ನ್ಯೂಸ್

ವಿಐಎಸ್​ಎಲ್ ಕುಲುಮೆಗೆ ಮರುಜೀವ; 4000 ಎಲ್​ಎಚ್​ಬಿ ಆಕ್ಸಲ್ ಉತ್ಪಾದನೆ ಗುರಿ, 10ರಿಂದ ಬಾರ್​ವಿುಲ್ ಆರಂಭ

ಆರು ತಿಂಗಳುಗಳಿಂದ ಉತ್ಪಾದನೆ ಸ್ಥಗಿತಗೊಂಡು ಮುಚ್ಚುವ ಭೀತಿ ಎದುರಿಸುತ್ತಿದ್ದ ವಿಐಎಸ್​ಎಲ್​ನಲ್ಲಿ ಬಾರ್​ವಿುಲ್ ಆರಂಭಿಸಲು ಸೈಲ್ ಈಗ ಅನುಮತಿ ನೀಡಿರುವುದು ಮರುಹುಟ್ಟಿಗೆ ಅವಕಾಶ ಕಲ್ಪಿಸಿದೆ.

| ನವೀನ್ ಬಿಲ್ಗುಣಿ ಶಿವಮೊಗ್ಗ 
ಭದ್ರಾವತಿ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್​ಎಲ್), ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಮತ್ತು ಆಕಾಶವಾಣಿ ಕೇಂದ್ರ. ವಿಐಎಸ್​ಎಲ್ ಮತ್ತು ಎಂಪಿಎಂ ಒಂದು ಕಾಲದಲ್ಲಿ ಅಪಾರ ಬೇಡಿಕೆಯಲ್ಲಿದ್ದ ಉದ್ದಿಮೆಗಳು. ರೈಲ್ವೆ ಇಲಾಖೆ, ಮಿಲಿಟರಿಗೆ ಅಗತ್ಯ ಉಪಕರಣಗಳು ವಿಐಎಸ್​ಎಲ್​ನಿಂದ ಪೂರೈಕೆಯಾಗುತ್ತಿದ್ದವು. ಎಂಪಿಎಂ ಕೂಡ ಗುಣಮಟ್ಟದ ಕಾರಣಕ್ಕೆ ಖ್ಯಾತಿ ಗಳಿಸಿತ್ತು.

ಎಂಪಿಎಂ ಇತಿಹಾಸ ಸೇರಿದೆ. ವಿಐಎಸ್​ಎಲ್ ಕೂಡ ಇದೇ ಹಾದಿಯಲ್ಲಿತ್ತು. ಆದರೆ, ಸತತ ಹೋರಾಟದ ಫಲವಾಗಿ ಮತ್ತೆ ಆಕ್ಸಿಜನ್ ಕೊಡುವ ಪ್ರಯತ್ನ ನಡೆದಿದೆ. ಆ.10ರಿಂದ ಬಾರ್​ವಿುಲ್ ಆರಂಭಕ್ಕೆ ಸೈಲ್ (ಭಾರತೀಯ ಉಕ್ಕು ಪ್ರಾಧಿಕಾರ) ಅನುಮತಿ ನೀಡಿದೆ. ಇದರ ಬೆನ್ನಲ್ಲೇ ವಿಐಎಸ್​ಎಲ್​ಗೆ ಭಾರತೀಯ ರೈಲ್ವೆ ಹಾಗೂ ರಕ್ಷಣಾ ವಿಭಾಗದಿಂದ ಉತ್ಪನ್ನಗಳ ಪೂರೈಕೆಗೆ ಬೇಡಿಕೆ ಹೆಚ್ಚಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಭದ್ರಾವತಿಯ ವಿಐಎಸ್​ಎಲ್ ಗುಣ ಮಟ್ಟದ ಮಿಶ್ರಲೋಹ ಹಾಗೂ ವಿಶೇಷ ಉಕ್ಕು ಮತ್ತು ಕಬ್ಬಿಣ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿತ್ತು. ಒಂದು ಕಾಲದಲ್ಲಿ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿದ್ದರೂ ಇಲ್ಲಿ ಉತ್ಪಾದನೆ ಆಗುತ್ತಿದ್ದ ಗುಣಮಟ್ಟದ ಉತ್ಪನ್ನಗಳಿಗೆ ದೇಶದಲ್ಲಿ ಸರಿಸಾಟಿ ಇರಲಿಲ್ಲ. ಹಾಗಾಗಿಯೇ ಇದೀಗ ಪುನಶ್ಚೇತನಕ್ಕೆ ಸಜ್ಜಾಗಿರುವ ವಿಐಎಸ್​ಎಲ್ ಕಾರ್ಖಾನೆ ಉತ್ಪನ್ನಗಳಿಗೆ ಮತ್ತೆ ಬೇಡಿಕೆ ಶುರುವಾಗಿದೆ.

ಇದೀಗ ಬಾರ್​ವಿುಲ್ ಮೂಲಕ ರೌಂಡ್ ಬಾರ್ಸ್ ಉತ್ಪಾದಿಸಲು ವಿಐಎಸ್​ಎಲ್ ಸಜ್ಜಾಗಿದೆ. ಇದರ ನಡುವೆಯೇ ಭಾರತೀಯ ರೈಲ್ವೆಗೆ 4 ಸಾವಿರ ಎಲ್​ಎಚ್​ಬಿ (ಲೋವರ್ ಹೆವ್ವಿ ಬೋಗಿ) ಆಕ್ಸಲ್ ಉತ್ಪಾದನೆಗೆ ಬೇಡಿಕೆ ಬಂದಿದೆ. ಈಗಾಗಲೇ ಕಾರ್ಖಾನೆಯಲ್ಲಿರುವ ಸಣ್ಣ ಪ್ರಮಾಣದ ಸರಕನ್ನೇ ಬಳಸಿಕೊಂಡು ಉತ್ಪಾದನೆ ಶುರು ಮಾಡಿದರೆ 2024ರ ಮಾ.31ರೊಳಗೆ ರೈಲ್ವೆ ಇಲಾಖೆಯ ಬೇಡಿಕೆಯಷ್ಟು ಉತ್ಪನ್ನವನ್ನು ಪೂರೈಕೆ ಮಾಡಲು ಕಾರ್ಖಾನೆ ಸನ್ನದ್ಧವಾಗಿದೆ.

ಗನ್ ಬ್ಯಾರೆಲ್​ಗೆ ಡಿಮಾಂಡ್: ಬರೋಬ್ಬರಿ 2,16,000 ಟನ್ ಬಿಸಿ ಲೋಹ, 98,280 ಟನ್ ಮಿಶ್ರಲೋಹ ಮತ್ತು ವಿಶೇಷ ಉಕ್ಕುಗಳ ಸ್ಥಾಪಿತ ಸಾಮರ್ಥ್ಯ ಹೊಂದಿರುವ ವಿಐಎಸ್​ಎಲ್​ನಿಂದಲೇ ಭಾರತೀಯ ರಕ್ಷಣಾ ಇಲಾಖೆಗೂ ಹಲವು ವರ್ಷಗಳವರೆಗೆ ಉತ್ಪನ್ನಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಕಾರಣಾಂತರಗಳಿಂದ ಕಾರ್ಖಾನೆ ದೊಡ್ಡ ಪ್ರಮಾಣದ ಉತ್ಪಾದನೆ ಸ್ಥಗಿತಗೊಳಿಸಿದ ಬಳಿಕ ರಕ್ಷಣಾ ಇಲಾಖೆಗೆ ಅಂಬಾಝುರಿ ಖಾನ್​ಪುರ ಕಂಪನಿ ಮೂಲಕ ಪೂರೈಕೆ ಮಾಡುತ್ತಿದ್ದ ಉತ್ಪನ್ನಗಳ ಪೂರೈಕೆಯನ್ನೂ ನಿಲ್ಲಿಸಲಾಗಿತ್ತು. ಇದೀಗ ಅಂಬಾಝುರಿ ಖಾನ್​ಪುರ ಕಂಪನಿಯು ವಿಐಎಸ್​ಎಲ್ ಉತ್ಪನ್ನಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ಅಲ್ಲದೆ, ಹೆಚ್ಚು ಉಪಯುಕ್ತತೆ ಕಾರಣ ಗನ್ ಬ್ಯಾರಲ್​ಗೆ ಇಲ್ಲಿಂದಲೇ ಅಂದಾಜು 35 ಟನ್ ಉತ್ಪಾದಿಸಿ ಪೂರೈಕೆ ಮಾಡುವಂತೆ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹಾಗಾಗಿ ಮುಂದಿನ ಎರಡ್ಮೂರು ತಿಂಗಳಲ್ಲಿ ಕಚ್ಚಾ ವಸ್ತುಗಳು ವಿಐಎಸ್​ಎಲ್​ಗೆ ಬರುತ್ತಿದ್ದಂತೆಯೇ ರಕ್ಷಣಾ ಇಲಾಖೆಯ ಬೇಡಿಕೆಗೆ ತಕ್ಕಷ್ಟು ಉತ್ಪನ್ನಗಳನ್ನು ಪೂರೈಕೆ ಮಾಡಲು ತಯಾರಿ ನಡೆದಿದೆ.

ದೇಶದ ಮೊದಲ ಸಾರ್ವಜನಿಕ ಉದ್ಯಮ

ದೇಶದ ಮೊದಲ ಸಾರ್ವಜನಿಕ ಸ್ವಾಮ್ಯದ ಉಕ್ಕು ಕಾರ್ಖಾನೆ ಎಂಬ ಹೆಗ್ಗಳಿಕೆ ಭದ್ರಾವತಿ ವಿಐಎಸ್​ಎಲ್​ನದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಈ ಕಾರ್ಖಾನೆಯಿಂದ ಆರ್ಥಿಕತೆಗೂ ಬಲ ಬಂದಿತ್ತು. ಮೈಸೂರು ಅರಸರಿಂದ ಸ್ಥಾಪನೆಯಾಗಿದ್ದ ಕೈಗಾರಿಕೆ ಒಂದು ಕಾಲದಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡಿತ್ತು. ಒಂದೇ ಕುಟುಂಬದ ಮೂರು ತಲೆಮಾರಿಗೆ ವೃತ್ತಿ ಭದ್ರತೆ ಒದಗಿಸಿತ್ತು. 1970ರಲ್ಲಿ ಗುತ್ತಿಗೆ ಹಾಗೂ ಕಾಯಂ ಸೇರಿ ಸುಮಾರು 17 ಸಾವಿರ ಕಾರ್ವಿುಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, 2017ರಲ್ಲಿ 150 ಕೋಟಿ ರೂ. ನಷ್ಟಕ್ಕೆ ಸಿಲುಕಿದ ನಂತರ ವಿಐಎಸ್​ಎಲ್ ಮೇಲೆ ಸೈಲ್ ನಿರಾಸಕ್ತಿ ವಹಿಸಿತು. ಕಾರ್ಖಾನೆ ಆಧುನೀಕರಣಕ್ಕೂ ಹಿಂದೇಟು ಹಾಕಿತು. ಇದೆಲ್ಲದರ ಪರಿಣಾಮ ಕಾರ್ಖಾನೆ ಹಿನ್ನಡೆ ಅನುಭವಿಸಿತು. ಕೇಂದ್ರ ಸರ್ಕಾರ ವಿಐಎಸ್​ಎಲ್ ಮಾರಾಟಕ್ಕೆ ಜಾಗತಿಕ ಟೆಂಡರ್ ಕರೆದರೂ ಪ್ರಯೋಜನವಾಗಲಿಲ್ಲ.

ರೈಲ್ವೆ ಸಂಪರ್ಕದ ಜತೆಗೆ ಪ್ರತ್ಯೇಕ ಹೆಲಿಪ್ಯಾಡ್: ವಿಐಎಸ್​ಎಲ್ ಕಾರ್ಖಾನೆ ಹಾಗೂ ಅದರ ಟೌನ್​ಶಿಪ್ ಸೇರಿ 1,661 ಎಕರೆ ಭೂಮಿ ಭದ್ರಾವತಿಯಲ್ಲಿದೆ. ವಿಐಎಸ್​ಎಲ್ ಕಾರ್ಖಾನೆ ಪ್ರತ್ಯೇಕ ಅತಿಥಿಗೃಹ ಹೊಂದಿದೆ. ವಿಐಎಸ್​ಎಲ್​ಗೆ ರೈಲ್ವೆ ಸಂಪರ್ಕದ ಜತೆಗೆ ಪ್ರತ್ಯೇಕ ಹೆಲಿಪ್ಯಾಡ್ ಕೂಡ ಇದೆ.

ನಿತ್ಯ 1,500 ಸಿಬ್ಬಂದಿಯಿಂದ ಕೆಲಸ: ಕಾರ್ಖಾನೆಯಲ್ಲಿ ಪ್ರಸ್ತುತ 1,300 ಗುತ್ತಿಗೆ ಕಾರ್ವಿುಕರು, 200 ಕಾಯಂ ಕಾರ್ವಿುಕರು ಕೆಲಸ ಮಾಡುತ್ತಿದ್ದು, 53 ವಿವಿಧ ವರ್ಗದ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ. ಕಾರ್ವಿುಕರು 3 ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಯೊಳಗೆ ರೈಲ್ವೆ ಸಂಪರ್ಕ ಇದ್ದು, ಕಚ್ಚಾ ವಸ್ತುಗಳ ಪೂರೈಕೆ ಶುರುವಾಗುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೆ ಸಜ್ಜಾಗಲಿದೆ. ಬಾರ್​ವಿುಲ್ ಘಟಕ ಶುರುವಿಗೆ ಅನುಮತಿ ನೀಡಿರುವುದು ಸಾವಿರಾರು ಕಾರ್ವಿುಕರಲ್ಲಿ ಆಶಾಭಾವನೆ ಮೂಡಿಸಿದೆ.

ಬಾರ್​ವಿುಲ್ ಆರಂಭಕ್ಕೆ ಸೈಲ್ ಅನುಮತಿ ನೀಡಿದ್ದು, ವಿಐಎಸ್​ಎಲ್ ಉತ್ಪನ್ನಗಳಿಗೆ ಭಾರತೀಯ ರೈಲ್ವೆ ಮತ್ತು ರಕ್ಷಣಾ ಇಲಾಖೆಯಿಂದ ಬೇಡಿಕೆ ಇದೆ. ಹಾಗಾಗಿ ನಮ್ಮಲ್ಲಿರುವ ಒಂದು ಟನ್ ಸರಕನ್ನು ಬಳಸಿಕೊಂಡು ರೈಲ್ವೆ ಇಲಾಖೆಗೆ ಬೇಕಿರುವ 4 ಸಾವಿರ ಎಲ್​ಎಚ್​ಬಿ ಆಕ್ಸಲ್ ಉತ್ಪಾದಿಸಲಾಗುವುದು. ನಂತರ ಕಚ್ಚಾವಸ್ತುಗಳ ಪೂರೈಕೆಗೆ ತಕ್ಕಂತೆ ಉತ್ಪಾದನೆ ಪ್ರಮಾಣವೂ ಹೆಚ್ಚಾಗಲಿದೆ. | ಜೆ.ಜಗದೀಶ್, ವಿಐಎಸ್​ಎಲ್ ನೌಕರರ ಸಂಘದ ಅಧ್ಯಕ್ಷ
ಇತಿಹಾಸ: 1923ರ ಜ.18ರಂದು ಮೈಸೂರು ಐರನ್ ವರ್ಕ್ಸ್ ಹೆಸರಿನಲ್ಲಿ ವಿಶ್ವೇಶ್ವರಯ್ಯ ಸ್ಥಾಪಿಸಿದ ಪಿಗ್ ಐರನ್ ಹಾಗೂ ಅಲಾಯ್ ಸ್ಟೀಲ್ ಘಟಕವೇ ಮುಂದೆ 1975ರಲ್ಲಿ ವಿಶ್ವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿತು. ನ್ಯೂಯಾರ್ಕ್ ಮೂಲದ ಕಂಪನಿ 1918ರಿಂದ 1922ರ ಅವಧಿಯಲ್ಲಿ ಕಾರ್ಖಾನೆ ಸ್ಥಾಪನೆಗೆ ಬೇಕಾದ ತಂತ್ರಜ್ಞಾನ ಒದಗಿಸಿತು. 1952ರಲ್ಲಿ ವಿದ್ಯುತ್ ಬಳಕೆ ಮೂಲಕ ಪಿಗ್ ಐರನ್ ಉತ್ಪಾದಿಸಿದ ದೇಶದ ಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ವಿಐಎಸ್​ಎಲ್ ಪಾತ್ರವಾಗಿತ್ತು. 1962ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ.40:60 ಅನುಪಾತದಲ್ಲಿ ವಿಐಎಸ್​ಎಲ್ ಷೇರು ಹೊಂದಿದ್ದವು. 1998ರಲ್ಲಿ ವಿಐಎಸ್​ಎಲ್ ಅನ್ನು ಸೈಲ್ ಸಮೂಹಕ್ಕೆ ಸೇರಿಸಲಾಯಿತು.

6 ತಿಂಗಳಿಂದ ಉತ್ಪಾದನೆ ಸ್ಥಗಿತ: ವಿಐಎಸ್​ಎಲ್ ಕಾರ್ಖಾನೆ ಸಂಪೂರ್ಣ ಅವನತಿಗೆ ತಲುಪಿತ್ತು. ಅದಕ್ಕೆ ಪೂರಕವೆಂಬಂತೆ ಎಲ್ಲ ಉತ್ಪಾದನೆ ಸ್ಥಗಿತಗೊಳಿಸಲು ಸೈಲ್ ಜನವರಿಯಲ್ಲಿ ಆದೇಶ ನೀಡಿದ್ದರಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಕಾರ್ವಿುಕರು ಕೂಡ ಕಾರ್ಖಾನೆ ಪುನರಾರಂಭದ ಕನಸು ಕೈಬಿಟ್ಟಿದ್ದರು. ಆದರೆ, ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪರಿಶ್ರಮದಿಂದ ಬಾರ್​ವಿುಲ್ ಘಟಕವನ್ನು ಪುನಃ ಆರಂಭಿಸಲು ಸೈಲ್ ಅನುಮತಿ ನೀಡಿದೆ.

ಬಾರ್​ವಿುಲ್ ಯಂತ್ರ ರೆಡಿ: ವಾರ್ಷಿಕ 36 ಸಾವಿರ ಟನ್ ಉತ್ಪಾದನಾ ಸಾಮರ್ಥ್ಯವನ್ನು ವಿಐಎಸ್​ಎಲ್​ನ ಬಾರ್​ವಿುಲ್ ಯಂತ್ರ ಹೊಂದಿದೆ. ಇಲ್ಲಿ 20 ರಿಂದ 58 ಮಿ.ಮೀ.ನ ಸುತ್ತುಗಳು, 25 ರಿಂದ 56 ಮಿ.ಮೀ. (3646 ಎಸ್​ಸಿಎಸ್)ನ ಬಿಲ್ಲೆಟ್ಸ್ ಮತ್ತು 40 ರಿಂದ 120 ಮಿ.ಮೀ. (ಡಬ್ಲ್ಯು್ಡ ರಿಂದ 20 ಮಿ.ಮೀ.)ನ ಪ್ಲಾಟ್ ತಯಾರಿಸುವ ಸಾಮರ್ಥ್ಯವನ್ನು ಈ ಬಾರ್​ವಿುಲ್ ಯಂತ್ರ ಹೊಂದಿದೆ. ಕಾರ್ಖಾನೆಯಲ್ಲಿ ಹಾಲಿ ಒಂದು ಸಾವಿರ ಟನ್ ಸರಕು ಸಂಗ್ರಹವಿದ್ದು ಅದನ್ನೇ ಬಳಸಿಕೊಂಡು ರೌಂಡ್​ಬಾರ್ಸ್​ಗಳನ್ನು ಉತ್ಪಾದನೆ ಮಾಡಲು ಕಾರ್ಖಾನೆ ಮುಂದಾಗಿದೆ.