ನ್ಯೂಸ್

ಸಚಿವ ಎಚ್.ಕೆ.ಪಾಟೀಲ್ ಪತ್ರ: ಅಕ್ರಮ ಗಣಿಗಾರಿಕೆ ತನಿಖೆಗೆ ವಿಶೇಷ ಕೋರ್ಟ್ ರಚನೆಗೆ ಮನವಿ: CM ಸಿದ್ದರಾಮಯ್ಯ

ಅಕ್ರಮ ಗಣಿಗಾರಿಕೆ ಪ್ರಕರಣಗಳು ಹಿಂದಿನ ಅವಧಿಯಲ್ಲಿ ನಡೆದಿದ್ದು, ಈ ಬಗ್ಗೆ ತ್ವರಿತ ತನಿಖೆ ನಡೆಸಲು ವಿಶೇಷ ಕೋರ್ಟ್ ರಚಿಸಿ, ಗಣಿಗಾರಿಕೆಯಲ್ಲಿರುವ ಬಾಕಿಯ ವಸೂಲಾತಿಗೆ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಲು ಪತ್ರದಲ್ಲಿ ತಿಳಿಸಿದ್ದಾರೆ ಎಂದು CM ಸಿದ್ದರಾಮಯ್ಯ ಹೇಳಿದರು.

ರಾಯಚೂರಿನಲ್ಲಿ ಸುದ್ದಿಗಾರರ ಜತೆ ಸೋಮವಾರ ಮಾತನಾಡಿದರು. ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ''ಸಚಿವ ಸಂಪುಟದಲ್ಲಿ ಸದರಿ ವಿಷಯವನ್ನು ಚರ್ಚಿಸಿ ವಿಶೇಷ ನ್ಯಾಯಾಲಯ ರಚಿಸಬೇಕೆಂಬ ಉದ್ದೇಶದಿಂದ ಸಚಿವರು ಪತ್ರ ಬರೆದಿದ್ದಾರೆ. ಅಂದಿನ ಲೋಕಾಯುಕ್ತ ಸಂತೋಷ್ ಹೆಗಡೆಯವರು ಅಕ್ರಮ ಗಣಿಗಾರಿಕೆ ಬಗ್ಗೆ ವರದಿಯನ್ನೂ ನೀಡಿದ್ದರು. ಈ ವರದಿಯ ಬಗ್ಗೆ ವಿಧಾನಸಭೆಯಲ್ಲಿ ನಾನು ಕೇಳಿದ ಪ್ರಶ್ನೆಗೆ ಸರ್ಕಾರದಿಂದ ಸಮರ್ಪಕ ಉತ್ತರ ಬಂದಿರಲಿಲ್ಲ. ಆಗ ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಯಲ್ಲಿ ಪಾದಯಾತ್ರೆ ನಡೆಸಲಾಗಿತ್ತು'' ಎಂದರು.

ಕಾಂಗ್ರೆಸ್ ಶಾಸಕ ರಾಜು ಕಾಗೇ ಯವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಪ್ರಾರಂಭವಾಗದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಅವರೊಂದಿಗೆ ಚರ್ಚಿಸಲಾಗುವುದು. ವಿಶೇಷ ಅನುದಾನವನ್ನು ಅಗತ್ಯವಿರುವ ವಿಧಾನಸಭಾ ಕ್ಷೇತ್ರಗಳಿಗೆ ನೀಡಲಾಗುತ್ತದೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ವಸತಿ ಸಚಿವರು ರಾಜಿನಾಮೆ ನೀಡಬೇಕು ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ವಸತಿ ಇಲಾಖೆಯ ವಿಷಯದ ಕುರಿತು ಚರ್ಚಿಸಲು ಶಾಸಕ ಬಿ.ಆರ್.ಪಾಟೀಲ್ ರವರು ಇದೇ 25 ರಂದು ಭೇಟಿಯಾಗುವುದಾಗಿ ತಿಳಿಸಿದ್ದಾರೆ ಎಂದರು.