ಕೋಲ್ಕತಾ: ಆರ್‌ಜಿ ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(RG Kar case)ದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. ಪಶ್ಚಿಮ ಬಂಗಾಳದ ಸಿಯಾಲ್ದಾಹ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಚಾರ್ಜ್ಶೀಟ್ನಲ್ಲಿ ಸಂಜಯ್ ರಾಯ್ ಏಕೈಕ ಆರೋಪಿ, ಸಾಮೂಹಿಕ ಅತ್ಯಾಚಾರವಲ್ಲ ಎಂದು ಉಲ್ಲೇಖಿಸಲಾಗಿದೆ.
ಕೋಲ್ಕತಾದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಚಾರ್ಜ್ ಶೀಟ್‌ನಲ್ಲಿ, ಸ್ಥಳೀಯ ಪೊಲೀಸರೊಂದಿಗೆ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್ ಆಗಸ್ಟ್ 9ರಂದು ಆಸ್ಪತ್ರೆಯ ಸಭಾಂಗಣದಲ್ಲಿ ಈ ಘಟನೆಯನ್ನು ನಡೆಸಿದ್ದಾನೆ ಎಂದು ಸಿಬಿಐ ಹೇಳಿದೆ. ಸಂಸ್ಥೆಯು ಚಾರ್ಜ್ ಶೀಟ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪವನ್ನು ಉಲ್ಲೇಖಿಸಿಲ್ಲ. ರಾಯ್ ಒಬ್ಬನೇ ಅಪರಾಧ ಎಸಗಿದ್ದಾನೆ ಎಂದು ಸೂಚಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಬಿಐ ಮುಂದುವರಿಸಿದೆ.
ಆಗಸ್ಟ್ 9 ರಂದು ವಿರಾಮದ ಸಮಯದಲ್ಲಿ ಸಂತ್ರಸ್ತೆ ಆಸ್ಪತ್ರೆಯ ಸೆಮಿನಾರ್ ಕೋಣೆಯಲ್ಲಿ ಮಲಗಿದ್ದಾಗ ಆರೋಪಿ ಅಪರಾಧ ಎಸಗಿದ್ದಾನೆ. ಮರುದಿನ ಬೆಳಗ್ಗೆ ಕಿರಿಯ ವೈದ್ಯರಿಗೆ ಆಕೆಯ ಶವ ಪತ್ತೆಯಾಗಿದೆ ಎಂದು ಸಿಬಿಐ ಹೇಳಿದೆ. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ಸಂತ್ರಸ್ತೆಯನ್ನು ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ. ಆಕೆಯ ಶವಪರೀಕ್ಷೆಯಲ್ಲಿ ದೇಹಕ್ಕೆ 25 ಆಂತರಿಕ ಮತ್ತು ಬಾಹ್ಯ ಗಾಯಗಳಾಗಿರುವುದು ಬಹಿರಂಗವಾಗಿದೆ.
ಸಂಜಯ್ ರಾಯ್ ಆಗಸ್ಟ್ 9 ರಂದು ಮುಂಜಾನೆ 4.03ಕ್ಕೆ ಸೆಮಿನಾರ್ ಕೊಠಡಿಗೆ ಪ್ರವೇಶಿಸುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಸುಮಾರು ಅರ್ಧ ಗಂಟೆಯ ನಂತ ಆತ ಕೊಠಡಿಯಿಂದ ಹೊರಬಂದಿದ್ದಾನೆ.ಅಲ್ಲದೆ ಅಪರಾಧ ನಡೆದ ಸ್ಥಳದಲ್ಲಿ ವ್ಯಕ್ತಿಯ ಬ್ಲೂಟೂತ್ ಹೆಡ್‌ಫೋನ್‌ಗಳನ್ನು ಸಹ ಪತ್ತೆ ಆಗಿದೆ ಎಂದು ಸಂಸ್ಥೆಯು ತಿಳಿಸಿದೆ.
ಸಿಬಿಐ ತನ್ನ ತನಿಖೆಯಲ್ಲಿ ಸುಮಾರು 100 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ ಮತ್ತು 12 ಪಾಲಿಗ್ರಾಫ್ ಪರೀಕ್ಷೆಗಳನ್ನು ನಡೆಸಿದೆ. ಆರೋಪಿಯನ್ನು ಲೈ ಡಿಟೆಕ್ಟರ್ ಪರೀಕ್ಷೆಗೆ ಒಳಪಡಿಸಿದಾಗ ಅಲ್ಲಿ ಅವರು ನಿರಪರಾಧಿ ಎಂದು ಹೇಳಿದರು. ಸೆಮಿನಾರ್ ಹಾಲ್ ಪ್ರವೇಶಿಸಿದಾಗ ಮಹಿಳೆ ಈಗಾಗಲೇ ಪ್ರಜ್ಞಾಹೀನರಾಗಿದ್ದರು ಎಂದು ತಿಳಿಸಿದರು. ಘಟನೆಯ ಬಗ್ಗೆ ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಕೇಳಿದಾಗ, ಗಾಯಗೊಂಡ ಸ್ಥಿತಿಯಲ್ಲಿ ಮಹಿಳೆಯನ್ನು ನೋಡಿದ ನಂತರ ಅವರು ಭಯಭೀತರಾಗಿದ್ದರು ಎಂದು ಹೇಳಿದರು. ಆದರೆ ಅವರು ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ವರದಿ ಮಾಡಿದೆ.
ಸಂತ್ರಸ್ತೆಯ ಬೆರಳಿನ ಉಗುರುಗಳ ಅಡಿಯಲ್ಲಿ ಕಂಡುಬಂದ ರಕ್ತ ಮತ್ತು ಚರ್ಮ ಸೇರಿದಂತೆ ಫೋರೆನ್ಸಿಕ್ ಪುರಾವೆಗಳು ರಾಯ್‌ನ ಡಿಎನ್‌ಎಗೆ ಹೊಂದಿಕೆಯಾಗುತ್ತವೆ. ಇದು ಅಪರಾಧದಲ್ಲಿ ಆತ ತೊಡಗಿದ್ದ ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯ ಆಗಿದೆ. ಸಂತ್ರಸ್ತೆಯ ಪಾಲಕರನ್ನು ದಾರಿತಪ್ಪಿಸಲು ಮತ್ತು ಸಾಕ್ಷ್ಯವನ್ನು ತಿರುಚಲು ಯತ್ನಿಸಿದ ಆರೋಪದ ಮೇಲೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ ಸಂದೀಪ್ ಘೋಷ್ ಅವರನ್ನು ಸಿಬಿಐ ಬಂಧಿಸಿದೆ.(ಏಜೆನ್ಸೀಸ್)