ವಾಷಿಂಗ್ಟನ್: ಬೇರೆ ದೇಶಗಳು ಅಮೆರಿಕದ ವಸ್ತುಗಳ ಆಮದಿನ ಮೇಲೆ ವಿಧಿಸುವಷ್ಟೇ ತೆರಿಗೆಯನ್ನು ಅಮೆರಿಕದಲ್ಲಿ ಇತರ ದೇಶಗಳ ವಸ್ತುಗಳಿಗೆ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ‘ಪಾರಸ್ಪರಿಕ ತೆರಿಗೆ (ರೆಸಿಪ್ರೋಕಲ್ ಟ್ಯಾರಿಫ್) ಯೋಜನೆ’ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಮಧ್ಯರಾತ್ರಿ ಸಹಿ ಹಾಕಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಮತ್ತೊಂದು ಸುತ್ತಿನ ಕರ ಸಮರ ಮತ್ತು ಆರ್ಥಿಕ ಅನಿಶ್ಚಿತತೆಗೆ ನಾಂದಿ ಹಾಡಲಿದೆ.
‘ಶತ್ರುರಾಷ್ಟ್ರ, ಮಿತ್ರರಾಷ್ಟ್ರ ಎಂಬುದೇನೂ ಇಲ್ಲ. ವ್ಯಾಪಾರ ಎಲ್ಲರಿಗೂ ನ್ಯಾಯಯುತವಾಗಿರಬೇಕು. ಅವರು ನಮ್ಮ ವಸ್ತುಗಳಿಗೆ ಎಷ್ಟು ತೆರಿಗೆ ವಿಧಿಸುತ್ತಾರೋ ಅಷ್ಟೇ ತೆರಿಗೆಯನ್ನು ನಾವು ಅವರಿಗೆ ವಿಧಿಸುತ್ತೇವೆ. ಯಾವ ರಾಷ್ಟ್ರವೂ ದೂರುವಂತಿಲ್ಲ’ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟ್ರಂಪ್ ಅವರನ್ನು ಭೇಟಿ ಮಾಡುವುದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ಈ ಪಾರಸ್ಪರಿಕ ತೆರಿಗೆ ಯೋಜನೆಗೆ ಟ್ರಂಪ್ ಸಹಿ ಹಾಕಿ ಸುದ್ದಿಗಾರರ ಜತೆ ಮಾತನಾಡಿದರು. ಇದಕ್ಕೂ ಮುನ್ನ, ಮೋದಿ ಅವರನ್ನು ಸ್ಪೇಸ್ಎಕ್ಸ್ ಕಂಪನಿಯ ಸಿಇಒ ಮತ್ತು ಅಮೆರಿಕದ ಸರ್ಕಾರಿ ದಕ್ಷತಾ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಭೇಟಿ ಮಾಡಿದ್ದರು.
ಈ ಬಗ್ಗೆ ಟ್ರಂಪ್ ಎದುರು ಪ್ರಸ್ತಾಪಿಸಿದ ಸುದ್ದಿಗಾರರು, ‘ಮೋದಿ ಅವರನ್ನು ಮಸ್ಕ್ ಉದ್ಯಮಿಯಾಗಿ ಭೇಟಿಯಾಗಿದ್ದರೋ, ಅಮೆರಿಕ ಸರ್ಕಾರದ ಪ್ರತಿನಿಧಿಯಾಗಿ ಭೇಟಿಯಾಗಿದ್ದರೋ’ ಎಂದು ಪ್ರಶ್ನಿಸಿದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಟ್ರಂಪ್, ‘ತೆರಿಗೆಯಿಂದಾಗಿಯೇ ಭಾರತ ವ್ಯಾಪಾರ ಮಾಡುವುದಕ್ಕೆ ಅತ್ಯಂತ ಕಠಿಣವಾದ ದೇಶವಾಗಿದೆ. ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ತೆರಿಗೆಯನ್ನು ಭಾರತದಲ್ಲಿ ವಿಧಿಸುತ್ತಾರೆ. ಮಸ್ಕ್ ಕೂಡ ಉದ್ಯಮ ನಡೆಸುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಮೋದಿ ಅವರನ್ನು ಭೇಟಿ ಮಾಡಿರಬಹುದು ಎಂಬುದು ನನ್ನ ಊಹೆ’ ಎಂದು ಹೇಳಿದರು.
ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಇತ್ತೀಚೆಗಷ್ಟೆ ಶೇ. 25ರಷ್ಟು ತೆರಿಗೆ ವಿಧಿಸಿರುವ ಕುರಿತು ಪ್ರಶ್ನಿಸಿದಾಗ, ‘ಅದು ಈ ಪಾರಸ್ಪರಿಕ ತೆರಿಗೆಗೆ ಹೊರತಾದದ್ದು. ವಾಹನೋದ್ಯಮ, ಕಂಪ್ಯೂಟರ್ ಚಿಪ್ಗಳು, ಫಾರ್ವಸ್ಯೂಟಿಕಲ್ ಉದ್ಯಮಗಳ ಮೇಲೆಯೂ ಹೆಚ್ಚಿನ ತೆರಿಗೆಯನ್ನು (ರೆಸಿಪ್ರೋಕಲ್ ಟ್ಯಾಕ್ಸ್ ಹೊರತುಪಡಿಸಿ) ಮುಂದಿನ ದಿನಗಳಲ್ಲಿ ವಿಧಿಸಲಾಗುವುದು ಎಂದು ಟ್ರಂಪ್ ಹೇಳಿದರು. ಟ್ರಂಪ್ ಈಗಾಗಲೇ ಚೀನಾ, ಮೆಕ್ಸಿಕೊ, ಕೆನಡಾ ಸೇರಿದಂತೆ ಕೆಲವು ರಾಷ್ಟ್ರಗಳಿಂದ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಆ ರಾಷ್ಟ್ರಗಳೂ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿ ಸೇಡಿನ ಕ್ರಮ ಕೈಗೊಂಡಿವೆ. ಇದು ಒಂದು ಸುತ್ತಿನ ತೆರಿಗೆ ಸಮರವನ್ನು ಈಗಾಗಲೇ ಆರಂಭಿಸಿದೆ.
1.9 ಟ್ರಿಲಿಯನ್ ಡಾಲರ್ ಬಜೆಟ್ ಕೊರತೆಯನ್ನು ಸರಿದೂಗಿಸಲು ಈ ಹೊಸ ಪಾರಸ್ಪರಿಕ ತೆರಿಗೆಗಳು ಸಹಾಯ ಮಾಡುತ್ತವೆ. ಯಾವ್ಯಾವ ದೇಶಕ್ಕೆ ಎಷ್ಟು ತೆರಿಗೆ ಎಂಬುದನ್ನು ನಿರ್ಧರಿಸಲು ಇನ್ನು ಕೆಲವು ವಾರ ಅಥವಾ ತಿಂಗಳು ಬೇಕಾಗುತ್ತದೆ ಎಂದು ವೈಟ್ಹೌಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಮತ್ತು ವಿದೇಶಿ ಉದ್ಯಮಗಳು ಪರಸ್ಪರ ಸ್ಪರ್ಧಿಸುವುದಕ್ಕೆ ಈ ಹೊಸ ತೆರಿಗೆ ನೀತಿ ಸಹಾಯ ಮಾಡುತ್ತದೆ ಎಂಬುದು ಟ್ರಂಪ್ ಆಡಳಿತದ ಅನಿಸಿಕೆಯಾಗಿದೆ. ಆದರೆ ಈ ಹೊಸ ತೆರಿಗೆಗಳು ಅಮೆರಿಕದ ಗ್ರಾಹಕರಿಗೆ ಮತ್ತು ಉದ್ಯಮಿಗಳಿಗೇ ನೇರವಾಗಿ ಅಥವಾ ಪರೋಕ್ಷವಾಗಿ ಹೊರೆ ಆಗಬಹುದು. ಅದರಿಂದ ಹಣದುಬ್ಬರ ಹೆಚ್ಚಾಗಿ ಆರ್ಥಿಕ ಬೆಳವಣಿಗೆ ಇಳಿಮುಖವಾಗಬಹುದು. ಆ ಮೂಲಕ ಹೊಸ ನೀತಿ ಟ್ರಂಪ್ಗೇ ತಿರುಗುಬಾಣ ಆಗಬಹುದು ಎಂದು ಕೆಲವು ತಜ್ಞರು ವಿಶ್ಲೇಷಿಸಿದ್ದಾರೆ.
ಟ್ರಂಪ್ ವಿಧಿಸುತ್ತಿರುವ ತೆರಿಗೆಗಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಯೂರೋಪಿಯನ್ ಒಕ್ಕೂಟದ ಕಾರ್ಯನಿರ್ವಾಹಕ ವಿಭಾಗ ಶುಕ್ರವಾರ ತಿಳಿಸಿದೆ. ಪಾರಸ್ಪರಿಕ ತೆರಿಗೆಯ ಪರಿಕಲ್ಪನೆಯೇ ಟ್ರಂಪ್ ತಪ್ಪು ದಿಕ್ಕಿನಲ್ಲಿ ಸಾಗುತ್ತಿರುವುದಕ್ಕೆ ನಿದರ್ಶನವಾಗಿದೆ. ಇದರ ವಿರುದ್ಧ ನಾವು ತಕ್ಷಣವೇ ದೃಢವಾದ ಉತ್ತರ ನೀಡುತ್ತೇವೆ ಎಂದು ಅದು ಎಚ್ಚರಿಸಿದೆ. ಆದರೆ ತೈವಾನ್ ಇದಕ್ಕೆ ತದ್ವಿರುದ್ಧ ಪ್ರತಿಕ್ರಿಯೆ ನೀಡಿದೆ. ಚಿಪ್ ಉದ್ಯಮದ ಕುರಿತ ತಪ್ಪಕಲ್ಪನೆಗಳನ್ನು ಹೋಗಲಾಡಿಸಲು ಅಮೆರಿಕದೊಂದಿಗೆ ಹೆಚ್ಚಿನ ಸಂವಹನ ನಡೆಸುತ್ತೇವೆ, ಅಮೆರಿಕದಲ್ಲಿ ಇನ್ನೂ ಹೆಚ್ಚಿನ ಬಂಡವಾಳ ಹೂಡುತ್ತೇವೆ ಎಂದು ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ಶುಕ್ರವಾರ ಹೇಳಿದ್ದಾರೆ.
ಈ ಹೊಸ ತೆರಿಗೆ ಕ್ರಮಗಳಿಂದ ಅಮೆರಿಕದ ಹಣದುಬ್ಬರ ತಕ್ಷಣಕ್ಕೆ ಸ್ವಲ್ಪ ಜಾಸ್ತಿ ಆಗಬಹುದು. ಎಷ್ಟು ಹೆಚ್ಚಾಗಬಹುದು ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಆಗುವುದಿಲ್ಲ. ಆದರೆ ಅದು ಹೆಚ್ಚು ದಿನ ಹಾಗೇ ಉಳಿಯುವುದಿಲ್ಲ. ಕ್ರಮೇಣ ಬೆಲೆಗಳು ಇಳಿಯತೊಡಗುತ್ತವೆ. ಮುಂದೇನಾಗುತ್ತದೆ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ. ಆದರೆ ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳಂತೂ ಸೃಷ್ಟಿಯಾಗುವುದು ನಿಶ್ಚಿತ. | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಜಾಗತಿಕ ಆರ್ಥಿಕತೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೂಲಭೂತ ತಿಳಿವಳಿಕೆಯೇ ಟ್ರಂಪ್ಗೆ ಇದ್ದಂತಿಲ್ಲ. ಬೇರೆ ದೇಶಗಳಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸುವುದೊಂದನ್ನೇ ಅವರು ಯೋಚಿಸುತ್ತಿದ್ದಾರೆ. ಕೆಲವು ವಿದೇಶಿ ವಸ್ತುಗಳ ಆಮದಿನ ಮೇಲೆ ನಿರ್ಬಂಧವೂ ಇರುವುದನ್ನು ಅವರು ಮರೆತು ವರ್ತಿಸುತ್ತಿದ್ದಾರೆ. | ಸ್ಕಾಟ್ ಲಿನ್ಸಿಕಮ್ ವ್ಯಾಪಾರ ತಜ್ಞ, ಕ್ಯಾಟೊ ಇನ್ಸ್ಟಿಟ್ಯೂಟ್, ವಾಷಿಂಗ್ಟನ್
ಇನ್ನು ಮುಂದೆ ಅಮೆರಿಕದ ತೆರಿಗೆಯು ಪ್ರತಿಯೊಂದು ರಾಷ್ಟ್ರಕ್ಕೂ ಭಿನ್ನವಾಗಿರುತ್ತದೆ. ಎಲ್ಲೆಲ್ಲಿ ಬೇರೆ ರಾಷ್ಟ್ರಗಳು ವಿಧಿಸುವ ತೆರಿಗೆ ಕಡಿಮೆ ಇದೆಯೋ ಆ ರಾಷ್ಟ್ರಗಳು ಅಮೆರಿಕದ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಮುಂದಾಗಬಹುದು. ಇದರ ಪರಿಣಾಮವಾಗಿ ಅಮೆರಿಕದ ಉದ್ಯಮಿಗಳು ಮತ್ತು ಜನರಿಗೆ ಆರ್ಥಿಕ ಹೊರೆ ಬಿದ್ದು ಅನಿಶ್ಚಿತತೆ ತಲೆದೋರಬಹುದು. ಆಗ ಸ್ಥಳೀಯರನ್ನು ಸಮಾಧಾನಪಡಿಸಲು ಟ್ರಂಪ್ ಬೇರೆ ದಾರಿಗಳನ್ನು ಹುಡುಕುವ ಅನಿವಾರ್ಯತೆ ತರೆದೋರುವ ಸಾಧ್ಯತೆ ಇದೆ.
ತೆರಿಗೆಗೆ ಭಾರತವೂ ಹೊರತಲ್ಲ | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟೋಕ್ತಿ
ಪಾರಸ್ಪರಿಕ ತೆರಿಗೆ ವಿಧಿಸುವ ವಿಷಯದಲ್ಲಿ ಭಾರತವನ್ನೂ ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ. 2021ರಿಂದ 2024ರವರೆಗಿನ ಅವಧಿಯಲ್ಲಿ ಭಾರತವು ಅಮೆರಿಕದ ಅತಿ ದೊಡ್ಡ ವ್ಯಾಪಾರ ಪಾಲುದಾರಿಕೆ ದೇಶವಾಗಿತ್ತು. 2024-25ರ ಏಪ್ರಿಲ್ನಿಂದ ನವೆಂಬರ್ವರೆಗಿನ ಅವಧಿಯಲ್ಲಿ ದ್ವಿಪಕ್ಷೀಯ ವ್ಯಾಪಾರ 82.52 ಶತಕೋಟಿ ಡಾಲರ್ ಇತ್ತು. ಇದರಲ್ಲಿ 52.89 ಶತಕೋಟಿ ಡಾಲರ್ ರಫ್ತು ಮತ್ತು 29.63 ಶತಕೋಟಿ ಡಾಲರ್ ಆಮದು ಇತ್ತು. ವ್ಯಾಪಾರದ ಅಂತರ 23.26 ಶತಕೋಟಿ ಡಾಲರ್ನಷ್ಟು ಭಾರತದ ಪರವಾಗಿ ಇತ್ತು. ಭಾರತದ ಒಟ್ಟು ರಫ್ತಿನಲ್ಲಿ ಅಮೆರಿಕದ ಪಾಲು ಶೇ. 18ರಷ್ಟು ಇದೆ. ಭಾರತದ ಒಟ್ಟು ಆಮದಿನಲ್ಲಿ ಅಮೆರಿಕದ ಪಾಲು ಶೇ. 6.22ರಷ್ಟು ಇದೆ.
ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಟ್ರಂಪ್ ವಿಧಿಸಿರುವ ಶೇ. 25ರಷ್ಟು ತೆರಿಗೆ ಮಾರ್ಚ್ 12ರಿಂದ ಜಾರಿಗೆ ಬರಲಿದೆ. ಇದರಿಂದ ಭಾರತೀಯ ಉಕ್ಕು ಉತ್ಪಾದಕ ಕಂಪನಿಗಳು ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಮೂಡೀಸ್ ರೇಟಿಂಗ್ಸ್ ಸಂಸ್ಥೆ ಈಗಾಗಲೇ ಮುನ್ಸೂಚನೆ ನೀಡಿದೆ. ಈಗ ಟ್ರಂಪ್ ಪಾರಸ್ಪರಿಕ ತೆರಿಗೆ ವಿಧಿಸಲು ಏಕೆ ಮುಂದಾಗಿದ್ದಾರೆ ಎಂದರೆ, ಹಲವಾರು ದೇಶಗಳ ಜತೆ ಅಮೆರಿಕದ ವ್ಯಾಪಾರ ಭಾರಿ ಪ್ರಮಾಣದ ಅಸಮತೋಲನ ಹೊಂದಿದೆ. ಅದರಲ್ಲೂ ವಿಶೇಷವಾಗಿ ಚೀನಾದೊಂದಿಗೆ ದೊಡ್ಡ ಅಸಮತೋಲನ ಇದೆ. ಭಾರತದ ಜತೆ ಅಮೆರಿಕದ ವ್ಯಾಪಾರ ಕೊರತೆಯು 2023-24ರಲ್ಲಿ ಸುಮಾರು 35.31 ಶತಕೋಟಿ ಡಾಲರ್ ಇದ್ದು ಈ ಅಂತರವನ್ನು ತುಂಬಿಸುವುದು ಟ್ರಂಪ್ ಉದ್ದೇಶವಾಗಿದೆ.
ಭಾರತವನ್ನು ಟ್ರಂಪ್ ಟ್ಯಾರಿಫ್ ಕಿಂಗ್ (ತೆರಿಗೆ ರಾಜ) ಎಂದು ಹಲವು ಬಾರಿ ಹೀಗಳೆದಿದ್ದಾರೆ. ಭಾರತದಲ್ಲಿ ತೆರಿಗೆ ಜಾಸ್ತಿ ಎಂಬ ಮಾತನ್ನು ಗುರುವಾರವೂ ಪುನರುಚ್ಚರಿಸಿದ್ದಾರೆ. ಆದರೆ ಇದು ನಿಜವೇ? ಗ್ಲೋಬಲ್ ಟ್ರೇಡ್ ರೀಸರ್ಚ್ ಇನಿಷಿಯೇಟಿವ್ (ಜಿಟಿಆರ್ಐ) ಪ್ರಕಾರ, ಇದು ಆಧಾರರಹಿತ ಆರೋಪ. ನಿಜ ಹೇಳಬೇಕೆಂದರೆ ಭಾರತಕ್ಕಿಂತ ಅಮೆರಿಕವೇ ಹೆಚ್ಚೆಚ್ಚು ತೆರಿಗೆ ವಿಧಿಸುತ್ತದೆ. ಆ ಮೂಲಕ ತನ್ನ ಸ್ಥಳೀಯ ಮಾರುಕಟ್ಟೆಗಳ ಹಿತವನ್ನು ರಕ್ಷಿಸಿಕೊಳ್ಳುತ್ತದೆ. ಉದಾಹರಣೆಗೆ, ಭಾರತದ ಹೈನು ಉತ್ಪನ್ನಗಳ ಮೇಲೆ ಶೇ. 188ರಷ್ಟು ಆಮದು ತೆರಿಗೆಯನ್ನು ಅಮೆರಿಕ ವಿಧಿಸುತ್ತದೆ. ಹಣ್ಣು ತರಕಾರಿ ಮೇಲೆ ಶೇ. 132, ಎಣ್ಣೆ ಬೀಜ ಮತ್ತು ತೈಲಗಳ ಮೇಲೆ ಶೇ. 164, ತಂಪುಪಾನೀಯ ಮತ್ತು ತಂಬಾಕಿನ ಮೇಲೆ ಶೇ. 150ರಷ್ಟು ಆಮದು ತೆರಿಗೆಯನ್ನು ಅಮೆರಿಕ ವಿಧಿಸುತ್ತಿದೆ. ಕಾಫಿ, ಚಹಾ, ಕೊಕೊ, ಸಂಬಾರ ಪದಾರ್ಥಗಳ ಮೇಲೆ ಶೇ. 53, ಮೀನು ಉತ್ಪನ್ನಗಳು, ರಾಸಾಯನಿಕಗಳ ಮೇಲೆ ಕ್ರಮವಾಗಿ ಶೇ. 35 ಮತ್ತು ಶೇ. 56ರಷ್ಟು ತೆರಿಗೆ ಹಾಕುತ್ತದೆ.
ಆದರೆ ಎಲ್ಲ ಉತ್ಪನ್ನಗಳ ರಫ್ತು ಮತ್ತು ಆಮದನ್ನು ಗಮನಿಸಿದಾಗ, ಭಾರತ ವಿಧಿಸುವ ಸರಾಸರಿ ತೆರಿಗೆ ದರ ಶೇ. 17ರಷ್ಟಿದ್ದರೆ ಅಮೆರಿಕ ವಿಧಿಸುವ ಸರಾಸರಿ ತೆರಿಗೆ ದರವು ಶೇ. 3.3ರಷ್ಟಿದೆ ಎಂದು ಜಿಟಿಆರ್ಐ ಅಂಕಿಅಂಶಗಳು ಹೇಳುತ್ತವೆ. ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯೂಟಿಒ) ನಿಯಮಗಳ ಪ್ರಕಾರ, ಸದಸ್ಯ ರಾಷ್ಟ್ರಗಳು ಎಲ್ಲ ಆಮದಿತ ವಸ್ತುಗಳ ಮೇಲಿನ ತಮ್ಮ ತೆರಿಗೆ ಷೆಡ್ಯೂಲ್ಗಳನ್ನು ಮೊದಲೇ ಸಲ್ಲಿಸಬೇಕು. ಭಾರತ ವಿಧಿಸುತ್ತಿರುವ ತೆರಿಗೆಯು ಡಬ್ಲ್ಯೂಟಿಒ ನಿಯಮಗಳಿಗೆ ಅನುಸಾರವಾಗಿಯೇ ಇದೆ. ಆದರೆ ನಿರ್ದಿಷ್ಟ ಪ್ರಮಾಣವನ್ನು ಮೀರಿ ವಿಧಿಸುವ ತೆರಿಗೆಯ ಡಬ್ಲ್ಯೂಟಿಒ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಹಾಗಾಗಿ ಟ್ರಂಪ್ ಈಗ ವಿಧಿಸಲು ಹೊರಟಿರುವ ಪಾರಸ್ಪರಿಕ ತೆರಿಗೆ ಕೂಡ ಡಬ್ಲ್ಯೂಟಿಒ ನಿಯಮಗಳನ್ನು ಉಲ್ಲಂಘಿಸುತ್ತದೆ ಎನ್ನುತ್ತಾರೆ ತಜ್ಞರು.