ಬೆಂಗಳೂರು: ಉಗ್ರ ಚಟುವಟಿಕೆ, ತರಬೇತಿ ಮತ್ತು ನೇಮಕಾತಿ ಆರೋಪ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಅದರ ಉಪ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ದೇಶದ್ರೋಹಿ ಕೃತ್ಯಗಳ ಹಿನ್ನೆಲೆಯಲ್ಲಿ ಈವರೆಗೆ ಪಿಎಫ್ಐ ಸೇರಿ 42 ಉಗ್ರ ಸಂಘಟನೆಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಇದರಲ್ಲಿ ಕೆಲ ಸಂಘಟನೆಗಳು ಸ್ಥಗಿತಗೊಂಡು ಮತ್ತೆ ಹೊಸ ಹೆಸರಿನಲ್ಲಿ ಮರು ಹುಟ್ಟು ಪಡೆದಿದ್ದರೆ ಕೆಲ ಸಂಘಟನೆಗಳು ಸಕ್ರಿಯವಾಗಿರುವ ಸಂಘಟನೆಗಳ ಜತೆ ವಿಲೀನಗೊಂಡು ಕುಕೃತ್ಯ ಮುಂದುವರಿಸಿವೆ.
ಕಾನೂನು ಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ 1967ರ ಪ್ರಕಾರ 2019ರವರೆಗೆ ಆಲ್ಕೈದ, ಲಷ್ಕರ್ ಎ ತಯ್ಬಾ, ಸಿಮಿ ಸೇರಿ 41 ಉಗ್ರ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಉಗ್ರ ಸಂಘಟನೆಗಳ ಹುಟ್ಟು, ಪೂರ್ವಾಪರ, ಸದಸ್ಯರ ಸಂಖ್ಯೆ, ಕಾರ್ಯಚಟುವಟಿಕೆ, ಉದ್ದೇಶವೇನು, ಯಾವ ಪ್ರದೇಶ ಅವರ ಟಾರ್ಗೆಟ್ ಎಂಬಿತ್ಯಾದಿ ವಿಚಾರಗಳನ್ನು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ನಿರಂತರವಾಗಿ ಸಂಗ್ರಹಿಸಿರುತ್ತವೆ. ಎನ್ಐಎ, ಸಿಬಿಐ ಹಾಗೂ ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದಲ್ಲಿ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇರುತ್ತದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ವೆುಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯನ್ನು 2001ರಲ್ಲಿ ನಿಷೇಧಿಸಿ ಆದೇಶಿಸಲಾಗಿತ್ತು. 2014ರಲ್ಲಿ ಯುಪಿಎ ಸರ್ಕಾರ ಪುನಃ 5 ವರ್ಷ ನಿಷೇಧಿಸಿತ್ತು. ಸಿಮಿ ಸಂಘಟನೆ ನಿಷೇಧದ ನಂತರ ಅದರ ಪರ್ಯಾಯವಾಗಿ ಪಿಎಫ್ಐ ಹುಟ್ಟಿಕೊಂಡಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.
ಕೇಂದ್ರ ಸರ್ಕಾರ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ನಿಷೇಧಿಸಿದ ಪರಿಣಾಮ ರಾಜ್ಯ ವ್ಯಾಪಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸೂಕ್ಷ್ಮ, ಅತೀಸೂಕ್ಷ್ಮ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿದ್ದು, ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಪಿಎಫ್ಐ ನಿಷೇಧ ವಿರೋಧಿಸಿ ಅಥವಾ ಪರವಾಗಿ ಪ್ರತಿಭಟನೆ, ಹರತಾಳಕ್ಕೆ ಮುಂದಾದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಆದೇಶವನ್ನು ಪಾಲಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ಮಾತನಾಡಿ ನಗರದಲ್ಲಿ ಎಲ್ಲ ಅಧಿಕಾರಿಗಳು ಗಸ್ತಿನಲ್ಲಿ ಇದ್ದಾರೆ. ನಿಷೇಧಕ್ಕೆ ಒಳಗಾಗಿರುವ ಸಂಘಟನೆ ಯಾವುದಾದರು ಚಟುವಟಿಕೆ ನಡೆಸಿದರೆ, ಕಾನೂನು ಕ್ರಮ ಜರುಗಿಸಲಿದ್ದೇವೆ. ಕೇಂದ್ರ ಸರ್ಕಾರದ ಆದೇಶಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಆದೇಶ ಹೊರಡಿಸಲಿದೆ. ಆದೇಶಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುವುದಾಗಿ ಅವರು ವಿವರಿಸಿದ್ದಾರೆ.
ಪಿಎಫ್ಐನಿಂದಲೇ ತನ್ವೀರ್ ಸೇಠ್ ಮೇಲೆ ಕೊಲೆ ಪ್ರಯತ್ನ ನಡೆದಿತ್ತು. ಪಿಎಫ್ಐ ದೊಡ್ಡ ಎನಿಮಿ ಎಂದು ಅವರೇ ಬಂದು ಹೇಳಿದ್ದರು. ಈಗ ರಾಜಕಾರಣಕ್ಕೆ ತಮ್ಮ ಮೇಲೆ ದಾಳಿಯಾಗಿದ್ದನ್ನೂ ಮರೆತು ಮಾತನಾಡುತ್ತಾರೆಂದರೆ ಏನು ಹೇಳಲು ಸಾಧ್ಯ. | ಬಸವರಾಜ ಬೊಮ್ಮಾಯಿ ಸಿಎಂ ಪಿಎಫ್ಐ ಸಂಘಟನೆ ನಿಷೇಧ ಮಾಡಿದ ತಕ್ಷಣ ಸಂಪೂರ್ಣ ಶಾಂತಿ ನೆಲಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದತೆ ಬೆಳೆಸುವ ಕೆಲಸವನ್ನು ಸರ್ಕಾರ ಮಾಡಬೇಕು. ಯಾವ ರೀತಿ ಗಲಭೆ ಸೃಷ್ಟಿಗೆ ಪೋ›ತ್ಸಾಹ ಕೊಡುತ್ತಿದ್ದಾರೆ? ಎಂಬ ಮಾಹಿತಿಯನ್ನು ಸಾಕ್ಷಿ ಸಮೇತ ಜನತೆ ಮುಂದೆ ಇಡಬೇಕು. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಪಿಎಫ್ಐಗೆ ನಿಷೇಧಿಸಿದ ಕ್ರಮ ದಿಟ್ಟತನದಿಂದ ಕೂಡಿದೆ. ಇದಕ್ಕೆ ಬೇಕಾದಂಥ ಹಲವು ಸಾಕ್ಷಿಗಳು ಸರ್ಕಾರಕ್ಕೆ ಸಿಕ್ಕಿದ್ದರಿಂದಲೇ ಬ್ಯಾನ್ ಮಾಡಲಾಗಿದೆ. ಆರ್ಎಸ್ಎಸ್ ಬ್ಯಾನ್ ಮಾಡಬೇಕು ಎನ್ನುವವರನ್ನೇ ಮೊದಲು ಬ್ಯಾನ್ ಮಾಡಬೇಕು. | ಎನ್.ರವಿಕುಮಾರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರೆಸ್ಸೆಸ್ ಬ್ಯಾನ್ ಮಾಡಬೇಕು ಎಂದು ಹೇಳಿಕೆ ನೀಡುವುದು ಮೂರ್ಖತನ. ಹಾಗೇನಾದರೂ ಹೇಳಿಕೆ ಕೊಟ್ಟಿದ್ದರೆ ಅವರು ಈಗಲೇ ಗುಂಡಿಗೆ ಹೋಗಿ ದ್ದಾರೆ. ಮುಂದೆ ಸಂಪೂರ್ಣವಾಗಿ ಮುಚ್ಚಿ ಹೋಗ್ತಾರೆ | ಸಿ.ಎನ್. ಅಶ್ವತ್ಥನಾರಾಯಣ ಸಚಿವ ಭಾರತದ ಸುರಕ್ಷತೆ ದೃಷ್ಟಿಯಿಂದ ಪಿಎಫ್ಐ ಸಹಿತ ಎಂಟು ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿ ಸಂತಸದ ವಾತಾವರಣ ಸೃಷ್ಟಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಲೇಬೇಕು. ರಾಜ್ಯ ದಲ್ಲಿನ ಮದರಸಾಗಳನ್ನೂ ಸರ್ಕಾರ ನಿಷೇಧಿಸಬೇಕು. | ಪ್ರಮೋದ ಮುತಾಲಿಕ್ ಶ್ರೀರಾಮಸೇನೆ ಅಧ್ಯಕ್ಷ
ಬೆಂಗಳೂರು: ಪಾಪ್ಯುಲರ್ ಫ್ರಂಟ್ ಮತ್ತು ಇತರೆ ಸಂಘಟನೆಗಳ ಬ್ಯಾನ್ ವಿಷಯದಲ್ಲಿ ರಾಜಕೀಯ ನಾಯಕರ ಜಟಾಪಟಿ ನಡೆದಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ, ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಸಂಘಟನೆ ವಿರುದ್ಧ ಸರ್ಕಾರ ಕ್ರಮ ಕೈಗೊಂಡರೆ ವಿರೋಧಿಸುವುದಿಲ್ಲ. ಪಿಎಫ್ಐ ಬ್ಯಾನ್ ಮಾಡುವಂತೆ ನಾವು ಒತ್ತಾಯ ಮಾಡಿದ್ದರಿಂದಲೇ ಈಗ ಆಗಿದೆ. ಅದೇ ರೀತಿ ಆರ್ಎಸ್ಎಸ್ ಮತ್ತಿತರ ಸಂಘಟನೆಗಳು ಕಾನೂನು ವಿರೋಧಿ ಕೃತ್ಯಕ್ಕೆ ಕೈ ಹಾಕಿದರೆ, ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಆ ಸಂಘಟನೆಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ಗಳನ್ನು ಹಿಂದಕ್ಕೆ ಪಡೆದಿದ್ದರು. ಪಿಎಫ್ಐ ಜತೆಗಿನ ನೆಂಟಸ್ಥಿಕೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎಂದು ಕುಟುಕಿದರು. ಸಿದ್ದರಾಮಯ್ಯ ಏನೇ ಘಟನೆ ಆದರೂ ಆರ್ಎಸ್ಎಸ್ಗೆ ಲಿಂಕ್ ಮಾಡುತ್ತಾರೆ. ಅವರು ದೇಶಭಕ್ತಿ ಕೆಲಸ ಮಾಡುವುದಕ್ಕೆ ಅವರನ್ನು ಬ್ಯಾನ್ ಮಾಡಬೇಕಾ? ಎಂದು ಪ್ರಶ್ನಿಸಿದರು.
ಪಿಎಫ್ಐನವರು ಹಲವಾರು ರೂಪಾಂತರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಹಿಂದೆ ಸಿಮಿ ಇತ್ತು. ನಂತರ ಅದು ಕೆಎಫ್ಡಿಯಾಗಿ ಬಳಿಕ ಅದು ಪಿಎಫ್ಐ ಆಗಿ ಬಂದಿದೆ. ಹಲವು ವರ್ಷದಿಂದ ಸಂಘಟನೆ ದೇಶದ್ರೋಹ ಚಟುವಟಿಕೆಗಳನ್ನು ಮಾಡುತ್ತಿದ್ದರು. ಕೇರಳದ ಸಿಪಿಎಂ ಸೇರಿ ಹಲವಾರು ರಾಜಕೀಯ ಪಕ್ಷಗಳು ಸಂಘಟನೆಯ ಬ್ಯಾನ್ಗೆ ಒತ್ತಾಯಿಸಿದ್ದವು ಎಂದರು.
ಎಸ್ಡಿಪಿಐ ಭವಿಷ್ಯವೇನು?: ಪಿಎಫ್ಐ ಕಾರ್ಯಕರ್ತರು ಎಸ್ಡಿಪಿಐ ಮೂಲಕ ಕೆಲಸ ಮಾಡುವ ಸಾಧ್ಯತೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ. ಎಸ್ಡಿಪಿಐ ನೋಂದಾಯಿತ ರಾಜಕೀಯ ಪಕ್ಷ. ಅದನ್ನು ಬ್ಯಾನ್ ಮಾಡಲು ಕಾನೂನಿನಲ್ಲಿ ಬೇರೆ ರೀತಿಯ ನಿಯಮಾವಳಿಗಳಿವೆಎಂದರು.
ಪಿಎಫ್ಐ ನಿಷೇಧ ಎಂಬುದು ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಮಾತಾಗಿತ್ತು. ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ನಡೆದಿದೆ ಎಂಬ ಸುದ್ದಿ ಬಂತು, ಈಗ ಪಿಎಫ್ಐ ಬ್ಯಾನ್ ಮಾಡಲಾಗಿದೆ. ಎಂಟು ವರ್ಷದಿಂದ ದೇಶವನ್ನಾಳುತ್ತಿದ್ದ ಬಿಜೆಪಿ ಇಷ್ಟು ವರ್ಷ ಸುಮ್ಮನಿದ್ದದ್ದು ಏಕೆ? ಗುಜರಾತ್ ಚುನಾವಣೆಗಾಗಿ ನಾಟಕ ಕಂಪೆನಿ ಹೊಸ ನಾಟಕ ಮಾಡಿದೆ. | ಬಿ.ಕೆ. ಹರಿಪ್ರಸಾದ್ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ
ಪಿಎಫ್ಐ ಹಾಗೂ ಎಂಟು ಅಂಗಸಂಸ್ಥೆಗಳ ನಿಷೇಧ ಕಾಳ್ಗಿಚ್ಚಿನಂತೆ ಹರಡುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ದಿಢೀರ್ ‘ಮಿಡ್ ನೈಟ್’ ಸಭೆ ನಡೆಯಿತು ಎಂದು ಉನ್ನತ ಮೂಲಗಳು ತಿಳಿಸಿವೆ. ಬೊಮ್ಮಾಯಿ ಖಾಸಗಿ ನಿವಾಸಕ್ಕೆ ಮಂಗಳವಾರ ಮಧ್ಯರಾತ್ರಿ ಆಯ್ದ ಹಿರಿಯ ಅಧಿಕಾರಿಗಳಿಗೆ ತುರ್ತು ಬುಲಾವ್ ನೀಡಿ, ರ್ಚಚಿಸಿದರು ಎನ್ನಲಾಗಿದೆ. ಪಿಎಫ್ಐ ಕಚೇರಿಗಳ ಮೇಲೆ ಎನ್ಐಎ, ಇಡಿ ದಾಳಿ ಹಲವರ ಬಂಧನ. ಎರಡನೇ ಹಂತದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದ ನಂತರದ ಪರಿಸ್ಥಿತಿ ಕುರಿತು ಸಿಎಂ ಮಾಹಿತಿ ಪಡೆದಿದ್ದಾರೆ. ಕರಾವಳಿ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳ ವಿವರ ಪಡೆದ ನಂತರ ಮುಂದಿನ ಹಂತದ ಸಿದ್ಧತೆಗಳ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಿದರು ಎಂದು ಮೂಲಗಳು ಹೇಳಿವೆ.
ಕೇಂದ್ರ ಸರ್ಕಾರ ಪಿಎಫ್ಐ ನಿಷೇಧಿಸಿರುವುದು ನೆಮ್ಮದಿಯ ವಿಚಾರ. ಸಮಾಜ ವಿರೋಧಿ ಚಟುವಟಿಕೆ ನಡೆಸುವವರಿಗೆ ಇದೊಂದು ಪಾಠ. ಇಂಥ ಶಕ್ತಿಗಳು ಮರುಹುಟ್ಟು ಪಡೆಯದಂತೆ ನೋಡಿಕೊಳ್ಳುವುದು ಸರ್ಕಾರದ ಜವಾವ್ದಾರಿ. | ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪೇಜಾವರ ಮಠಾಧೀಶರು ಸಿದ್ದರಾಮಯ್ಯ ಯಾವಾಗಲೂ ತಲೆತಿರುಕನ ತರಹ ಮಾತನಾಡುತ್ತಾರೆ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಕಲ್ಪನೆಯೇ ಇಲ್ಲ. ಆರೆಸ್ಸೆಸ್ ಬಗ್ಗೆ ಹಗುರವಾಗಿ ಮಾತನಾಡುವುದು ಸಿದ್ದರಾಮಯ್ಯ ಅವರ ಯೋಗ್ಯತೆ ತೋರಿಸುತ್ತದೆ. | ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ ವಿದ್ರೋಹಿ, ವಿಚ್ಛಿದ್ರಕಾರಿ ಮನಸ್ಥಿತಿಯ ಸಂಘಟನೆಗಳು ಸಮಾಜದ ಒಳಗಡೆಯೇ ರೂಪುಗೊಳ್ಳದಂತೆ ಎಚ್ಚರಿಕೆ ವಹಿಸಬೇಕಿದೆ. ನಿಷೇಧದ ಸುತ್ತ ಯಾವ ಪಕ್ಷವೂ ರಾಜಕಾರಣ ಮಾಡಬಾರದು. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬೆಂಗಳೂರು: ರಾಜ್ಯದಲ್ಲಿ ಭದ್ರವಾಗಿ ಬೇರೂರಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ 320 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 18 ಕೊಲೆ ಪ್ರಕರಣ ಮತ್ತು 3 ಕೊಲೆ ಯತ್ನ ಪ್ರಕರಣಗಳಾಗಿವೆ.
ಬೆಂಗಳೂರು: ಪಿಎಫ್ಐ ನಿಷೇಧದ ವಿಚಾರ ಬಂದಾಗಲೆಲ್ಲ ಕಾನೂನು ಪ್ರಕ್ರಿಯೆಗೆ ಕಾಲಾವಕಾಶ ಹಿಡಿಯುತ್ತದೆ, ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎನ್ನುತ್ತಿದ್ದ ಬಿಜೆಪಿ ರಾಜ್ಯ ನಾಯಕರು ಸಂತೃಪ್ತಿಯ ನಗೆ ಚೆಲ್ಲಿದ್ದಾರೆ. ಕಾಂಗ್ರೆಸ್ ಓಲೈಕೆ ನೀತಿಯಿಂದಲೇ ಪಿಎಫ್ಐನಂತಹ ಮತಾಂಧ ಶಕ್ತಿಗಳು ಬೆಳೆದಿವೆ ಬಿಜೆಪಿ ಟೀಕಿಸಿದರೆ, ಪಿಎಫ್ಐ ನಿಷೇಧಿಸಿ, ನಿಮಗೆ ಬೇಡ ಎಂದವರ್ಯಾರು? ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕುತ್ತಿದ್ದರು. ಪ್ರತಿಪಕ್ಷಗಳಿಗೆ ರಾಜಕೀಯವಾಗಿ ತಿರುಗೇಟು ನೀಡುತ್ತಿದ್ದರು. ಆದರೆ ಹಿಜಾಬ್ ವಿವಾದ, ನೆಟ್ಟಾರು ಹತ್ಯೆ ಬಳಿಕ ಸ್ವಪಕ್ಷದ ಕಾರ್ಯಕರ್ತರ ಒತ್ತಡವೂ ಹೆಚ್ಚತೊಡಗಿತ್ತು.
ಪಿಎಫ್ಐ ಇನ್ನಿತರ 8 ಸಂಘಟನೆ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿರು ವುದು ಸ್ವಾಗತಾರ್ಹ. ಕಠಿಣ ಕ್ರಮದ ಮೂಲಕ ಸಮಾಜ ವಿಘಟನೆ, ದೇಶ ಅಸ್ಥಿರಗೊಳಿಸಲು ಪ್ರಯತ್ನಿಸುವ ವಿಚ್ಛಿದ್ರಕಾರಿ ಶಕ್ತಿಗಳ ಸಂಚು ಫಲಿಸುವುದಿಲ್ಲ ಎಂಬ ಸಂದೇಶ ರವಾನಿಸಿದೆ. | ಅರುಣ್ ಸಿಂಗ್ ಬಿಜೆಪಿ ರಾಜ್ಯ ಉಸ್ತುವಾರಿ
ಪಿಎಫ್ಐ ಬ್ಯಾನ್ ಮಾಡಿಯೇ ಸಿದ್ಧವೆಂದು ಹೇಳುತ್ತಿದ್ದ ನಾಯಕರು ನಿರ್ದಿಷ್ಟ ಕಾಲಮಿತಿ ತಿಳಿಯದೆ ದಿಲ್ಲಿಯತ್ತ ಬೊಟ್ಟು ತೋರಿಸಿ ಕೈಚೆಲ್ಲಿದ್ದರು. ಪಿಎಫ್ಐ ಜತೆಗೆ ಸಿಎಫ್ಐ ಇನ್ನಿತರ 8 ಸಂಘಟನೆಗಳನ್ನು ಕೊನೆಗೂ ಕೇಂದ್ರ ಸರ್ಕಾರ ನಿಷೇಧಿಸಿದ್ದು, ಬಿಜೆಪಿ ರಾಜ್ಯ ನಾಯಕರಲ್ಲಿ ಉತ್ಸಾಹ ಹೆಚ್ಚಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪಿಎಫ್ಐ ಕಾರ್ಯಕರ್ತರ ವಿರುದ್ಧದ ಕೇಸ್ಗಳನ್ನು ಕೈಬಿಟ್ಟಿದ್ದನ್ನು ಬಿಜೆಪಿ ಮತ್ತೆ ಮುನ್ನೆಲೆಗೆ ತಂದಿದೆ. ಕೈ ನಾಯಕರ ಪೇಸಿಎಂ ಅಸ್ತ್ರಕ್ಕೆ ಪಿಎಫ್ಐ ಕೇಸ್ ವಾಪಸ್ಸಾತಿ ಅಸ್ತ್ರದ ಮೂಲಕ ತಿರುಗೇಟು ನೀಡಲು ಸಜ್ಜಾಗಿದ್ದು, ಪಿಎಫ್ಐ ಬೆಳೆಯಲು ಕಾಂಗ್ರೆಸ್ಸೇ ಕಾರಣವೆಂದು ನೇರವಾಗಿ ಆರೋಪಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರ ಕೇಸ್ ವಾಪಸ್ ಪಡೆದಿದ್ದರ ಬಗ್ಗೆ ಸಿಎಂ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಲವು ನಾಯಕರು ನೆನಪಿಸಿದ್ದಾರೆ. ಆದರೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟು ರದ್ದುಪಡಿಸಿದ ಪ್ರಕರಣಗಳ ಮರು ತನಿಖೆಗೆ ಅಗತ್ಯವಿದೆ ಎಂದಿದ್ದಾರೆ.