ಕೋಲಾರ: ಸಂಶೋಧನೆಯಿಂದ ಉತ್ಪನ್ನಗಳು, ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವ ಮೂಲಕ ಉದಯೋನ್ಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ನಗರ ಹೊರವಲಯದ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಂಗಳೂರು ಉತ್ತರ ವಿವಿಯಿಂದ ಹಮ್ಮಿಕೊಂಡಿದ್ದ 5ನೇ ಘಟಿಕೋತ್ಸವದಲ್ಲಿ ರ್ಯಾಂಕ್ ಗಳಿಸಿದ 46 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಮಾತನಾಡಿದರು.
ದೇಶವು ನವೋದ್ಯಮ ಪರಿಸರ ವ್ಯವಸ್ಥೆ ಬಲಪಡಿಸುವ ಮತ್ತು ಸ್ವಾವಲಂಬನೆ ಉತ್ತೇಜಿಸುವ ಮೂಲಕ ನಾವೀನ್ಯತೆ ಸಂಸತಿಯತ್ತ ಸಾಗುತ್ತಿದೆ. ಸಂಶೋಧನೆ ಮತ್ತು ನಾವೀನ್ಯತೆ ದೇಶದ ಅಭಿವೃದ್ಧಿ ಚರ್ಚೆಯಲ್ಲಿ ಪ್ರಮುಖ ವಿಷಯಗಳಾಗಿವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ&2020 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಸಂಶೋಧನೆಗೆ ಒತ್ತು ನೀಡುತ್ತದೆ ಎಂದರು.
ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆ ಪ್ರಮುಖ ಪಾತ್ರವಹಿಸುತ್ತವೆ. ಆಧುನಿಕ ಯುಗದಲ್ಲಿ, ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ವಿಶ್ವ ದರ್ಜೆಯ ಸಾಮರ್ಥ್ಯ ಅಭಿವೃದ್ಧಿಪಡಿಸುವುದು ಅಗತ್ಯ ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರ, ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ. ಭಾರತದ ಆರ್ಥಿಕತೆಯು ತ್ವರಿತಗತಿಯಲ್ಲಿ ಬೆಳೆದಿದ್ದು, ಮತ್ತಷ್ಟು ಹೆಚ್ಚು ಸಕ್ರಿಯ ಪ್ರಯತ್ನ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಉಪ ಕುಲಪತಿ ಪ್ರೊ.ನಿರಂಜನ ವಾನಳ್ಳಿ ವಾರ್ಷಿಕ ವರದಿ ವಾಚಿಸಿದರು. ವಿವಿ ರಿಜಿಸ್ಟ್ರಾರ್ ಪ್ರೊ. ಶ್ರೀಧರ್, ಕುಲಸಚಿವ (ಮೌಲ್ಯಮಾಪನ) ಡಾ.ಲೋಕನಾಥ, ವಿವಿ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.
* ಹೊಸ ಶಿಕ್ಷಣ ನೀತಿಯಲ್ಲಿ ಸ್ಥಾನಮಾನ
ದೇಶವು ಜ್ಞಾನದ ದೀಪವಾಗಿದೆ. ವೇದ, ಉಪನಿಷತ್ತು, ಆಯುರ್ವೇದ, ಯೋಗ, ವಾಸ್ತು, ತತ್ವಶಾಸ್ತ್ರ, ನ್ಯಾಯಶಾಸ್ತ್ರ್ರ, ಅಮೂಲ್ಯ ಪರಂಪರೆ. ಹೊಸ ಶಿಕ್ಷಣ ನೀತಿಯು ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತೆ ಅವುಗಳಿಗೆ ಸ್ಥಾನ ನೀಡಿದೆ. ವಿಶ್ವವಿದ್ಯಾಲಯವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜತೆಗೆ ಜ್ಞಾನ, ಸಂಶೋಧನೆ, ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಶ್ರೀಮಂತ ಸಂಪ್ರದಾಯ ಹೊಂದಿದೆ ಎಂದು ರಾಜ್ಯಪಾಲರು ಶ್ಲಾಘಿಸಿದರು.
* ಉದ್ಯೋಗಾಧಾರಿತ ಶಿಕ್ಷಣಕ್ಕೆ ಆದ್ಯತೆ
ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆ ತರಲಾಗಿದ್ದು, ಉದ್ಯೋಗಾಧಾರಿತ ಶಿಕ್ಷಣ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಉನ್ನತ ಶಿಕ್ಷಣದಲ್ಲಿ ಕ್ವಾಂಟಮ್ ಕಂಪ್ಯೂಟರ್ ಶಿಕ್ಷಣ ಅಗತ್ಯವಿದ್ದು, ಅದನ್ನೂ ಜಾರಿಗೆ ತರಲಾಗುವುದು. ಜತೆಗೆ ಕೌಶಲ ತರಬೇತಿ ನೀಡಲಾಗುವುದು. ಟಿಕೋತ್ಸವ ವಿದ್ಯಾರ್ಥಿಯ ಜೀವನದ ನಿರ್ಣಾಯ ಸಂದರ್ಭ. ಶಾಲೆ, ಪಿಯು ಮುಗಿಸಿ ಪದವಿ ಬಿಡುವ ಸಂದರ್ಭದಲ್ಲಿ ಪಾಲಕರು ಆರ್ಥಿಕ ಪರಿಸ್ಥಿತಿ ನಡುವೆಯೂ ಉನ್ನತ ಶಿಕ್ಷಣ ಕೊಡಿಸುತ್ತಾರೆ. ಅವರ ಆಸೆ ಈಡೇರಿಸಬೇಕು ಎಂದು ಸಲಹೆ ನೀಡಿದರು.
ಅಮರಾವತಿ ಸಮೀಪ ವಿವಿಯ ಕಟ್ಟಡ ನಿರ್ಮಾಣದ ಹಂತದಲ್ಲಿದ್ದು, ರಸ್ತೆ ಅಭಿವೃದ್ಧಿಗೆ 9 ಕೋಟಿ ರೂ.ಬೇಕಾಗಿದೆ. ಲೋಕೋಪಯೋಗಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಮಂಜೂರು ಮಾಡಿಸಲಾಗುವುದು. ನಗರದ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಕಾಲೇಜು ಅಭಿವೃದ್ಧಿಗೆ 60 ಕೋಟಿ ರೂ.ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. 2005ರಲ್ಲಿ ವಿಧಾನ ಸೌಧದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅವರು ಬಯಲು ಸೀಮೆ ಜಿಲ್ಲೆಯ ಕೆರೆಗಳ ಕುರಿತು ಹಾಡು ಹಾಡಿಸಿದ್ದರು. ಇದು ನನಗೆ ಈಗಲೂ ನೆನಪಿದೆ. ಪಿಚ್ಚಳ್ಳಿ ಶ್ರೀನಿವಾಸ್ ನನ್ನ ಗುರುಗಳಾಗಿದ್ದು, ಮೂವರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ಸಂತಸ ತಂದಿದೆ ಎಂದರು.
* ಬೌದ್ಧಿಕ ಶಿಕ್ಷಣಕ್ಕೆ ಆದ್ಯತೆ
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ಮಾತನಾಡಿ, ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಮಾನವೀಯತೆ ಉಳಿಸಿಕೊಳ್ಳಬೇಕು. ಶೈಕ್ಷಣಿಕ ಮಾನವೀಯತೆ ತುಂಬಬೇಕು. ಬೌದ್ಧಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಜಾಗತಿಕ ಮಟ್ಟದಲ್ಲಿ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರದ ಮಧ್ಯೆ ಮಾನವೀಯ ಸಂಬಂಧ ಕಡಿಮೆ ಆಗುತ್ತಿದ್ದು, ಇದು ಶಿಕ್ಷಣದಲ್ಲಿ ಮಾನವೀಯತೆ ಮೇಲೂ ಪರಿಣಾಮ ಬೀರುತ್ತಿದೆ. ಕಾರಣಂತರಗಳಿಂದ ಶಿಕ್ಷಣ ವಾಣೀಜ್ಯಕರಣಗೊಂಡಿದೆ. ಇದರಲ್ಲಿ ಮಾನವೀಯ ಮೌಲ್ಯಕ್ಕೆ ಜಾಗವೆಲ್ಲಿದೆ? ಕಲಿಕಾ ಪದ್ಧತಿಯಲ್ಲಿ ಮಾನವೀಯ ಮೌಲ್ಯ ಬರಬೇಕಾಗಿದ್ದು, ಈ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು.
* ಅಧಿಕಾರಿಗಳಿಗೆ ತರಾಟೆ
ಕಾರ್ಯಕ್ರಮವನ್ನು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿತ್ತು. ಆದರೆ ಸಮಯಪಾಲನೆಯಾಗದೆ ಗೊಂದಲ ಉಂಟಾಗಿತ್ತು. ಕಾರ್ಯಕ್ರಮ ನಿರ್ವಹಣೆಗೆ ಮಿನಿಟ್ ಟೂ ಮಿನಿಟ್ ವೇಳಾಪಟ್ಟಿ ತಯಾರಿಸಿಕೊಳ್ಳಲಾಗಿತ್ತು, ಪಟ್ಟಿಯಂತೆ ಕಾರ್ಯಕ್ರಮ ಪಾಲನೆಯಾಗಲಿಲ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಸಮಾಧಾನ ವ್ಯಕ್ತಪಡಿಸಿದರು.
* ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್
ಜಾನಪದ ಗಾಯಕ, ರಂಗಕರ್ಮಿ ಪಿಚ್ಚಳ್ಳಿ ಶ್ರೀನಿವಾಸ್ (ಸಂಗೀತ ಮತ್ತು ರಂಗಭೂಮಿ ಕ್ಷೇತ್ರ), ಉದ್ಯಮಿ ಹಾಲಾಡಿ ಶ್ರೀನಿವಾಸ ಶೆಟ್ಟಿ (ಸಾಮಾಜಿಕ ಸೇವಾ ಕ್ಷೇತ್ರ) ಹಾಗೂ ಹೋಟೆಲ್ ಉದ್ಯಮಿ ರಾಧಾಕೃಷ್ಣ ಅಡಿಗ (ಉದ್ಯಮ ಕ್ಷೇತ್ರ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.