ನ್ಯೂಸ್

​ಕೋರ್ಟ್​ನಲ್ಲಿ ದೋಷಾರೋಪ ಪ್ರಕ್ರಿಯೆ: ನವೆಂಬರ್ 10ಕ್ಕೆ ವಿಚಾರಣೆ ಮುಂದೂಡಿಕೆ | Renukaswamy Murder Case

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಎ2 ದರ್ಶನ್ ಮತ್ತು ಎ1 ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ದೋಷಾರೋಪ ಪ್ರಕ್ರಿಯೆ ಹಿನ್ನೆಲೆ ಕೋರ್ಟ್​ಗೆ ಹಾಜರಾದರು. ಇದೀಗ ವಿಚಾರಣೆಯನ್ನು ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯ ನ.10ಕ್ಕೆ ಮುಂದೂಡಿದೆ.

ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಇನ್ನುಳಿದ ಆರೋಪಿಗಳ ದೋಷಾರೋಪ ಪ್ರಕ್ರಿಯೆಯ ಹಿನ್ನೆಲೆ ನ್ಯಾಯಾಲಯಕ್ಕೆ 81 ದಿನಗಳ ಬಳಿಕ ಹಾಜರುಪಡಿಸಲಾಯಿತು. ದರ್ಶನ್​ ಮತ್ತು ಪವಿತ್ರಾ ಇಬ್ಬರೂ ಪ್ರತ್ಯೇಕ ವಾಹನಗಳಲ್ಲಿ ಕೋರ್ಟ್​ಗೆ ಹಾಜರಾದರು. ಎರಡೂವರೆ ತಿಂಗಳ ಬಳಿಕ ಚಾರ್ಚ್​ ಫ್ರೇಮ್​ ಹಿನ್ನೆಲೆ ಕೋರ್ಟ್​ ಮೆಟ್ಟಿಲೇರಿದ ಆರೋಪಿಗಳ ವಿಚಾರಣೆಯನ್ನು ಸದ್ಯ ನ್ಯಾಯಾಲಯ ಇದೇ ನವೆಂಬರ್ 10ಕ್ಕೆ ಮುಂದೂಡಿಕೆ ಮಾಡಿದೆ.

ಪ್ರಕರಣದ 17 ಆರೋಪಿಗಳನ್ನು ಇಂದು ಕೋರ್ಟ್​ಗೆ ಹಾಜರಾಗುವಂತೆ ನ್ಯಾಯಾಲಯ ತಿಳಿಸಿತ್ತು. ಎಲ್ಲ ಆರೋಪಿಗಳು ಹಾಜರಾದ ಬಳಿಕ ಅವರ ದೋಷಾರೋಪಗಳನ್ನು ಓದಿ, ನಂತರದಲ್ಲಿ ಆ ಕುರಿತಂತೆ ಆರೋಪಿಗಳನ್ನು ನ್ಯಾಯಾಧೀಶರು ಪ್ರಶ್ನಿಸಲಿದ್ದಾರೆ.

ದೋಷಾರೋಪ ಪ್ರಕ್ರಿಯೆ ಹೇಗೆ?

ತಮ್ಮ ಮೇಲಿರುವ ದೋಷಾರೋಪವನ್ನು ಆರೋಪಿಗಳು ನಿರಾಕರಿಸಿದರೆ, ಲಭ್ಯವಿರುವ ಸಾಕ್ಷ್ಯಗಳ ಮೂಲಕ ಕೇಸ್​ನ ವಿಚಾರಣೆ ನಡೆಯಲಿದೆ. ನ್ಯಾಯಾಧೀಶರು ದೋಷಾರೋಪ ಓದಿದ ಬಳಿಕ ಆರೋಪಿಗಳು ತಪ್ಪನ್ನು ಒಪ್ಪಿಕೊಂಡರೆ ಶಿಕ್ಷೆ ಪ್ರಕಟವಾಗುವ ಸಾಧ್ಯತೆಗಳು ಇವೆ. ಇಲ್ಲವಾದರೆ, ಟ್ರಯಲ್​ ಪ್ರಕ್ರಿಯೆ ಶುರುವಾಗಲಿದೆ.