ಬಿಟ್​ಕಾಯಿನ್​ ಹಾವಲ್ಲ, ಕಾಂಗ್ರೆಸ್​ನವರು ಎರಡು ತಲೆಯ ಮಣ್ಣುಮುಕ್ಕ ಹಾವು: ರೇಣುಕಾಚಾರ್ಯ

renukacharya
Published on

ಬೆಂಗಳೂರು: ಬಿಜೆಪಿ ಬುಟ್ಟಿಯಲ್ಲಿ ಬಿಟ್ ಕಾಯಿನ್ ಯಾವುದೇ ಹಾವು ಇಲ್ಲ, ಎಲ್ಲಿಯೋ ಹೋಗಿ ಬಿಟ್ಟಿಲ್ಲ, ಬಿಡ್ತೀನೆಂದೂ ಹೇಳಿಲ್ಲ. ಕಾಂಗ್ರೆಸ್​​ನವರೇ ಎರಡು ತಲೆಯ ಮಣ್ಣುಮುಕ್ಕ ಹಾವು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ. ಕಾಂಗ್ರೆಸ್​​ನೊಳಗಿನ ಗುಂಪುಗಾರಿಕೆ ಮುಚ್ಚಿಹಾಕಲು, ಮುಂಬರುವ ಚುನಾವಣೆಗಳಲ್ಲಿ ಸೋಲುವ ಹತಾಶೆಯಿಂದ ಹುರುಳಿಲ್ಲದ ಆರೋಪ ಹೊರಿಸಿ, ಪಕ್ಷವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ದಾಖಲೆಗಳಿವೆ, ಬಿಡ್ತೀವಿ ಅಂದರು. ಈಗ ಅಧಿಕಾರದಲ್ಲಿರುವ ಬಿಜೆಪಿಯವರೇ ದಾಖಲೆ ನೀಡಲಿ ಅಂತಿದ್ದಾರೆ. ಅವರ ಬುಟ್ಟಿಯಲ್ಲಿ ಹೆಬ್ಬಾವು, ನಾಗರಹಾವು, ಕೇರೆ ಹಾವು ಯಾವುದೂ ಇಲ್ಲ. ಅವರೇ ಎರಡು ತಲೆಯ ಮಣ್ಣುಮುಕ್ಕ ಹಾವಿನ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಛೇಡಿಸಿದರು.

ತಾಕತ್ತಿದ್ದರೆ ದಾಖಲೆಗಳನ್ನು ಬಹಿರಂಗಪಡಿಸಲಿ. ಅಧಿವೇಶನದ ಒಳ-ಹೊರಗೆ ಚರ್ಚಿಸಲು ಸಿದ್ಧ. ನಾವೂ ಅವರ ಭ್ರಷ್ಟಾಚಾರದ ಬಂಡವಾಳ ಬಯಲು ಮಾಡುತ್ತೇವೆ. ರಣದೀಪ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಬರೀ ಹೇಳಿಕೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ದೇಶವನ್ನು ಲೂಟಿ ಮಾಡಿ ಬಲಿಷ್ಠರಾಗಿರುವ ಪ್ರಿಯಾಂಕ್ ಖರ್ಗೆ‌ ಏನ್ ಹೇಳ್ತಾರೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅವರೇ‌ ಐಟಿ ಬಿಟಿ ಸಚಿವರಾಗಿದ್ದರು. ಆಗಲೇ ಬಿಟ್ ಕಾಯಿನ್ ಹಗರಣ ನಡೆದಿತ್ತು ಎಂದು ರೇಣುಕಾಚಾರ್ಯ ಆರೋಪಿಸಿದರು. 

ಗಂಭೀರ ಎಚ್ಚರಿಕೆ: ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಮಂಗಳವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಟಿಪ್ಪು ವಂಶಸ್ಥ ಎಂದು ಹೇಳಿಕೊಂಡ ಇಮ್ರಾನ್ ಪಾಷಾ 'ತಲೆ ತೆಗೆಯಲು ಸಿದ್ಧ' ಎಂದಿದ್ದಾರೆ. ಇದು ಪಾಕಿಸ್ತಾನ, ತಾಲಿಬಾನ್‌ ಅಲ್ಲ. ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಹಿಂದು-ಮುಸ್ಲಿಂ ಸೌಹಾರ್ದದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಮತಾಂಧ ಟಿಪ್ಪು ವಂಶಸ್ಥ ಎಂದು ಹೇಳಿಕೊಂಡು ಮನಸೋಇಚ್ಛೆ ಹೇಳಿಕೆ ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಇದೊಂದು ಗಂಭೀರವಾದ ಎಚ್ಚರಿಕೆ ಎಂದು ರೇಣುಕಾಚಾರ್ಯ ಖಡಕ್ ಆಗಿ‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net