳು ಮತ್ತು ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳ ಸಹಾಯದಿಂದ ಪೊಲೀಸರು ಶವ ಸಾಗಿಸಲು ಬಳಸಿದ ವಾಹನವನ್ನು ಪತ್ತೆಹಚ್ಚಿದ್ದಾರೆ. ಈ ವಾಹನ ರಾಜೇಶ್ ಗುಪ್ತಾ ಹೆಸರಿನಲ್ಲಿ ನೋಂದಣಿಯಾಗಿದೆ. ಮನೆಯ ಸಾಮಾನು ಸಾಗಿಸುವ ನೆಪದಲ್ಲಿ ನೇಹಾ 1,200 ರೂಪಾಯಿ ಕೊಟ್ಟು ವಾಹನವನ್ನು ಬಾಡಿಗೆಗೆ ಪಡೆದಿದ್ದಳು ಎನ್ನಲಾಗಿದೆ.

ಮೂವರು ಆರೋಪಿಗಳು ಲಾಕ್​

ಪ್ರಕರಣಕ್ಕೆ ಸಂಬಂಧಿಸಿದಂತೆ ನೇಹಾ ರಾವತ್, ಜಿತೇಂದ್ರ ಸಿಂಗ್ ಅಲಿಯಾಸ್ ರಾಹುಲ್ ಮತ್ತು ತೌಹೀದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತನೊಬ್ಬನನ್ನೂ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಕೊಲೆಗೆ ಬಳಸಿದ ಎನ್ನಲಾದ ಸಾಧನ, ಕಬ್ಬಿಣದ ಪೆಟ್ಟಿಗೆ, ಸರಕು ವಾಹನ ಮತ್ತು 8,200 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ವಾಹನದ ಮಾಲೀಕ ರಾಜೇಶ್ ಗುಪ್ತಾ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಕೌಟುಂಬಿಕ ಕಲಹವೇ ಕೊಲೆಗೆ ಕಾರಣ?

ಸೋನು ಮತ್ತು ನೇಹಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಸೋನು ಕುಡಿದು ಬಂದು ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಈ ಕೌಟುಂಬಿಕ ಕಲಹದಿಂದ ಬೇಸತ್ತು ನೇಹಾ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net