ನವದೆಹಲಿ: ಕೋವಿಡ್-19 ಕಾಯಿಲೆಯನ್ನು ವ್ಯಾಪಕವಾಗಿ ಹರಡುತ್ತಿರುವವರನ್ನು ಅಥವಾ ಅದಕ್ಕೆ ಕಾರಣವಾಗುವ ಅಂಶಗಳನ್ನು ಸೂಪರ್ಸ್ಪ್ರೆಡರ್ಗಳೆಂದು ಕರೆಯಲಾಗುತ್ತದೆ. ಇಲ್ಲಿವರೆಗಿನ ಸೂಪರ್ಸ್ಪ್ರೆಡರ್ಗಳ ಇತಿಹಾಸ ಗಮನಿಸಿದರೆ, ಧಾರ್ಮಿಕ ಸಭೆಗಳೊಂದಿಗೆ ಇವು ಹೆಚ್ಚು ನಂಟು ಹೊಂದಿರುವುದು ಗೊತ್ತಾಗುತ್ತದೆ. ಅದರಲ್ಲೂ ತಬ್ಲಿಘಿ ಜಮಾತ್ ಭಾರತವನ್ನು ಮಾತ್ರವಲ್ಲ, ಮಲೇಷ್ಯಾವನ್ನು ಕಾಡಿದೆ.
ಕರೊನಾದಿಂದ ಸಂಕಷ್ಟಕ್ಕೀಡಾಗಿರುವ ದೇಶದಲ್ಲಿ ತಬ್ಲಿಘಿ ಜಮಾತ್ ಎಂದರೆ ಎಲ್ಲರೂ ಬೆಚ್ಚಿ ಬೀಳುವಂತಾಗಿದೆ. ಕಾರಣ, ದೇಶದಲ್ಲಿ 1,500ಕ್ಕೂ ಹೆಚ್ಚು ಜನರು ಜಮಾತ್ನಲ್ಲಿ ಪಾಲ್ಗೊಂಡ ಕಾರಣಕ್ಕೆ ಅಥವಾ ಇಲ್ಲಿ ಪಾಲ್ಗೊಂಡವರ ಸಂಪರ್ಕಕ್ಕೆ ಬಂದ ಕಾರಣಕ್ಕೆ ಕೋವಿಡ್-19 ಕಾಯಿಲೆ ಪೀಡಿತರಾಗಿದ್ದಾರೆ. ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಒಂದೂವರೆ ಸಾವಿರಕ್ಕೂ ಅಧಿಕ ಜನರು ಸೇರಿ 9,000ಕ್ಕೂ ಅಧಿಕ ಜನರು ಇಲ್ಲಿನ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಕೆಲವರನ್ನು ಹೊರತುಪಡಿಸಿದರೆ, ಉಳಿದವರನ್ನೆಲ್ಲ ಕ್ವಾರಂಟೈನ್ ಅಥವಾ ಐಸೋಲೇಷನ್ ವಾರ್ಡ್ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾರತ ಮಾತ್ರವಲ್ಲ, ಮಲೇಷ್ಯಾದಲ್ಲೂ ಕೂಡ ತಬ್ಲಿಘಿ ಜಮಾತ್ ನಡೆಸಿತ್ತು. ಇಲ್ಲಿನ ಸಭೆಯಲ್ಲಿ 1,500 ವಿದೇಶಿಯರು ಸೇರಿ 16,000ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಮಾ.18ರವರೆಗೆ ಮಲೇಷ್ಯಾದಲ್ಲಿ ಒಟ್ಟು ವರದಿಯಾದ 673 ಪ್ರಕರಣಗಳ ಪೈಕಿ ಶೇ.15ಕ್ಕೂ ಅಧಿಕ ಪ್ರಕರಣಗಳು ಇಲ್ಲಿಂದಲೇ ವರದಿಯಾಗಿದ್ದವು.
ಇನ್ನು, ದಕ್ಷಿಣ ಕೊರಿಯಾದಲ್ಲಿ 60 ವರ್ಷದ ಮಹಿಳೆ ಮಾಡಿದ ಅನಾಹುತ ಅಂತಿಂಥದ್ದಲ್ಲ. ಈಕೆಯಿಂದ ಬರೋಬ್ಬರಿ 1,160 ಜನರಿಗೆ ಸೋಂಕು ಕಾಣಿಸಿಕೊಳ್ಳುವಂತಾಯಿತು. ದೇಶದಲ್ಲಿ 50ಕ್ಕೂ ಕಡಿಮೆಯಿದ್ದ ಪ್ರಕರಣಗಳು 10 ದಿನದಲ್ಲೇ ಈಕೆಯ ಕಾರಣದಿಂದಾಗಿ 2000ಕ್ಕೆ ತಲುಪುವಂತಾಯಿತು. ವೈದ್ಯರ ಸಲಹೆಯನ್ನು ಧಿಕ್ಕರಿಸಿ ಈ ಮಹಿಳೆ ದೇಶಾದ್ಯಂತ ಸಂಚರಿಸಿ ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಂಡಿದ್ದಳು.
ಸಿಖ್ ಧರ್ಮಗುರುವೊಬ್ಬರಿಂದಾಗಿ ಪಂಜಾಬ್ನಲ್ಲಿ 40,000ಕ್ಕೂ ಹೆಚ್ಚು ಜನರು ಕ್ವಾರಂಟೈನ್ನಲ್ಲಿ ಇರುವಂತಾಗಿದೆ. ಜರ್ಮನಿಯಿಂದ ಇಟಲಿ ಮೂಲಕ ಭಾರತಕ್ಕೆ ಆಗಮಿಸಿದ 70 ವರ್ಷದ ಸಿಖ್ ಧರ್ಮಗುರುವಿಗೆ ಗೃಹ ಬಂಧನದಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೂ ಮಾರ್ಚ್ 10-12ರ ನಡುವೆ ಹಲವು ಧಾರ್ಮಿಕ ಸಮಾರಂಭಗಳಲ್ಲಿ ಇವರು ಭಾಗಿಯಾಗಿದ್ದರು. ಬಳಿಕ ಮಾರ್ಚ್ 18ರಂದು ಕೋವಿಡ್ ಕಾಯಿಲೆಯಿಂದ ಮೃತ ಪಟ್ಟಿದ್ದಾರೆ. ಇವರ ಸಂಪರ್ಕದಲ್ಲಿ ಇದ್ದವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ. ನಿಕಟ ಸಂಪರ್ಕದಲ್ಲಿದ್ದವರಿಗೆ ಸೋಂಕು ಕಾಣಿಸಿಕೊಂಡಿದೆ.
ಅಂತೆಯೇ, ಉತ್ತರ ಫ್ರಾನ್ಸ್ನ ಹಳ್ಳಿಯೊಂದರ ಇವಾಂಜಿಲಿಕಲ್ ಚರ್ಚ್ನಲ್ಲಿ ನಡೆದ ಧಾರ್ಮಿಕ ಸಭೆ ಇಡೀ ದೇಶದಲ್ಲಿ ಕರೊನಾ ವ್ಯಾಪಿಸಲು ಕಾರಣವಾಯಿತು. ಆದರೆ, ಸೂಪರ್ ಸ್ಪ್ರೆಡರ್ ಎಂದು ಗುರುತಿಸಲಾಗುವ ಎಲ್ಲ ಪ್ರಕರಣಗಳು ಧಾರ್ಮಿಕ ಸಭೆಗಳೊಂದಿಗೆ ತಳಕು ಹಾಕಿಕೊಂಡಿಲ್ಲ.
ದುಬೈಯಿಂದ ಕಾಸರಗೋಡಿಗೆ ವ್ಯಕ್ತಿಯೊಬ್ಬ ತನ್ನ ವಿದೇಶ ಪ್ರಯಾಣದ ಮಾಹಿತಿ ಮುಚ್ಚಿಟ್ಟು ಮದುವೆಯೊಂದರಲ್ಲಿ ಭಾಗವಹಿಸಿದ್ದ. ಇದರಿಂದ ಹತ್ತಕ್ಕೂ ಹೆಚ್ಚು ಜನರಲ್ಲಿ ಸೋಂಕು ವ್ಯಾಪಿಸಿ, 600ಕ್ಕೂ ಹೆಚ್ಚುಜನರು ಗೃಹಬಂಧನದಲ್ಲಿ ಇರಬೇಕಾಯಿತು. ಜೈಪುರದ ರಾಮ್ಗಂಜ್ ಪ್ರದೇಶದ ವ್ಯಕ್ತಿ ಒಮನ್ನಿಂದ ಬಂದು ಗೃಹ ಬಂಧನದಲ್ಲಿರದ ಕಾರಣ 100ಕ್ಕೂ ಹೆಚ್ಚು ಜನರು ಸೋಂಕಿತರಾದರು. ನೊಯ್ಡಾದಲ್ಲಿದ್ದ ಸೀಸ್ ಫೈರ್ ಕಂಪನಿ ಉದ್ಯೋಗಿಯಿಂದ 41 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ದೆಹಲಿ ಕಾರ್ಪೋರೇಟ್ ಕಂಪನಿಯಲ್ಲಿ ಊಟ ಬಡಿಸುತ್ತಿದ್ದ ಮಹಿಳೆಯಲ್ಲಿ ಸೋಂಕು ಉಂಟಾಗಿದ್ದರಿಂದ ಕಂಪನಿಯ ನೂರಾರು ಜನರು ಗೃಹಬಂಧನದಲ್ಲಿದ್ದಾರೆ. ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಗೆ ಚಿಕಿತ್ಸೆ ನೀಡಿದ ದೆಹಲಿ ಮೊಹಲ್ಲಾ ಕ್ಲಿನಿಕ್ ವೈದ್ಯರಿಗೆ ಸೋಂಕು ಕಾಣಿಸಿಕೊಂಡಿತು. ಹೀಗಾಗಿ 900ಕ್ಕೂ ಅಧಿಕ ಜನರ ಮೇಲೆ ನಿಗಾ ಇಡಲಾಗಿದೆ.
ಚಿಕಾಗೋದ ಸೋಂಕಿತ ವ್ಯಕ್ತಿಯೊಬ್ಬ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ. ಆತನಿಂದ 15 ಜನರಿಗೆ ಕೋವಿಡ್ ವ್ಯಾಪಿಸಿತು. ಆ ಪೈಕಿ ಮೂವರು ಮೃತಪಟ್ಟರು.
ಸೂಪರ್ಸ್ಪ್ರೆಡರ್ ಎಂಬುದಕ್ಕೆ ಇಂಥದ್ದೇ ವ್ಯಾಖ್ಯಾನವಿಲ್ಲ. ಆದರೆ, ರೋಗವನ್ನು ವ್ಯಾಪಕವಾಗಿ ಹರಡಲು ಕಾರಣವಾಗುವ ಅಂಶಗಳನ್ನು ಹೀಗೆ ಕರೆಯಲಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.