Digital Arrest: ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲವೂ ಡಿಜಿಟಲ್ ಮಯ. ಶರವೇಗದಲ್ಲಿ ಸಾಗುತ್ತಿರುವ ಆನ್ಲೈನ್ ಯುಗದಲ್ಲಿ ಹೊಸ ಆವಿಷ್ಕಾರಗಳು ಜನರನ್ನು ದಿಗ್ಭ್ರಮೆಗೊಳಿಸಿದರೆ, ಡಿಜಿಟಲ್ ಅರೆಸ್ಟ್ನಂತಹ ಮೋಸದ ಆನ್ಲೈನ್ ಜಾಲಗಳು ಜೀವಕ್ಕೆ ಕುತ್ತು ತರುತ್ತಿವೆ.
ಇದನ್ನೂ ಓದಿ: ಬೇಟೆಗಾರರ ಬಲೆಗೆ ಸಿಲುಕಿ ಕಾಲು ಕಳೆದುಕೊಂಡಿದ್ದ ಕರಡಿಗೆ ಕೃತಕ ಕಾಲು ಜೋಡಣೆ: ದೇಶದಲ್ಲೇ ಮೊದಲು! Bannerghatta National Park
ಡಿಜಿಟಲ್ ಅರೆಸ್ಟ್, ಆನ್ಲೈನ್ ಸ್ಕ್ಯಾಮ್, ಅಶ್ಲೀಲ ವಿಡಿಯೋ ಬೆದರಿಕೆ ಕರೆಗಳು ಸೇರಿದಂತೆ ಸಾಕಷ್ಟು ವಂಚನೆಗಳ ಬಗ್ಗೆ ದಿನನಿತ್ಯ ಪತ್ರಿಕೆ, ಮಾಧ್ಯಮಗಳಲ್ಲಿ ಮಾಹಿತಿಗಳು ಪ್ರಕಟವಾಗುತ್ತಿದೆ. ಇದರೊಂದಿಗೆ ಜನರಲ್ಲಿ ಸೈಬರ್ ಪೊಲೀಸರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರೂ ಸಹ ಇಂತಹ ಪ್ರಕರಣಗಳು ತೀರ ಸಾಮಾನ್ಯವಾಗಿಬಿಟ್ಟಿವೆ. ಯಾವುದೇ ತಪ್ಪು ಮಾಡದೆ, ಕೇವಲ ಒಂದು ಸಣ್ಣ ಎಡವಟ್ಟಿನಿಂದ ಜನರು ತಮ್ಮ ಲಕ್ಷಾಂತರ, ಕೋಟ್ಯಂತರ ರೂ. ಉಳಿತಾಯ ಅಥವಾ ಸಂಪಾದಿಸಿದ ಹಣವನ್ನು ಕ್ಷಣಮಾತ್ರದಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ, ಇಂತಹ ವಂಚನೆಗಳಿಗೆ ಬ್ರೇಕ್ ಬೀಳುತ್ತಿಲ್ಲ ಎಂಬುದು ಕಳವಳಕಾರಿ.
ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿದ್ದು, ಹೈದರಾಬಾದ್‌ನ ನಿವೃತ್ತ ವೈದ್ಯೆಯೊಬ್ಬರು, ಡಿಜಿಟಲ್ ಅರೆಸ್ಟ್ಗೆ ಸಿಲುಕಿ, ಹಣ ಕಳೆದುಕೊಂಡಿದ್ದಲ್ಲದೇ, ವಂಚಕರ ಬೆದರಿಕೆಗೆ ಹೆದರಿ ಉಸಿರು ಚೆಲ್ಲಿರುವುದು ನಿಜಕ್ಕೂ ದುರಂತ. ಸೈಬರ್ ಕ್ರಿಮಿನಲ್ಗಳ ಬೆದರಿಕೆಯಿಂದಾಗಿ ನಿವೃತ್ತ ವೈದ್ಯೆ (75) ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿ ಉಲ್ಲೇಖಿಸಿದೆ. ಪೊಲೀಸ್ ಅಧಿಕಾರಿಗಳಂತೆ ವೇಷ ಧರಿಸಿದ ಸೈಬರ್ ಅಪರಾಧಿಗಳು, ವೈದ್ಯೆಗೆ ವಿಡಿಯೊ ಕಾಲ್ ಮೂಲಕ ಬೆದರಿಕೆ ಹಾಕಿದ್ದರು. ನಿಮ್ಮ ಮೇಲೆ ಹಣ ವರ್ಗಾವಣೆ ಮತ್ತು ಮಾದಕವಸ್ತು ಪೂರೈಕೆ ಪ್ರಕರಣಗಳು ದಾಖಲಾಗಿವೆ ಎಂದು ಬೆದರಿಕೆಯೊಡ್ಡಿದ ಕಿಡಿಗೇಡಿಗಳು, ಶೀಘ್ರವೇ ನಿಮ್ಮನ್ನು ಬಂಧಿಸುತ್ತೇವೆ ಎಂದು ಹೆದರಿಸಿದ್ದಾರೆ.
ಇದನ್ನೂ ಓದಿ: ಅಮಾವಾಸ್ಯೆಯಂದೇ ಸಂಭವಿಸಲಿದೆ ಸೂರ್ಯಗ್ರಹಣ; ಪೂರ್ವಜರಿಗೆ ಸಲ್ಲಿಸುವ ಪೂಜೆಯಲ್ಲಿ ಬದಲಾವಣೆಯಾಗುತ್ತಾ| solar eclipse
ಈ ಕೇಸ್ನಿಂದ ನೀವು ಹೊರಬರಬೇಕು ಎಂದರೆ, ನಾವು ಹೇಳಿದಂತೆ ಹಣ ಪಾವತಿಸಬೇಕು. ಇಲ್ಲದಿದ್ದರೆ, ಮುಂದೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಕಿಡಿಗೇಡಿಗಳು ಹೀಗೆ ಹೇಳುತ್ತಿದ್ದಂತೆ ಬೆದರಿದ ವೈದ್ಯೆ, ಆರೋಪಿಗಳು ಕೇಳಿದ ಖಾತೆಗಳಿಗೆ 6.5 ಲಕ್ಷ ರೂ. ಹಣವನ್ನು ವರ್ಗಾಯಿಸಿದ್ದಾರೆ. ಇಷ್ಟಾದರೂ ವೃದ್ಧೆಯನ್ನು ಬೆಂಬಿಡದ ವಂಚಕರು, ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಟ್ಟ ಬೆನ್ನಲ್ಲೇ ವೈದ್ಯೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸೈಬರ್ ವಂಚಕರ ಬೆದರಿಕೆಗಳನ್ನು ಸಹಿಸಲಾಗದೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು, ಡಿಜಿಟಲ್ ಅರೆಸ್ಟ್ನಂತಹ ಆನ್ಲೈನ್ ವಂಚನೆಗಳ ಜಾಲದಿಂದ ಅಥವಾ ಹಗರಣಗಳ ಬಗ್ಗೆ ಜನರು ಜಾಗರೂಕರಾಗಿರಲು ಎಚ್ಚರಿಸಿದ್ದಾರೆ,(ಏಜೆನ್ಸೀಸ್).