ವಾಷಿಂಗ್ಟನ್: ಕರೊನಾ COVID19 ವೈರಾಣು ಸೋಂಕಿನ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಸ್ಥಾನದಿಂದ ಟೆಡ್ರೋಸ್ ಅಧನೋಮ್ ಘೆಬ್ರೆಯೆಸುಸ್ ಕೆಳಗಿಳಿಯುವ ತನಕ ಆ ಸಂಸ್ಥೆಗೆ ಅನುದಾನ ನೀಡಬಾರದು ಎಂದು ಹೌಸ್ ಫಾರಿನ್ ಅಫೇರ್ಸ್ ಕಮಿಟಿಯಲ್ಲಿರುವ 17 ರಿಪಬ್ಲಿಕನ್ನರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸಿದ್ದಾರೆ.
ಈ ಸೋಂಕು ಹರಡುವಿಕೆ ವಿಚಾರದಲ್ಲಿ ಅವರು ನಡೆದುಕೊಂಡ ರೀತಿ ಮತ್ತು ಅದನ್ನು ನಿರ್ವಹಿಸುತ್ತಿರುವ ರೀತಿ ಎರಡೂ ಸರಿ ಇಲ್ಲ. ನಮಗೆ ಡೈರೆಕ್ಟರ್ ಜನರಲ್ ಟೆಡ್ರೋಸ್ ಮೇಲಿನ ವಿಶ್ವಾಸ ಹೊರಟು ಹೋಗಿದೆ. ಜಾಗತಿಕ ಆರೋಗ್ಯ ಸಮಸ್ಯೆಗಳು ಉದ್ಭವಿಸಿದ ಸಂದರ್ಭದಲ್ಲಿ ಈ ಸಂಸ್ಥೆ ಮಹತ್ವದ ಪಾತ್ರವಹಿಸಬೇಕು. ಆದರೆ, ಈಗ ಹಾಗಾಗುತ್ತಿಲ್ಲ. ಎಚ್ಐವಿ/ಏಡ್ಸ್ ನಂತರದಲ್ಲಿ ಜಗತ್ತನ್ನು ವಿಪರೀತವಾಗಿ ಕಾಡಿದ ಈ ಭೀಕರ ಸಮಸ್ಯೆಯ ಸಂದರ್ಭದಲ್ಲೂ ಅದನ್ನು ನಿಖರವಾಗಿ ಎದುರಿಸುವಲ್ಲಿ, ಜಗತ್ತಿಗೆ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಅದು ಟೆಡ್ರೋಸ್ ನಾಯಕತ್ವದಲ್ಲಿ ಸೋತಿದೆ ಎಂದು ಅವರು ಆರೋಪಿಸಿದ್ದಾರೆ.
ಕರೊನಾ ವಿಷಯದಲ್ಲಿ ಚೀನಾದ ಬೀಜಿಂಗ್ ಹೇಳಿದ್ದನ್ನೆಲ್ಲವನ್ನೂ ಟೆಡ್ರೋಸ್ ಕಣ್ಣು ಮುಚ್ಚಿ ನಂಬಿದ್ದಾರೆ. ಈಗಲೂ ನಂಬುತ್ತಿದ್ದಾರೆ. ಥೈವಾನ್ ಈ ಮೊದಲೇ ಎಚ್ಚರಿಸಿದ್ದರೂ ಟೆಡ್ರೋಸ್ ಅದನ್ನು ನಿರ್ಲಕ್ಷಿಸಿದರು. ಸೋಂಕು ಹರಡಲು ಆರಂಭಿಸಿದ ಬಳಿಕವಷ್ಟೇ ಮಾರ್ಚ್ 11ರಂದು ಡಬ್ಲ್ಯುಎಚ್ಒ ಇದೊಂದು ಸೋಂಕು ರೋಗ ಎಂದು ಘೋಷಿಸಿತ್ತು. ಅಷ್ಟರಲ್ಲಾಗಲೇ 114 ರಾಷ್ಟ್ರಗಳಲ್ಲಿ ಸೋಂಕು ಕಾಣಿಸಿಕೊಂಡು 4,500 ಜನ ಮೃತಪಟ್ಟಾಗಿತ್ತು. ಇದಾಗಿ ಕೆಲವು ವಾರಗಳ ಬಳಿಕವಷ್ಟೇ ಟೆಡ್ರೋಸ್ ಪ್ರಯಾಣ ನಿಷೇಧಕ್ಕೆ ಸಂಬಂಧಿಸಿ ಮಾರ್ಗಸೂಚಿ ಪ್ರಕಟಿಸಿದರು. ಜಗತ್ತಿನಲ್ಲಿ ಡಬ್ಲ್ಯುಎಚ್ಒಗೆ ಇರುವ ಬೆಲೆಯನ್ನು ಅವರು ಅರ್ಥಮಾಡಿಕೊಂಡಿಲ್ಲ. ಮಾನವೀಯ ನೆಲೆಯಲ್ಲಿ ಅದು ಕೆಲಸ ಮಾಡಬೇಕು. ಇದನ್ನು ನಿರ್ವಹಿಸದ ಟೆಡ್ರೋಸ್ ಆ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ರಿಪಬ್ಲಿಕನ್ನರು ಪತ್ರದಲ್ಲಿ ಆರೋಪಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರಷ್ಟೇ ವಿಶ್ವ ಆರೋಗ್ಯ ಸಂಸ್ಥೆಗೆ ಕಳೆದ ವರ್ಷದ 400 ದಶಲಕ್ಷ ಡಾಲರ್ ಅನ್ನು ಬಾಕಿ ಉಳಿಸುವುದಾಗಿ ಘೋಷಿಸಿದ್ದರು. ಚೀನಾದಲ್ಲಿ ಉದ್ಭವಿಸಿದ ಈ ಸಮಸ್ಯೆ ಹರಡುವ ಮೊದಲೇ ಎಚ್ಚೆತ್ತುಕೊಳ್ಳದೇ ಕೆಟ್ಟದಾಗಿ ನಿರ್ವಹಿಸಿದ್ದರ ಬಗ್ಗೆ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿ, ಡಬ್ಲ್ಯುಎಚ್ಒವನ್ನು ಟೀಕಿಸಿದ್ದರು. ಜಗತ್ತಿನಾದ್ಯಂತ 1.41 ಲಕ್ಷ ಜನ ಇದುವರೆಗೆ ಮೃತಪಟ್ಟಿದ್ದು, ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿದ್ದು ಹಲವು ನಷ್ಟಗಳು ಉಂಟಾಗಿವೆ. (ಏಜೆನ್ಸೀಸ್)