ನ್ಯೂಸ್

ಕನ್ನಡ ಭಾವದ ನವೀಕರಣ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದೆ. ಈ ಹಿಂದಿನ ಸಮ್ಮೇಳನಗಳ ಸಂಭ್ರಮದ ಸಿಹಿನೆನಪು, ಹುರುಪು, ಉತ್ಸಾಹ ಎಲ್ಲವೂ ಕನ್ನಡದ ನಾಳೆಗಳಿಗೆ ನವಚೈತನ್ಯ ಒದಗಿಸುವಂಥವು. ಆ ನೆನಪಿನ ಬುತ್ತಿ ಹೇಗಿತ್ತು ಎಂಬ ಬಗ್ಗೆ ನಾಡಿನ ಹಲವು ಸಾಹಿತಿಗಳನ್ನು ಮಾತನಾಡಿಸಿದಾಗ ಅವರು ಒದಗಿಸಿದ ಅನುಭವಗಳ ಮಧುರಹೂರಣ ಇಲ್ಲಿದೆ.

ನಾವು ಕೇಳಿದ ಪ್ರಶ್ನೆ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು, ನುಡಿಹಬ್ಬದ ಭಾಗವಾಗುವುದೇ ಪುಳಕದ ಅನುಭವ, ಸಾರ್ಥಕತೆಯ ಕ್ಷಣ. ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡು, ಅಲ್ಲಿಂದ ಮರಳುವಾಗ ನಾಡು-ನುಡಿ ಬಗೆಗೆ ಒಂದು ವಿಶ್ವಾಸದ ಭಾವ ಆವರಿಸಿಕೊಳ್ಳುತ್ತದೆ. ಕನ್ನಡ-ಕರ್ನಾಟಕಕ್ಕಾಗಿ ಮಾಡಬೇಕಾದ ಕೆಲಸದ ಬಗ್ಗೆ ಹೊಸ ಹೊಳಹು ಮೂಡಿ, ಸಕಾರಾತ್ಮಕ ಭಾವವನ್ನು ಹೊಮ್ಮಿಸುತ್ತದೆ. ನೀವು ಹೀಗೆ ಸಾಹಿತ್ಯ ಸಮ್ಮೇಳನದಿಂದ ಮರಳುವಾಗ ಕಂಡುಕೊಂಡ ಹೊಸ ಆಶಾವಾದವೇನು?

ಅಗಾಧ ಆಕರ್ಷಣೆ...

ಸಾಹಿತ್ಯ ಸಮ್ಮೇಳನಕ್ಕೆ ನಾನು ಕಳೆದ ಹದಿನೆಂಟು ವರ್ಷಗಳಿಂದ ಹೋಗುತ್ತಿರುವೆ. ‘ಛಂದ’ ಪುಸ್ತಕದ ಮಳಿಗೆಯನ್ನು ಹಾಕಿ, ಪುಸ್ತಕಗಳನ್ನು ಮೂರೂ ದಿನವೂ ನಿಂತು ಮಾರಿದ್ದೇನೆ. ಈ ಬಾರಿ ಮಂಡ್ಯ ಸಮ್ಮೇಳನಕ್ಕೆ ಹೋಗಲು ತಯಾರಿ ನಡೆಸಿದ್ದೇನೆ. ಸಮ್ಮೇಳನದಲ್ಲಿ ನನಗೆ ಪ್ರತಿ ಬಾರಿ ಅರಿವಿಗೆ ಬರುವುದು ಕನ್ನಡದ ಅಗಾಧತೆ, ಅನನ್ಯತೆ. ದೇಶ ಮತ್ತು ವಿದೇಶಗಳಲ್ಲಿ ಹಲವಾರು ಸಾಹಿತ್ಯ ಉತ್ಸವಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಆಕರ್ಷಿಸುವಷ್ಟು ಜನರನ್ನು ಬೇರೆ ಎಲ್ಲಿಯೂ ಕಂಡಿಲ್ಲ. ದಶಕಗಳಿಂದ ನಮ್ಮ ಹಿರಿಯರು ಕನ್ನಡ ಸಮ್ಮೇಳನ ಕುರಿತ ಈ ಜನಪ್ರೇಮವನ್ನು ಶ್ರದ್ಧೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. ಅದು ಕನ್ನಡದ ಆಸ್ತಿ. ಇತರ ಸಾಹಿತ್ಯ ಉತ್ಸವಗಳಲ್ಲಿ ಒಂದೆರಡು ವರ್ಷ ಭಾಗವಹಿಸಿದರೆ ಸಾಕು, ಏಕತಾನತೆಯಿಂದ ಬೇಸರ ಹುಟ್ಟಿಸುತ್ತವೆ.

ಅದೇ ಜನ, ಅದೇ ಸ್ಥಳ, ಅದೇ ಊಟ -ಹೀಗೆ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನದ ವಿಷಯದಲ್ಲಿ ಹಾಗಾಗುವುದಿಲ್ಲ. ಪ್ರತಿ ಬಾರಿ ನಾಡಿನ ಬೇರೆ ಬೇರೆ ಭಾಗದಲ್ಲಿ ಈ ಉತ್ಸವ ಹಮ್ಮಿಕೊಳ್ಳುವುದರಿಂದ ಜನರೂ ಬೇರೆ, ಸ್ಥಳವೂ ಬೇರೆ, ಕನ್ನಡ ಮತ್ತು ಊಟದ ರುಚಿಯೂ ಬೇರೆ. ಇದೊಂದು ರೀತಿಯಲ್ಲಿ ಹೊಸತನ್ನು ಬೆರಗಿನಿಂದ ನೋಡುವ, ನಿರೀಕ್ಷಿಸುವ ಭಾವವನ್ನು ನಮ್ಮಲ್ಲಿ ಉದ್ದೀಪಿಸುತ್ತದೆ. ಆದರೆ ಒಂದು ಕೊರತೆಯಂತೂ ಪ್ರತಿ ಬಾರಿಯೂ ಗೋಚರಿಸುತ್ತದೆ. ಬೇರೆ ಸಾಹಿತ್ಯ ಉತ್ಸವಗಳಿಗೆ ಹೋದಾಗ ಹಲವು ಹೊಸ ಪುಸ್ತಕಗಳನ್ನು ಗುರುತು ಹಾಕಿಕೊಂಡು, ಹಲವು ಹೊಸ ಲೇಖಕರನ್ನು ಪರಿಚಯಿಸಿಕೊಂಡು, ಸಾಹಿತ್ಯದ ಹೊಸ ಸಂವೇದನೆಗಳನ್ನು ಅರ್ಥ ಮಾಡಿಕೊಂಡು ಬರುತ್ತೇನೆ. ಆದರೆ ನಮ್ಮ ಕ.ಸಾ.ಸ. ದಲ್ಲಿ ಪುಸ್ತಕಗಳ ಕುರಿತು ಚರ್ಚೆ ಅಷ್ಟಾಗಿ ಇರುವುದಿಲ್ಲ. ಅಲ್ಲಿ ಸಾಮಾಜಿಕ ಸಂಗತಿಗಳ ಚರ್ಚೆಗೆ ಎಲ್ಲ ಗೋಷ್ಠಿಗಳು ಮೀಸಲಾಗಿ, ಸಾಹಿತ್ಯವು ಹಿನ್ನೆಲೆಯಲ್ಲಿ ಉಳಿಯುತ್ತದೆ. ನೂರಾರು ಪುಸ್ತಕ ಮಳಿಗೆಗಳು ಇರುತ್ತಾವಾದ್ದರಿಂದ ನಾನೇ ವೈಯಕ್ತಿಕ ಆಸಕ್ತಿಯಿಂದ ಕನ್ನಡದ ಹೊಸಪೈರನ್ನು ಕಣ್ಣಲ್ಲಿ ತುಂಬಿಸಿಕೊಂಡು ಬರುತ್ತೇನೆ.

| ವಸುಧೇಂದ್ರ ಕಥೆಗಾರರು, ಪ್ರಕಾಶಕರು

ಜನಜಾತ್ರೆಯಲ್ಲ ಅಕ್ಷರ ಜಾತ್ರೆ

ಸಾಹಿತ್ಯ ಸಮ್ಮೇಳನ, ಜಾತ್ರೆ, ಕುಂಭಮೇಳ, ಧಾರ್ವಿುಕ, ಸಾಂಸ್ಕೃತಿಕ ಮಹೋತ್ಸವ ಇವೆಲ್ಲವೂ ನಮ್ಮ ಶ್ರೇಷ್ಠ ಪರಂಪರೆಯ ಪ್ರತೀಕವಾಗಿವೆ. ಏಕತಾನತೆಯಿಂದ ಮುದುಡಿದ ಮನಸ್ಸಿಗೆ ಮುದ ನೀಡುವ, ಹೊಸ ಚೈತನ್ಯ, ಹುಮ್ಮಸ್ಸು ನೀಡಿ, ನಾವು ನಾಡು ನುಡಿಯ ಸೇವೆಗೆ ಮುನ್ನುಗ್ಗುವ ಪ್ರೇರಣೆಯನ್ನು ನುಡಿಹಬ್ಬ ನೀಡುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ಅನೇಕಜನ ಸಾಹಿತಿ ಮಿತ್ರರನ್ನೂ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮಾದರಿಯಾಗಿರುವ ಸಾಧಕರನ್ನೂ ಕಾಣುತ್ತೇವೆ. ನಾಡ ನುಡಿಹಬ್ಬದಲ್ಲಿ ಕನ್ನಡದ ವಿರಾಟ್ ಸ್ವರೂಪ ಕಣ್ಣಿಗೆ ಕಟ್ಟುತ್ತದೆ.

‘ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂಬ ಸಂಭ್ರಮ-ಸಂತೋಷ- ರೋಮಾಂಚನ- ಅನುಭವಿಸುತ್ತ ಭಾವಪರವಶರಾಗಿ ಮೈಮರೆಯುತ್ತೇವೆ. ಎಲ್ಲ ಮುಗಿದು, ವಿದಾಯ ಹೇಳಿ ಹೊರಡುವಾಗ ಮಾತ್ರ ಏನೋ ಕಳೆದುಕೊಂಡ, ಖಾಲಿ ಖಾಲಿ ಆದ ಅನುಭವ ಉಂಟಾಗುತ್ತದೆ. ಮದುವೆ ಮನೆ ಖಾಲಿಯಾದಂತೆ ಮಹೋತ್ಸವ ಸಭಾಂಗಣ ಅವಶೇಷಗಳ ಬಸದಿಯಂತೆ ಮನಸ್ಸನ್ನು ಕೊಂಚ ವ್ಯಾಕುಲಗೊಳಿಸಿದರೂ ಕನ್ನಡದ ಬಗ್ಗೆ ಕೆಲಸಮಾಡಲು, ಬರೆಯಲು, ಓದಲು ಹುಮ್ಮಸ್ಸು ತುಂಬುತ್ತದೆ. ನಾವು ಓದಿದ್ದು ಎಷ್ಟು ಕಡಿಮೆ, ಎನ್ನುವ ವಾಸ್ತವ ದರ್ಶನ ಮಾಡಿಸಿ, ಇನ್ನಷ್ಟು ಓದಲು ಪ್ರೇರೇಪಿಸುತ್ತದೆ.

ಒಂದಿಷ್ಟು ಉತ್ತಮ ಕೃತಿಗಳನ್ನು ಖರೀದಿಸಿ ಬಸ್ಸಿನಲ್ಲಿ ಒಯ್ಯಲು ಕಷ್ಟಪಡುತ್ತ ಮನೆಗೆ ಹಿಂದಿರುಗುತ್ತೇವೆ. ಉತ್ತಮ ಪ್ರೇರಣೆ, ಹೊಸ ಅನುಭವ-ಅನುಭೂತಿ, ಕನ್ನಡ ಮನಸ್ಸುಗಳ ಮಿಲನ ಇದೆಲ್ಲವೂ ಸಮ್ಮೇಳನ ಒದಗಿಸಿಕೊಡುವ ಅವಿಸ್ಮರಣೀಯ ಅನುಭವಗಳು. ಇಂತಹ ಕನ್ನಡ ಜಾತ್ರೆ ಆಗುತ್ತಲೇ ಇರಬೇಕು. ‘ಬಾರಿಸು ಕನ್ನಡ ಡಿಂಡಿಮವ... ಸತ್ತಂತಿಹರನು ಬಡಿದೆಚ್ಚರಿಸು...’ ಎಂಬ ಕುವೆಂಪು ವಾಣಿ ಸದಾ ಕಿವಿಯಲ್ಲಿ ಅನುರಣಿಸುತ್ತಿರಬೇಕು.

| ವನರಾಗ ಶರ್ಮಾ ಸಾಹಿತಿ

ಸಾರ್ಥಕ ನೆನಪುಗಳು

ಖಂಡಿತವಾಗಿಯೂ ಕನ್ನಡ ಸಾಹಿತ್ಯ ಸಮ್ಮೇಳನಗಳು ನಾಡು ನುಡಿಯ ಹಿರಿಮೆಗೆ ಹೆಬ್ಬಾಗಿಲನ್ನು ತೆರೆಯುತ್ತವೆ. ನಮ್ಮ ಪ್ರಾಚೀನ ಪರಂಪರೆ, ಪ್ರೇರಣೆಗೆ ದಾರಿಯಾಗಿ ಸಾಮರಸ್ಯದ ಬದುಕಿಗೆ ಒಂದು ರಹದಾರಿಯಾಗುತ್ತದೆ. ಕನ್ನಡ ಭಾಷೆಯಲ್ಲಿನ ಹಳಮೆ ಹೊಸ ಬದುಕಿಗೆ ಚಿಮ್ಮುಹಲಗೆಯಾಗುತ್ತದೆ. ಪರಸ್ಪರ ಭೇಟಿ, ಕೊಡುಕೊಳ್ಳುವಿಕೆಯಿಂದಾಗಿ ಆತ್ಮೀಯತೆ ಏಕೀಭಾವಕ್ಕೆ ನಾಂದಿಯಾಗುತ್ತದೆ. ಇದು ನಿಜಕ್ಕೂ ಸಾರ್ಥಕತೆಯ ಗಳಿಗೆ. ಮೂರು ದಿನದ ಸಂಭ್ರಮದ ಸಮ್ಮೇಳನಕ್ಕೆ ಜಾತ್ರೆ ಎಂದು ಕರೆಯುತ್ತಾರೆ.

ಕನ್ನಡ ನುಡಿ ತಾಯಿಯ ಜಾತ್ರೆಯಲ್ಲಿ ತೇರಿನ ಮೆರವಣಿಗೆಯಿಂದ ನಾವೆಲ್ಲರೂ ಒಂದೆಂಬ ಭಾವ ಮೂಡಿ ಇಲ್ಲಿ ನೆಲೆಸಿರುವ ಪರಭಾಷಿಕರೂ ಪ್ರಭಾವಿತರಾಗಿ ನಮ್ಮೊಡನೆ ಪ್ರಗತಿಗಾಗಿ ಹೆಜ್ಜೆ ಹಾಕುವುದರಲ್ಲಿ ಸಂಶಯವಿಲ್ಲ. ಇದು ಅನವಶ್ಯಕ ಗುಲ್ಲುಗುಮಾನಿಗಳನ್ನು ತೊಡೆದು ಹಾಕುತ್ತದೆ. ಕೇವಲ ರಾಜ್ಯೋತ್ಸವ, ಸಮ್ಮೇಳನಗಳಲ್ಲಿನ ಆವೇಶಭರಿತ ಘೊಷಣೆಗಳು, ಕೂಗು ಕೆಲಸ ಮಾಡಲಾರವು. ಜನರೊಡನೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಸಮರ್ಪಣೆ, ಕಾರ್ಯಕ್ಷಮತೆಯಿಂದ ಕನ್ನಡ ಭಾಷೆಯ, ಕನ್ನಡಿಗರ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಮ್ಮೇಳನಗಳು ತೋರಿಸಿಕೊಟ್ಟಿವೆ. ಸಾಹಿತ್ಯ ಸಮ್ಮೇಳನದಿಂದ ಮರಳುವಾಗ ಒಂದು ನಾಡು ನುಡಿ ಬಗೆಗೆ ಹೊಸಭಾವ ಖಂಡಿತ ಮೂಡುತ್ತದೆ. ನುಡಿಗೊಂದು ಭದ್ರತೆ ಬಂದರೆ ನೆಲ ಜಲವೂ ಜನಸಂಪದವೂ ಸುರಕ್ಷಿತ. ಹಳೆಯ ಹೊಸ ತಲೆಮಾರಿನ ಕೊಂಡಿಯಾಗಿ ಪ್ರಾಚೀನ ಭವ್ಯ ಪರಂಪರೆಯನ್ನು ನಿಜವಾದ ವಾರಸುದಾರರ ಕೈಗೊಪ್ಪಿಸುವ ಉತ್ತರದಾಯಿತ್ವವನ್ನು ನಿಭಾಯಿಸಿದ ಸಾರ್ಥಕತೆ ಆಗುತ್ತದೆ.

| ಡಿ.ಎನ್.ಅಕ್ಕಿ, ಗೋಗಿ ಹಿರಿಯ ಸಂಶೋಧಕರು, ಸಾಹಿತಿ

ಬದುಕಿನ ಬಗ್ಗೆ ವಿನಮ್ರ ಭಾವ

ಒಂದು ಊರಿಂದ ಮತ್ತೊಂದು ಊರಿಗೆ, ಒಂದು ಏಕತಾನತೆಯಿಂದ ಮತ್ತೊಂದು ಜಾತ್ರೆಗೆ, ದಿನಚರಿಯಿಂದ ಮನಚರಿಗೆ, ನಾಲ್ಕು ಗೋಡೆಗಳಿಂದ ಬಯಲಿಗೆ ತಲುಪುವುದು ಎಂದಿದ್ದರೂ ತಾಜಾ ಅನುಭವ. ಅದರಲ್ಲೂ ಸಾಹಿತ್ಯದ ಪರಿಸರ ಇನ್ನೂ ವಿಶೇಷ. ಸಾಹಿತಿಗಳ ಒಡನಾಟ, ಹಿರಿಯರ ಅನುಭವದ ಮಾತು, ಸಮಕಾಲೀನರ ಹೊಸ ಸಾಹಸ, ಕಿರಿಯರ ಉತ್ಸಾಹದ ಪ್ರಯೋಗ, ಮರಕ್ಕಿಂತ ಮರ ಹಿರಿದು ಎನ್ನುವಂತೆ ಇದಿರಾಗುವ ಪ್ರತಿಭೆಗಳು, ಆತ್ಮೀಯರ ಮಾತು, ಆಗುವ ಹೊಸ ಪರಿಚಯ ಎಲ್ಲವೂ ಕಿಲುಬುಗಟ್ಟಿದ ಹೃದಯಕ್ಕೆ ಕಲಾಯಿ ಹಾಕಿಸಿದ ಹಾಗೆ. ಭಾಗವಹಿಸಿದ ಕವಿಗೋಷ್ಠಿ, ಕೇಳಿಸಿಕೊಂಡ ವಿಚಾರಗೋಷ್ಠಿ ಅಲ್ಲಿಂದ ಬಂದಮೇಲೆ ನೆನಪಿನ ಪುಟಗಳಲ್ಲಿ ದಾಖಲಾಗುವ ಹಾಳೆಗಳು.

ಗಂಧದವರೊಡನೆ ಗುದ್ದಾಡಿದ್ರೂ ತೊಂದರೆ ಇಲ್ಲ. ಪರಿಮಳ ಮುಫತ್ತಿನಲ್ಲಿ ಮೈಯಿಗೆ ಆತುಕೊಳ್ಳುತ್ತದೆ ಎನ್ನುವ ಮಾತಿದೆ. ಕನ್ನಡದ ಅತಿದೊಡ್ಡ ಅಕ್ಷರಹಬ್ಬದಲ್ಲಿ ಭಾಗವಹಿಸಿ ಹಿಂದಿರುಗುವಾಗ ಬಹುಷಃ ಪ್ರತಿಯೊಬ್ಬರದ್ದೂ ಇದೇ ಭಾವ. ಕೃಷಿಕುಟುಂಬದಿಂದ ಬಂದಂತಹ ನನಗೆ ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುವುದು ಭಾವವನ್ನು ನವೀಕರಿಸಿಕೊಳ್ಳುವ ಬಗೆ. ಮುಖ್ಯವಾಹಿನಿಯಲ್ಲಿ ಬರೆಯಲು ಆರಂಭಿಸಿ ಎಂಟುವರ್ಷ ತುಂಬಿದೆ. ಧಾರವಾಡ ಮತ್ತು ಹಾವೇರಿ ಕವಿಗೋಷ್ಠಿ ಕೊಟ್ಟಿರುವ ಸವಿ ನೆನಪುಗಳು ಕೊನೆಯವರೆಗೂ ಉಳಿಯುತ್ತವೆ. ತಾಯಿನುಡಿಯ ಬಗ್ಗೆ ಮತ್ತಷ್ಟು ಅಭಿಮಾನ...

ಪ್ರತಿಭೆಗಳ ಮಹಾಸಂಗಮವನ್ನು ನೋಡುವಾಗ ಬರೆದಿರುವುದು ಸ್ವಲ್ಪ, ಬರೆಯಲಿಕ್ಕಿರುವುದು ಅಗಾಧ ಎನ್ನುವ ಜ್ಞಾನೋದಯ. ಜೊತೆಜೊತೆಗೇ ಅಕ್ಷರಲೋಕ ಗುರುತಿಸುವಂತಹ ಸಣ್ಣದ್ದನ್ನಾದರೂ ಬರೆದಿರುವುದಕ್ಕೆ ಹೆಮ್ಮೆ. ಬದುಕಿನ ಕುರಿತು ಮತ್ತಷ್ಟು ವಿನಮ್ರಭಾವ. ಪ್ರತಿಸಾಹಿತ್ಯ ಸಮ್ಮೇಳನವೂ ಅಕ್ಷರ ಪ್ರಿಯರಿಗೆ ಪೊರೆ ಕಳಚಿಕೊಳ್ಳುವ ಒಂದು ಅಪರೂಪದ ಅವಕಾಶ. ಹೊಸತಾಗಿ ಯೋಚಿಸಲು ಸಿಗುವ ಮತ್ತೊಂದು ಸೂರ್ಯೋದಯ.

| ನಂದಿನಿ ಹೆದ್ದುರ್ಗ ಕವಿಯಿತ್ರಿ

ಸಾಹಿತ್ಯಾಸಕ್ತರ ಸಮಾಗಮ

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಕರೆ ಬಂದಾಗಲೆಲ್ಲ ನನಗೆ ಸಂತೋಷವೆನಿಸುತ್ತದೆ. ಏಕೆಂದರೆ ಇಂದಿಗೂ ಕನ್ನಡಿಗರು ಅದೊಂದು ಪ್ರತಿಷ್ಠೆಯ ಸಂಗತಿ ಎಂದು ಭಾವಿಸುತ್ತಾರೆ. ನನ್ನ ಬಂಧುಗಳು ಪತ್ರಿಕೆಯಲ್ಲಿ ಸಮ್ಮೇಳನದ ಸುದ್ದಿ ಓದಿದಾಗ ‘ನಿಮಗೆ ಆಹ್ವಾನವಿದೆಯೆ?’ ಎಂದು ಕೇಳುತ್ತಾರೆ. ‘ಇದೆ’ ಎಂದರೆ ಮೆಚ್ಚುಗೆಯ ನೋಟ ಬೀರುತ್ತಾರೆ. ಇಲ್ಲವೆಂದರೆ ‘ಹಾಗಾದರೆ ನೀನು ದೊಡ್ಡ ಸಾಹಿತಿಯಲ್ಲ’ ಎನ್ನುವಂತಹ ಭಾವ ಅವರ ಮುಖದಲ್ಲಿ ಮೂಡುತ್ತದೆ. ಕಳೆದ ವರ್ಷ ಕರೆದವರನ್ನು ಈ ವರ್ಷ ಪುನಃ ಕರೆಯುವುದಿಲ್ಲ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಎಲ್ಲ ಸಮ್ಮೇಳನಗಳಲ್ಲೂ ಅತಿಥಿಗಳಿಗೆ ಮಾಡುವ ಊಟ, ವಸತಿ ವ್ಯವಸ್ಥೆ ಒಂದೇ ರೀತಿ ಇರುವುದಿಲ್ಲ. ಗಂಗಾವತಿಯಲ್ಲಿ ನಡೆದ ಸಮ್ಮೇಳನದ ಕವಿಗೋಷ್ಠಿಗೆ ಹೋಗಿದ್ದಾಗ ಉಳಿದುಕೊಳ್ಳಲು ಒಂದು ದವಾಖಾನೆಯಲ್ಲಿ ವ್ಯವಸ್ಥೆ ಮಾಡಿದ್ದರು. ಆದರೂ ಸಮ್ಮೇಳನದಲ್ಲಿ ಸಾಹಿತ್ಯಾಭಿಮಾನಿಗಳು ನನ್ನನ್ನು ಗುರುತಿಸಿ ಮಾತನಾಡಿಸಿದಾಗ, ಹಸ್ತಾಕ್ಷರ, ಫೋಟೋ ತೆಗೆದುಕೊಂಡಾಗ, ನನಗೇ ನೆನಪಿಲ್ಲದ ನನ್ನ ಯಾವುದೊ ಕವನದ ಸಾಲುಗಳನ್ನು ಹೇಳಿದಾಗ ಸಮ್ಮೇಳನದಲ್ಲಿ ಭಾಗವಹಿಸಿದ್ದು ಸಾರ್ಥಕವಾಯಿತು ಅನ್ನಿಸುತ್ತದೆ.

ಅಂಥವರಿಗಾಗಿ ಇನ್ನಷ್ಟು ಬರೆಯಬೇಕು ಎಂಬ ಉತ್ಸಾಹ ಮೂಡುತ್ತದೆ. ಹಾಸನದಲ್ಲಿ 2006ರಲ್ಲಿ ನಡೆದ ಸಮ್ಮೇಳನವನ್ನು ಎಂದಿಗೂ ಮರೆಯಲಾರೆ. ಏಕೆಂದರೆ ಅಲ್ಲಿ ಪರಿಷತ್ತಿನ ಇತಿಹಾಸದಲ್ಲೆ ಮೊದಲ ಬಾರಿಗೆ ಹನಿಗವನಕ್ಕೆ ಪ್ರತ್ಯೇಕ ಕವಿಗೋಷ್ಠಿ ಏರ್ಪಡಿಸಲಾಗಿತ್ತು ಮತ್ತು ಅದರ ಅಧ್ಯಕ್ಷತೆಯನ್ನು ವಹಿಸುವ ಗೌರವ ನನಗೆ ದೊರಕಿತ್ತು. ಅಧ್ಯಕ್ಷ ಭಾಷಣದಲ್ಲಿ ನಾನು ಆಗ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಾ.ಶಿ.ಮರುಳಯ್ಯನವರಿಗೆ ಅತ್ಯುತ್ತಮ ಹನಿಗವನಗಳ anthology ಪ್ರಕಟಿಸುವಂತೆ ಸಲಹೆ ನೀಡಿದ್ದೆ. ಅವರು ಅದಕ್ಕೆ ಒಪ್ಪಿಗೆ ನೀಡಿ ನುಡಿದಂತೆ ನಡೆದಿದ್ದರು. ನಾನು ಸಂಪಾದಿಸಿದ ‘ಸೂಜಿಮಲ್ಲಿಗೆ’ ಎಂಬ ಹನಿಗವನಗಳ anthologyಯನ್ನು ಅವರ ಅವಧಿಯಲ್ಲೇ ಪ್ರಕಟಿಸಿದರು. ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ಸಮಾಗಮ ಸದಾ ಸ್ಮರಣೀಯವಾಗಿರುತ್ತದೆ ಎನ್ನುವುದು ನನ್ನ ಅನುಭವ.

| ಎಚ್.ಡುಂಡಿರಾಜ್, ಖ್ಯಾತ ಕವಿ