ನ್ಯೂಸ್

ತವರಿಗೆ ಪೊಲೀಸರ ವರ್ಗ: ನಿರ್ಬಂಧ ಸಡಿಲಿಕೆ; ಸರ್ಕಾರದಿಂದ ತಾತ್ವಿಕ ಒಪ್ಪಿಗೆ..

| ಕೀರ್ತಿನಾರಾಯಣ ಸಿ. ಬೆಂಗಳೂರು

ಅಂತರ ಜಿಲ್ಲೆ ಹಾಗೂ ಅಂತರ ವಲಯ ವರ್ಗಾವಣೆಗಿರುವ ನಿರ್ಬಂಧ ಸಡಿಲಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಸರ್ಕಾರದ ಅನುಮೋದನೆ ಸಿಕ್ಕ ನಂತರ ಕೋರಿಕೆ ಮೇರೆಗೆ ಪೊಲೀಸರಿಗೆ ಸ್ವಂತ ಜಿಲ್ಲೆ ಅಥವಾ ವಲಯದಲ್ಲೇ ಕೆಲಸ ಮಾಡುವ ಯೋಗ ದೊರೆಯಲಿದೆ. ವಿವಿಧ ಕಾರಣಗಳಿಂದ ಕುಟುಂಬದಿಂದ ದೂರವಿರುವ, ವಯಸ್ಸಾದ ತಂದೆ-ತಾಯಿಗೆ ಅನಾರೋಗ್ಯವಿದ್ದರೂ ಜತೆಯಲ್ಲಿದ್ದು ನೋಡಿಕೊಳ್ಳಲಾಗುತ್ತಿಲ್ಲ ಎಂದು ಕೊರಗುವ ಪೊಲೀಸರ ಮನೋಸ್ಥೈರ್ಯಕ್ಕೆ ಇದರಿಂದ ಬೂಸ್ಟರ್ ಡೋಸ್ ಸಿಗಲಿದೆ.

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 16(ಎ) ಮರು ಜಾರಿಗೆ ಅನುಮತಿ ಕೋರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆ ಪರಿಶೀಲಿಸಿರುವ ಸರ್ಕಾರ, ಅನುಮೋದನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಅಧಿಕೃತ ಆದೇಶ ಹೊರಡಿಸಿದ ನಂತರ ಅಂತರ ಜಿಲ್ಲಾ ವರ್ಗಾವಣೆ ಮಾಡಲು ಇಲಾಖಾ ಮುಖ್ಯಸ್ಥರಿಗೆ ಅಧಿಕಾರ ಸಿಗಲಿದೆ. ಈ ಮೂಲಕ ವೈಯಕ್ತಿಕ ಸಮಸ್ಯೆ ಎದುರಿಸುತ್ತಿರುವ ಕೆಳಹಂತದ ಸಿಬ್ಬಂದಿ ಕಷ್ಟಕ್ಕೆ ಆಯಾ ಘಟಕಗಳ ಮುಖ್ಯಸ್ಥರೇ ಸ್ಪಂದಿಸಬಹುದಾಗಿದೆ. 1977ರಿಂದಲೂ ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಇತ್ತು. ಆದರೆ, 2021ರಲ್ಲಿ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗೆ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ ನಿಯಮ 16 (ಎ) ಅನ್ನು ತೆಗೆದು ಹಾಕಿತ್ತು.

ಈಗ ಮತ್ತೆ 16 (ಎ) ನಿಯಮ ಜಾರಿಯಾದರೆ ಕೋರಿಕೆ ಮೇರೆಗೆ ಕಾನ್​ಸ್ಟೆಬಲ್, ಹೆಡ್ ಕಾನ್​ಸ್ಟೆಬಲ್, ಸಹಾಯಕ ಸಬ್ ಇನ್​ಸ್ಪೆಕ್ಟರ್, ಸಬ್ ಇನ್​ಸ್ಪೆಕ್ಟರ್ ಹಾಗೂ ಗ್ರೂಪ್ ಸಿ ಮತ್ತು ಡಿ (3 ಮತ್ತು 4ನೇ ವರ್ಗ) ವೃಂದಕ್ಕೆ ಸೇರಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಂದು ಕಮಿಷನರೇಟ್ ಘಟಕದಿಂದ ಇನ್ನೊಂದು ಕಮಿಷನರೇಟ್ ಘಟಕಕ್ಕೆ ವರ್ಗಾವಣೆ ಮಾಡಬಹುದಾಗಿದೆ.

ಕಾನ್​ಸ್ಟೆಬಲ್ ಮತ್ತು ಗ್ರೂಪ್ ಸಿ-ಡಿ ವೃಂದದ ಸಿಬ್ಬಂದಿ ಜ್ಯೇಷ್ಠತೆಯನ್ನು ಆಯಾ ನೇಮಕಾತಿ ಘಟಕಗಳಲ್ಲೇ ನಿರ್ವಹಣೆ ಮಾಡಲಾಗುತ್ತಿದೆ. ಆಯಾ ಘಟಕಗಳ ಅಧಿಕಾರಿಗಳೇ ನೇಮಕಾತಿ ಪ್ರಾಧಿಕಾರಿಗಳಾಗಿರುವುದರಿಂದ ಆಯಾ ಘಟಕದಲ್ಲೇ ಮುಂಬಡ್ತಿ ನೀಡಲಾಗುತ್ತದೆ. ಸೇವಾ ಜ್ಯೇಷ್ಠತೆ ಬಿಟ್ಟುಕೊಟ್ಟು ವರ್ಗಾವಣೆಯಾಗುವುದರಿಂದ ಜ್ಯೇಷ್ಠತೆ ಮತ್ತು ಮುಂಬಡ್ತಿ ಸಂಬಂಧ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಇಲಾಖೆ ಹೇಳೋದೇನು?: ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡುವ ರೀತಿಯಲ್ಲಿಯೇ ಇಲಾಖೆಯ ಪಿಎಸ್​ಐ ಮತ್ತು ಇತರೆ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಅಂತರ ಜಿಲ್ಲಾ ಮತ್ತು ವಲಯ ವರ್ಗಾವಣೆ ಮಾಡುವುದು ಸೂಕ್ತ ಎಂದು ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿದೆ.

ಡಿಜಿಪಿಗಿದೆ ಅಧಿಕಾರ: ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೊಳಿಸುವ ಅಧಿಕಾರ ಈಗ ಡಿಜಿಪಿಗೆ ಇದೆ. ಆದರೆ, ಇಲಾಖೆಯಲ್ಲಿ 90 ಸಾವಿರ ಸಿಬ್ಬಂದಿಯಿದ್ದಾರೆ. ವರ್ಗಾವಣೆ ಕೋರಿ ಅಧಿಕಾರಿ ಮತ್ತು ಸಿಬ್ಬಂದಿ ಸಲ್ಲಿಸುವ ಎಲ್ಲ ಅರ್ಜಿಗಳನ್ನೂ ಡಿಜಿಪಿ ಪರಿಶೀಲಿಸಲು ಸಾಧ್ಯವಿಲ್ಲ. ಮೊದಲಿನಂತೆ ಆಯಾ ಘಟಕದ ಮುಖ್ಯಸ್ಥರಿಗೆ ವರ್ಗಾವಣೆ ಅರ್ಜಿ ಪರಿಶೀಲಿಸಿ, ಪರಿಗಣಿಸುವ ಅಧಿಕಾರ ಕೊಟ್ಟರೆ ಸೂಕ್ತ.

ಒತ್ತಡದಲ್ಲೇ ಕೆಲಸ: ಕಾನೂನು ಸುವ್ಯವಸ್ಥೆಯ ಜತೆಗೆ ಅಪರಾಧ ನಿಯಂತ್ರಣ, ಸಂಚಾರ ಸುಗಮ ನಿರ್ವಹಣೆ, ತನಿಖಾ ಕಾರ್ಯ, ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಾರೆ. ನಿರಂತರವಾಗಿ ಮಾನಸಿಕ/ದೈಹಿಕ ಒತ್ತಡದಲ್ಲೇ ಕೆಲಸ ಮಾಡುತ್ತಾರೆ. ಕರ್ತವ್ಯದ ಜತೆಗೆ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳಬೇಕಾದ ಅನಿವಾರ್ಯತೆ ಪೊಲೀಸರ ಮೇಲಿದೆ.

ಅನುಕೂಲಗಳೇನು?

  • ಸ್ವಂತ ಜಿಲ್ಲೆ, ಕುಟುಂಬ ಬಿಟ್ಟು ಬಹುಕಾಲ ಬೇರೆಡೆ ಕರ್ತವ್ಯದಿಂದ ಮಾನಸಿಕ/ದೈಹಿಕ ಒತ್ತಡಕ್ಕೆ ಒಳಗಾದವರಿಗೆ ವರ್ಗಾವಣೆ ದೊರೆತಲ್ಲಿ ಮನೋಸ್ಥೈರ್ಯ ಹೆಚ್ಚಲಿದೆ
  • ಸರ್ಕಾರಿ ಉದ್ಯೋಗಿಗಳಾಗಿ ಬೇರೆ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುವ ಪತಿ-ಪತ್ನಿ ಸಂಕಷ್ಟ ದೂರ
  • ಅನಾರೋಗ್ಯದಿಂದ ಬಳಲುತ್ತಿರುವ ಪಾಲಕರನ್ನು ನೋಡಿ ಕೊಳ್ಳಲಾಗಲಿಲ್ಲ ಎಂಬ ಕೊರಗಿನಿಂದ ಹೊರಬರಲು ಸಾಧ್ಯ

ಅನನುಕೂಲಗಳೇನು?

  • ಸ್ವಂತ ಜಿಲ್ಲೆಗೆ ಹೋಗಲು ಕುಟುಂಬ ಸದಸ್ಯರ ವೈದ್ಯಕೀಯ ಸಮಸ್ಯೆ ಬಗ್ಗೆ ಸುಳ್ಳು ಕಾರಣ ಕೊಡುವ ಸಾಧ್ಯತೆ
  • ಎಲ್ಲರೂ ವರ್ಗ ಕೇಳಿದರೆ ಹಾಲಿ ಘಟಕದಲ್ಲಿ ಸಿಬ್ಬಂದಿ ಕೊರತೆ
  • ವರ್ಗಾವಣೆ ಮಾಡಲು ಘಟಕದ ಮುಖ್ಯಸ್ಥರು ಲಂಚಕ್ಕೆ ಬೇಡಿಕೆ ಇಡುವ ಸಾಧ್ಯತೆ

ಷರತ್ತುಗಳು?

  • ಕಾನ್​ಸ್ಟೆಬಲ್ ಮತ್ತು ಇತರೆ ವೃಂದದ ಎಲ್ಲ ಸಿಬ್ಬಂದಿ ವರ್ಗಾವಣೆಗೆ ಕನಿಷ್ಠ 7 ವರ್ಷ ಸೇವಾವಧಿ ಪೂರ್ಣಗೊಳಿಸಿರಬೇಕು
  • ಸ್ವಂತ ಕೋರಿಕೆ ವರ್ಗಾವಣೆ ಬಯಸುವವರು ಸೇವಾ ಜ್ಯೇಷ್ಠತೆ ಬಿಟ್ಟುಕೊಡುವ ನಿಬಂಧನೆಗೆ ಒಳಪಡಬೇಕು
  • ವರ್ಗಾವಣೆಯಾದವರ ಹಿಂದಿನ ಘಟಕದಲ್ಲಿನ ಸೇವಾವಧಿ ಪರಿಗಣನೆಗೆ ಬರಲ್ಲ.
  • ಹೊಸ ಘಟಕದಲ್ಲಿ ಸೇವೆ ಶುರು ಮಾಡಿದ ದಿನದಿಂದ ಸೇವಾವಧಿ ಶುರುವಾಗುತ್ತದೆ. ಒಟ್ಟು ಸೇವಾ ಅನುಭವ ಲೆಕ್ಕಕ್ಕೆ ಸೇರುವುದಿಲ್ಲ.
  • ಪತಿ-ಪತ್ನಿ ಪ್ರಕರಣಗಳಲ್ಲಿ ಪರೀಕ್ಷಾರ್ಥ ಅವಧಿ ಪೂರೈಸಿರುವ ಮತ್ತು ರಿಕ್ತ ಹುದ್ದೆಯ ಲಭ್ಯತೆ ಆಧಾರದ ಮೇಲೆ ವರ್ಗಾವಣೆಗೆ ಅವಕಾಶ

ಪತಿ-ಪತ್ನಿ ಕೇಸಲ್ಲಿ ಸೇವಾವಧಿ ವಿನಾಯ್ತಿ: ಸ್ವಂತ ಕೋರಿಕೆ ವರ್ಗಾವಣೆಗೆ 7 ವರ್ಷ ಸೇವಾವಧಿ ನಿಗದಿಪಡಿಸಲಾಗಿದೆ. ಆದರೆ, ಪತಿ-ಪತ್ನಿ ಪ್ರಕರಣಗಳಲ್ಲಿ ಸೇವಾವಧಿಗೆ ವಿನಾಯಿತಿ ಇದೆ. ವರ್ಗಾವಣೆ ಮಾರ್ಗಸೂಚಿ ಪ್ರಕಾರ ಪತಿ-ಪತ್ನಿ ಪ್ರಕರಣಗಳಲ್ಲಿ ರಿಕ್ತ ಹುದ್ದೆಗಳಿದ್ದಲ್ಲಿ ಅವಧಿಪೂರ್ವ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.