ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸೇರಿದಂತೆ ವಿವಿಧ ವರ್ಗಗಳಿಗೆ ಮೀಸಲಾತಿ ನೀಡಬೇಕು ಎನ್ನುವ ಹೋರಾಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ ಮೀಸಲಾತಿ ಬೇಡಿಕೆ ಪರಾಮರ್ಶಿಸಿಲು ಮೂರು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿತ್ತು.
ಇಂದು ಈ ಸಮಿತಿಗೆ ಸರ್ಕಾರ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ.
ಆದೇಶದ ಪ್ರಕಾರ, ಸಮಿತಿಗೆ ಅಧ್ಯಕ್ಷರಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಸ್ ಆಡಿ, ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಕೆ ರತ್ನಪ್ರಭಾ ಹಾಗೂ ಮೈಸೂರು ಮಹಾರಾಣಿ ಕಲಾ ಕಾಲೇಜಿನ ಬಿ ವಿ ವಸಂತಕುಮಾರ್ ಅವರನ್ನು ನೇಮಿಸಲಾಗಿದೆ.
ಲಿಂಗಾಯತ ಪಂಚಮಸಾಲಿಗಳು ತಮ್ಮನ್ನು ಪ್ರವರ್ಗ 2ಎ ದಲ್ಲಿ ಸೇರಿಸಬೇಕು, ಕುರುಬರು ತಮ್ಮನ್ನು ಎಸ್ಟಿಗೆ ಸೇರಿಸಬೇಕು, ವಾಲ್ಮೀಕಿಗಳು ತಮಗೆ ಮೀಸಲು ಪ್ರಮಾಣ ಹೆಚ್ಚಿಸಬೇಕು ಹಾಗೂ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕು ಎನ್ನುವ ಹೋರಾಟ ಬೇಡಿಕೆಗಳು ಕಳೆದ ಮೂರ್ನಾಲ್ಕು ತಿಂಗಳಿಂದ ದೊಡ್ಡ ಸ್ವರೂಪ ಪಡೆದುಕೊಂಡಿರುವುದರಿಂದ, ಈ ಬೇಡಿಕೆಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ಪರಿಹರಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.