ಚೆನ್ನೈ: ದೇಶಾದ್ಯಂತ ಮತದಾರ ಪಟ್ಟಿಯ SIR ಪ್ರಕ್ರಿಯೆ ಬಗ್ಗೆ ಇಂದು(ಅ. 27) ಚುನಾವಣೆ ಆಯೋಗ ಘೋಷಣೆ ಮಾಡುವ ಸಾಧ್ಯತೆಯಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್(M K Stalin), ಈ ಬಗ್ಗೆ ತಮ್ಮ ಕಾರ್ಯಕರ್ತರಿಗೆ ಪ್ರತಿಬೂತ್ನಲ್ಲೂ ಜಾಗರೂಕರಾಗಿರುವಂತೆ ಸೂಚನೆ ನೀಡಿದ್ದಾರೆ.
ಡಿಎಂಕೆ ಕಾರ್ಯಕರ್ತರಿಗೆ ಪತ್ರ ಬರೆದಿರುವ ಅವರು, ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟವು ವಿಶೇಷ ತೀವ್ರ ಪರಿಷ್ಕರಣೆ ಅಥವಾ SIR ಮೂಲಕ ಚುನಾವಣೆಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಮತದಾರರ ಪಟ್ಟಿಯಿಂದ ಕಾರ್ಮಿಕರು, ಅಲ್ಪಸಂಖ್ಯಾತರು, ಪರಿಶಿಷ್ಟರ ಹಾಗೂ ಮಹಿಳೆಯರ ಹೆಸರುಗಳನ್ನು ತೆಗೆದುಹಾಕಲಾಗ್ತಿದೆ ಎಂದು ಆರೋಪಿಸಿದ್ದು, ಆದರೆ ಈ ನಡೆ ತಮಿಳುನಾಡಿನಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಜನರ ಮತದಾನದ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಪ್ರತಿ ಮತಗಟ್ಟೆಯಲ್ಲಿ ಜಾಗರೂಕರಾಗಿರಿ ಎಂದು ಡಿಎಂಕೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಅ. 28ರಂದು ಮಹಾಬಲಿಪುರಂನಲ್ಲಿ ನಡೆಯಲಿರುವ "ನನ್ನ ಮತಗಟ್ಟೆ, ಗೆಲುವಿನ ಮತಗಟ್ಟೆ" ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರ್ಯಕರ್ತರಿಗೆ ಆಹ್ವಾನಿಸಿದ್ದಾರೆ. ಮುಂದಿನ ವರ್ಷ ತಮಿಳುನಾಡಿನ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಬೂತ್ ಮಟ್ಟದಲ್ಲೂ ಪಕ್ಷವನ್ನು ಬಲಪಡಿಸುವ ಗುರಿಯ ಭಾಗವಾಗಿ ಡಿಎಂಕೆ ಈ ಕಾರ್ಯಕ್ರಮ ನಡೆಸುತ್ತಿದೆ.
ಇನ್ನು ಇಂದು ಸಂಜೆ ಭಾರತೀಯ ಚುನಾವಣೆ ಆಯೋಗ ಸುದ್ದಿಗೋಷ್ಠಿ ನಡೆಸಲಿದ್ದು, ದೇಶಾದ್ಯಂತ ಮತದಾರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆ ಬಗ್ಗೆ ಘೋಷಣೆ ಮಾಡಲಿದೆ ಎನ್ನಲಾಗಿದೆ. ಮೊದಲ ಹಂತದಲ್ಲಿ 10-15 ರಾಜ್ಯಗಳಲ್ಲಿ ಈ ಪ್ರಕ್ರಿಯೆ ನಡೆಸಲಿದೆ. ಅದರಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಅಸ್ಸಾಂ ಹಾಗೂ ಪುದುಚೇರಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)