ಮೂಡುಬಿದಿರೆ(ದ.ಕ.): ಬಾವಿಗೆ ಬಿದ್ದ ಒಂದು ವರ್ಷ ವಯಸ್ಸಿನ ಚಿರತೆಯನ್ನು ಮಹಿಳಾ ಪಶುವೈದ್ಯೆಯೊಬ್ಬರು ಖುದ್ದು ಬೋನಿನಲ್ಲಿ ಕುಳಿತು ಬಾವಿಗೆ ಇಳಿದು ರಕ್ಷಿಸಿದ್ದಾರೆ.
ನಿಡ್ಡೋಡಿ ಚರ್ಚ್ ಸಮೀಪದ ಫ್ಲೋರಿನ್ ಎಂಬುವರ ಮನೆಯ ಬಾವಿಗೆ ಚಿರತೆ ಶುಕ್ರವಾರ ರಾತ್ರಿ ಬಿದ್ದಿತ್ತು. ಶನಿವಾರ ಮಧ್ಯಾಹ್ನ ಗಮನಕ್ಕೆ ಬಂದು, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಚಿರತೆ ಬಾವಿಯೊಳಗಿದ್ದ ಸಣ್ಣ ಗುಹೆ ಮಾದರಿಯ ಭಾಗದಲ್ಲಿ ಅವಿತು ಕುಳಿತಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನೊಳಗೆ ಕೋಳಿಯನ್ನು ಹಾಕಿ ಬಾವಿಗೆ ಇಳಿಸಿ ಚಿರತೆಯನ್ನು ಮೇಲೆತ್ತಲು ಯತ್ನಿಸಿದರೂ ಪ್ರಯತ್ನ ವಿಫಲವಾಗಿತ್ತು.
ಬಳಿಕ ಅರಣ್ಯಾಧಿಕಾರಿಗಳು ಪಶುವೈದ್ಯರನ್ನು ಕರೆಸಿದರು. ಡಾ.ಮೇಘನಾ, ಡಾ.ಪೃಥ್ವಿ, ಡಾ.ನಫೀಸಾ ಮತ್ತು ಡಾ.ಯಶಸ್ವಿ ನಾರಾವಿ ಕಾರ್ಯಾಚರಣೆ ತಂಡದಲ್ಲಿದ್ದರು. ಅರಿವಳಿಕೆ ಮದ್ದನ್ನು ಗನ್‌ನಲ್ಲಿ ತುಂಬಿಸಿ ಅರಣ್ಯ ಇಲಾಖೆ ಸಿದ್ಧಪಡಿಸಿದ ಬೋನಿನೊಳಗೆ ಕುಳಿತುಕೊಂಡ ಡಾ.ಮೇಘನಾ, ಅವರನ್ನು ಬೋನಿನ ಸಮೇತ ಬಾವಿಗೆ ಇಳಿಸಲಾಯಿತು.
ಬಾವಿಯೊಳಗೆ ಬೋನಿನಿಂದಲೇ ಡಾ.ಮೇಘನಾ ಚಿರತೆಗೆ ಅರಿವಳಿಕೆ ಮದ್ದು ನೀಡಿ ಪ್ರಜ್ಞಾಹೀನಗೊಳಿಸಿದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗದ ಮೂಲಕ ಬಾವಿಗಿಳಿದು ಚಿರತೆಯನ್ನು ಡಾ.ಮೇಘನಾ ಇದ್ದ ಬೋನಿನೊಳಗೆ ಹಾಕಿದರು. ಬೋನನ್ನು ನಿಧಾನವಾಗಿ ಮೇಲೆತ್ತಿದ ಬಳಿಕ ಚಿರತೆಗೆ ಪ್ರಜ್ಞೆ ಬರುವ ಇಂಜೆಕ್ಷನ್ ನೀಡಲಾಯಿತು. ಆರೋಗ್ಯ ಪರೀಕ್ಷಿಸಿದ ಬಳಿಕ ಚಿರತೆಯನ್ನು ಕಾಡಿಗೆ ಬಿಡಲಾಯಿತು. ಮೇಘನಾ ಮತ್ತು ಇತರ ಪಶುವೈದ್ಯರ ಸಾಹಸಯುತ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಬೋನಿನೊಂದಿಗೆ ಬಾವಿಗೆ ಇಳಿದು ಚಿರತೆಯನ್ನು ರಕ್ಷಿಸುವುದು ಸವಾಲಿನ ಕೆಲಸ. ಬೋನು ಇಳಿಸುವ ಸಂದರ್ಭ ಲೆಕ್ಕಾಚಾರ ತಪ್ಪಿದರೆ ಚಿರತೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೂ ಡಾ.ಮೇಘನಾ ಬಾವಿಗೆ ಇಳಿಯುವ ಧೈರ್ಯ ಮಾಡಿದ್ದಾರೆ.
- ಡಾ.ಯಶಸ್ವಿ ನಾರಾವಿ, ಪಶುವೈದ್ಯ