ನ್ಯೂಸ್

ನೋಟರಿಗಳ ನೇಮಕದಲ್ಲೂ ಮೀಸಲು ಸೌಲಭ್ಯ; ವಿಧೇಯಕ ಮಂಡನೆ

ಬೆಂಗಳೂರು: ನೋಟರಿಗಳ ನೇಮಕದಲ್ಲೂ ಮೀಸಲು ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿ, ಈ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದೆ. ಕಾನೂನು ಸಚಿವರ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ‘ನೋಟರಿಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025’ನ್ನು ಮಂಡಿಸಿದರು. ರಾಜ್ಯಕ್ಕೆ ಅನ್ವಯವಾಗುವಂತೆ ನೋಟರಿಗಳ ಅಧಿನಿಯಮ, 1952 (1952ರ ಕೇಂದ್ರ ಅಧಿನಿಯಮ 53)ನ್ನು ತಿದ್ದುಪಡಿ ಮಾಡುವ ಬಿಲ್ ಇದಾಗಿದೆ.

ನೋಟರಿಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳು, ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಜಿದಾರರಿಗೆ ಮೀಸಲಾತಿ, ಮಹಿಳೆಯರು ಮತ್ತು ಅಂಗವಿಕಲರಿಗೆ ಸಮತಲ ಮೀಸಲಾತಿ ಕಲ್ಪಿಸಲು ನೋಟರಿ ಅಧಿನಿಯಮಕ್ಕೆ ತಿದ್ದುಪಡಿ ಮಾಡಲು ಸರ್ಕಾರ ಬಯಸಿದೆ. ಪಶು ಆಹಾರದ ಮೇಲೆ ನಿಗಾ. ಕಳಪೆ ಹಾಗೂ ಕಲಬೆರಕೆ ಪಶು ಆಹಾರ ಪೂರೈಸಿದರೆ ಮೂರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಐದು ಸಾವಿರ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾದ ಶಾಸನವು ರಾಜ್ಯದಲ್ಲಿ ಶೀಘ್ರವೇ ಜಾರಿಗೆ ಬರಲಿದೆ.

ಕರ್ನಾಟಕ ಪಶು ಆಹಾರ (ಉತ್ಪಾದನೆ ಮತ್ತು ಗುಣಮಟ್ಟ ನಿಯಂತ್ರಣದ ವಿನಿಮಯ) ವಿಧೇಯಕ, 2025ಕ್ಕೆ ವಿಧಾನಸಭೆ ಚರ್ಚೆಯಿಲ್ಲದೆ ಅಂಗೀಕಾರ ನೀಡಿತು. ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ತಿದ್ದುಪಡಿ ವಿಧೇಯಕದ ಅಗತ್ಯತೆ ವಿವರಿಸಿ, ರಾಜ್ಯದಲ್ಲಿ 1987ರ ಕಾಯ್ದೆಯಡಿ ಪರವಾನಗಿಗೆ ಅವಕಾಶವಿದೆ. ಕಳಪೆ ಗುಣಮಟ್ಟದ್ದಾದರೆ ದಂಡ ಅಥವಾ ಶಿಕ್ಷೆ ವಿಧಿಸಲು ಅವಕಾಶವಿಲ್ಲ. ವಾರ್ಷಿಕ 23,030 ಪಶು ಆಹಾರ ಪೂರೈಕೆಯಾಗುತ್ತದೆ. ನಿರ್ದಿಷ್ಟ ಗುಣಮಟ್ಟ, ನಿಯಮದ ಪ್ರಕಾರ ಪಶು ಆಹಾರ ಪೂರೈಕೆ, ನಿಯಂತ್ರಣ, ಮೇಲ್ವಿಚಾರಣೆ, ತಜ್ಞರ ಸಮಿತಿ ರಚನೆ, ಪರವಾನಗಿ ವ್ಯವಸ್ಥೆ ಮುಂತಾದ ಕ್ರಮಗಳಿಗೆ ಈ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಎಚ್​ಎನ್ ಪ್ರಾಧಿಕಾರ: ಹೆಸರಾಂತ ಶಿಕ್ಷಣತಜ್ಞ, ವಿಚಾರವಾದಿ ಡಾ.ಎಚ್.ಎನ್.ನರಸಿಂಹಯ್ಯ ಹೆಸರಿನಲ್ಲಿ ಪ್ರಾಧಿಕಾರ ರಚಿಸಲು ಉದ್ದೇಶಿತ ಮಸೂದೆಗೆ ವಿಧಾನಸಭೆ ಅನುಮೋದನೆ ನೀಡಿತು. ಕಾನೂನು ಸಚಿವ ಎಚ್.ಕೆ.ಪಾಟೀಲ ‘ಡಾ.ಎಚ್.ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಪ್ರಾಧಿಕಾರ ವಿಧೇಯಕ, 2025’ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದರು. ಪ್ರಾಧಿಕಾರವು ಹೊಸೂರು, ವಿದುರಾಶ್ವತ್ಥ ಮತ್ತು ಗೌರಿಬಿದನೂರು ತಾಲೂಕು ಸುತ್ತಮುತ್ತಲಿನ ಪ್ರದೇಶ ಒಳಗೊಂಡಿದೆ ಎಂದರು.

ಮೂರು ನಿರ್ಣಯ ಮಂಡನೆ

ವಿಧಾನಸಭೆಯಲ್ಲಿ ಅಂಗೀಕರಿಸಿದ್ದ ಎಸ್​ಸಿಎಸ್​ಪಿ, ಟಿಎಸ್​ಪಿ ಕೇಂದ್ರ ಕಾಯಿದೆ ಜಾರಿಗೆ ಆಗ್ರಹಿಸಿ ಮತ್ತು ವಕ್ಪ್ ಕಾಯಿದೆಗೆ ತಿದ್ದುಪಡಿ ತರುವ ಮಸೂದೆಗೆ ವಿರೋಧ ವ್ಯಕ್ತಪಡಿಸುವ ನಿರ್ಣಯಗಳನ್ನು ವಿಧಾನ ಪರಿಷತ್​ನಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಅವರು ಮಂಡಿಸಿದರು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಹೊರಡಿಸಿರುವ ಯುಜಿಸಿ ಉದ್ದೇಶಿತ ಕರಡು ನಿಯಾಮವಳಿಗಳಿಗೆ ಆಕ್ಷೇಪಿಸುವ ವಿಧೇಯಕವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಂಡನೆ ಮಾಡಿದರು. ಈ ಬಗ್ಗೆ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷದ ಸದಸ್ಯರು ಪ್ರತಿಪಾದಿಸಿದರು. ಇದಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಭಾಪತಿ ಪ್ರಕಟಿಸಿದರು.