ಬೆಂಗಳೂರು: ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 2015ರಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗ್ರ್ಯಾಮೀಸ್ ಅಂಗಳದಲ್ಲಿ ಭಾರತದ ಕೀರ್ತಿಪತಾಕೆ ಹಾರಿಸಿದ್ದ ಅವರು, ಈ ಬಾರಿ ‘ಡಿವೈನ್ ಟೈಡ್ಸ್’ ಎಂಬ ಆಲ್ಬಂಗಾಗಿ ಸಂಗೀತಗಾರ ಸ್ಟೀವರ್ಟ್ ಕೋಪ್ಲ್ಯಾಂಡ್ ಜತೆಗೆ ಎರಡನೆಯ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚೆಗೆ, ಲಾಸ್ ವೆಗಾಸ್ನಲ್ಲಿ ಸಮಾರಂಭ ನಡೆದಿದ್ದು, ರಿಕ್ಕಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಹಾರೈಸಿದ್ದಾರೆ.
ಈ ಕುರಿತು ವಿಜಯವಾಣಿ ಜತೆ ಮಾತನಾಡಿರುವ ಅವರು, ‘ಎರಡನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವುದು ಅದ್ಭುತ ಅನುಭವ. ಅದರಲ್ಲೂ ನನ್ನ ಮೆಚ್ಚಿನ ಸಂಗೀತಗಾರ ಸ್ಟೀವರ್ಟ್ ಕೋಪ್ಲ್ಯಾಂಡ್ ಜತೆಗೆ ವೇದಿಕೆ ಹಂಚಿಕೊಳ್ಳುವುದರ ಜತೆಗೆ ಅವರ ಜತೆಗೆ ಪ್ರಶಸ್ತಿ ಸ್ವೀಕರಿಸಿದ್ದು ಮರೆಯಲಾಗದ ಕ್ಷಣವಾಗಿತ್ತು. ಪ್ರಶಸ್ತಿ ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ನಾನು ಮೊದಲ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಗೆದ್ದಾಗ, ಅವರನ್ನು ಭೇಟಿ ಮಾಡುವಂತೆ ಆಹ್ವಾನಿಸಿದ್ದರು. ಸುಮಾರು ಒಂದು ತಾಸು ಅವರ ಜತೆಗೆ ಕಾಲ ಕಳೆಯುವ ಒಂದು ಅಪೂರ್ವವಾದ ಅವಕಾಶವೊಂದು ನನಗೆ ಸಿಕ್ಕಿತ್ತು. ಈ ಸಂದರ್ಭದಲ್ಲಿ ಸಂಗೀತ, ಪರಿಸರ, ಕ್ಲೈಮೇಟ್ ಚೇಂಜ್ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೆವು. ಅವರಿಂದಾಗಿಯೇ, ನಾನು ಮುಂದಿನ ದಿನಗಳಲ್ಲಿ ಪರಿಸರದ ಕುರಿತು ಸಂಗೀತ ಮಾಡಬೇಕು ಎಂದು ತೀರ್ಮಾನಿಸಿದೆ.
ಅವರನ್ನು ಭೇಟಿ ಮಾಡಿ ಏಳು ವರ್ಷಗಳ ನಂತರ ಎರಡನೇ ಗ್ರ್ಯಾಮಿ ಪ್ರಶಸ್ತಿ ಸಿಕ್ಕಿದೆ. ಈ ಸಂದರ್ಭದಲ್ಲಿ ಅವರು ನನ್ನನ್ನು ಅಭಿನಂದಿಸಿದ್ದು ಬಹಳ ಸಂತೋಷವಾಯಿತು’ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಆನಂದ್ ಮಹಿಂದ್ರಾ, ರವೀನಾ ಟಂಡನ್, ಅರ್ವನ್ ಮಲ್ಲಿಕ್, ಸದ್ಗುರು, ಕಿರಣ್ ಮಜುಂದಾರ್ ಷಾ ಸೇರಿ ಹಲವರು ಸೋಷಿಯಲ್ ಮೀಡಿಯಾ ಮೂಲಕ ರಿಕ್ಕಿಗೆ ಅಭಿನಂದನೆ ಸೂಚಿಸಿದ್ದು, ಅವರೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದ ಹೇಳುವುದಕ್ಕೆ ಪದಗಳು ಸಿಗುತ್ತಿಲ್ಲ ಎಂದು ರಿಕ್ಕಿ ಹೇಳಿದ್ದಾರೆ.