ನವದೆಹಲಿ: ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದ ಉತ್ತರಪ್ರದೇಶದ ಲಖೀಂಪುರ್ ಖೇರಿ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅವರನ್ನು ಸುಪ್ರೀಂ ಕೋರ್ಟ್ ನೇಮಿಸಿದೆ. ಜೊತೆಗೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ಪುನರ್ರಚಿಸಿರುವ ನ್ಯಾಯಾಲಯ, ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಎಸ್ಐಟಿ ಸದಸ್ಯರನ್ನಾಗಿ ನೇಮಿಸಿದೆ.
ಅಕ್ಟೋಬರ್ 3 ರಂದು ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವರಾದ ಅಜಯ್ ಕುಮಾರ್ ಮಿಶ್ರ ಅವರ ಪುತ್ರ ಆಶಿಶ್ ಮಿಶ್ರರ ಕಾರು ಹರಿದು, ತದನಂತರ ಹಿಂಸಾಚಾರ ಮತ್ತು ಗಲಭೆ ಉಂಟಾಗಿತ್ತು ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಆಶಿಶ್ ಮಿಶ್ರ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಯುಪಿ ಪೊಲೀಸರು ಬಂಧಿಸಿದ್ದರೂ ಈವರೆಗೆ ಚಾರ್ಜ್ಶೀಟ್ ಸಲ್ಲಿಸಲಾಗಿಲ್ಲ.
ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆ ಕೋರಿ ವಕೀಲರಿಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ, ಯುಪಿ ಪೊಲೀಸರ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೊಬ್ಬರು ತನಿಖೆಯ ಮೇಲ್ವಿಚಾರಣೆ ಮಾಡಬೇಕು, ಸ್ಥಳೀಯ ಅಧಿಕಾರಿಗಳನ್ನೇ ಹೊಂದಿದ ತನಿಖಾ ತಂಡದ ಬದಲಿಗೆ ಹೊರರಾಜ್ಯದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಶೀಘ್ರ ಕಾರ್ಯಾಚರಣೆ ನಡೆಯಬೇಕು ಎಂದು ನವೆಂಬರ್ 12ರ ವಿಚಾರಣೆಯಲ್ಲಿ ಅಭಿಪ್ರಾಯಪಟ್ಟಿತ್ತು. ಇದಕ್ಕಾಗಿ ಸರ್ಕಾರದಿಂದ ಅಧಿಕಾರಿಗಳ ಹೆಸರುಗಳನ್ನು ಸೂಚಿಸಲು ಹೇಳಿತ್ತು.
ಇಂದು ನಡೆದ ವಿಚಾರಣೆಯ ನಂತರ, ಐಪಿಎಸ್ ಅಧಿಕಾರಿಗಳಾದ ಎಸ್.ಬಿ.ಶಿರೋಡ್ಕರ್, ದೀಪಿಂದರ್ ಸಿಂಗ್ ಮತ್ತು ಪದ್ಮಜಾ ಚೌಹಾನ್ ಅವರನ್ನು ಎಸ್ಐಟಿಯ ಸದಸ್ಯರನ್ನಾಗಿ ನೇಮಿಸಿ, ಕೋರ್ಟ್ ಆದೇಶ ಹೊರಡಿಸಿದೆ. ಈ ಎಸ್ಐಟಿಯ ತನಿಖೆಯನ್ನು ಆಧರಿಸಿ, ಮೇಲ್ವಿಚಾರಕ ನಿವೃತ್ತ ನ್ಯಾಯಮೂರ್ತಿ ಆರ್.ಕೆ.ಜೈನ್ ಸಲ್ಲಿಸುವ ವರದಿಯ ಮೇಲೆ ಚಾರ್ಜ್ಶೀಟ್ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು. (ಏಜೆನ್ಸೀಸ್)